ನಾವು ಗ್ಯಾರಂಟಿಗೆ ಹಣ ಕೇಳುತ್ತಿಲ್ಲ: ನಿರ್ಮಲಾ ಸೀತಾರಾಮನ್‌ ವಿರುದ್ಧ ಸಿದ್ದರಾಮಯ್ಯ ಕಿಡಿ

First Published Mar 25, 2024, 5:23 AM IST

ನಾವು ನಮ್ಮ 5 ಗ್ಯಾರಂಟಿಗಳಿಗೆ ಹಣ ಕೇಳುತ್ತಿಲ್ಲ. ನಮ್ಮ ಬಜೆಟ್‌ನಲ್ಲೇ ಗ್ಯಾರಂಟಿಗಳಿಗೆ ಸಾಕಷ್ಟು ಹಣ ನಿಗದಿ ಮಾಡಿದ್ದೇವೆ. ನಿಮ್ಮ ಕೇಂದ್ರ ಬಜೆಟ್‌ ಹಾಗೂ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ತಿಳಿಸಿದ್ದ ರಾಜ್ಯದ ಪಾಲನ್ನು ಕೇಳುತ್ತಿದ್ದೇವೆ.

ಬೆಂಗಳೂರು (ಮಾ.25): ‘ನಾವು ನಮ್ಮ 5 ಗ್ಯಾರಂಟಿಗಳಿಗೆ ಹಣ ಕೇಳುತ್ತಿಲ್ಲ. ನಮ್ಮ ಬಜೆಟ್‌ನಲ್ಲೇ ಗ್ಯಾರಂಟಿಗಳಿಗೆ ಸಾಕಷ್ಟು ಹಣ ನಿಗದಿ ಮಾಡಿದ್ದೇವೆ. ನಿಮ್ಮ ಕೇಂದ್ರ ಬಜೆಟ್‌ ಹಾಗೂ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ತಿಳಿಸಿದ್ದ ರಾಜ್ಯದ ಪಾಲನ್ನು ಕೇಳುತ್ತಿದ್ದೇವೆಯೇ ಹೊರತು ನಿಮ್ಮ ಬಳಿ ಕನ್ನಡಿಗರು ಭಿಕ್ಷೆ ಬೇಡುತ್ತಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ದೇಶದ ಹಣಕಾಸು ಸಚಿವರು ಸತ್ಯ ಮಾತನಾಡುತ್ತಾರೆಂದು ಪ್ರತಿಯೊಬ್ಬರೂ ನಿರೀಕ್ಷಿಸುತ್ತಾರೆ. ಆದರೆ ದುರದೃಷ್ಟವಶಾತ್‌ ನಮ್ಮ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಸತತವಾಗಿ ತಮ್ಮ ಲಿಖಿತ ಹೇಳಿಕೆಗಳನ್ನೇ ನಿರಾಕರಿಸಿ ಸುಳ್ಳು ಹೇಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್‌ ವಿರುದ್ಧ ಸರಣಿ ಟ್ವೀಟ್‌ (ಎಕ್ಸ್ ಖಾತೆ) ಮೂಲಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

‘ನಿರ್ಮಲಾ ಸೀತಾಮನ್ ಅವರೇ, ನಾವು ನಮ್ಮ 5 ಗ್ಯಾರಂಟಿಗಳಿಗೆ ಹಣವನ್ನು ಕೇಳುತ್ತಿಲ್ಲ. ನಮ್ಮ ಬಜೆಟ್‌ನಲ್ಲೇ ಸಾಕಷ್ಟು ಹಣ ನಿಗದಿ ಮಾಡಿದ್ದೇವೆ. ನಿಮ್ಮ ಬಜೆಟ್‌ ಹಾಗೂ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ತಿಳಿಸಿದ್ದ ಹಣವನ್ನು ಕೇಳುತ್ತಿದ್ದೇವೆ. 

ನಿಮಗೆ ಒಕ್ಕೂಟ ವ್ಯವಸ್ಥೆ ಬಗ್ಗೆ ನಂಬಿಕೆ ಅಥವಾ ಬದ್ಧತೆ ಇಲ್ಲದಿರುವ ಕಾರಣ ನಿಮಗೆ ರಾಜ್ಯಗಳ ಪರಿಕಲ್ಪನೆ ಅರ್ಥವಾಗಿಲ್ಲ. ನಮ್ಮ ತೆರಿಗೆ ಪಾಲು ನಮ್ಮ ಹಕ್ಕು. ಕನ್ನಡಿಗರು ತಮ್ಮ ಪಾಲು ಕೇಳುತ್ತಿದ್ದಾರೆಯೇ ಹೊರತು ಭಿಕ್ಷೆ ಬೇಡುತ್ತಿಲ್ಲ’ ಎಂದು ಹೇಳಿದ್ದಾರೆ.

2020-21ರ ಹದಿನೈದನೇ ಹಣಕಾಸು ಆಯೋಗದ ಮಧ್ಯಂತರ ವರದಿಯು ಮೂರು ರಾಜ್ಯಗಳಿಗೆ 6764 ಕೋಟಿ ರು. ಮಂಜೂರು ಮಾಡಿತ್ತು. ಈ ಪೈಕಿ ಕರ್ನಾಟಕಕ್ಕೆ 5495 ಕೋಟಿ ರು. ಶಿಫಾರಸು ಮಾಡಿತ್ತು. ಆದರೆ ಆ ಹಣವನ್ನು ನೀವು ತಡೆದಿದ್ದೀರಿ ಎಂದು ಟೀಕಿಸಿದ್ದಾರೆ.

click me!