Sania Mirza: ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ

First Published | Jan 19, 2022, 4:19 PM IST

ನವದೆಹಲಿ: ಭಾರತ ಕಂಡ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ಟೆನಿಸ್ (Tennis) ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. 2022ನೇ ಸಾಲಿನ WTA ಟೆನಿಸ್‌ ಸೀಸನ್‌ (2022 WTA tennis season) ಸಾನಿಯಾ ಪಾಲಿನ ಕಟ್ಟಕಡೆಯ ಟೆನಿಸ್ ವರ್ಷವಾಗಲಿದೆ. ಈ ಸೀಸನ್‌ ಬಳಿಕ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಸಾನಿಯಾ ಮಿರ್ಜಾ ಘೋಷಿಸಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಾವು ಟೆನಿಸ್‌ನಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ. 2022ರ ಆವೃತ್ತಿಯ ಬಳಿಕ ಟೆನಿಸ್‌ಗೆ ವಿದಾಯ ಪಡೆಯುವುದಾಗಿ ಸಾನಿಯಾ ತಿಳಿಸಿದ್ದಾರೆ. ಮೆಲ್ಬೊರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಂಡಿರುವ ಸಾನಿಯಾ ಮಿರ್ಜಾ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಸಾನಿಯಾ ಮಿರ್ಜಾ, ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸಾನಿಯಾ ಉಕ್ರೇನ್‌ನ ನಾಡಿಯಾ ಕಿಚೋನಾಕ್ ಜತೆಯಾಗಿ ಕಣಕ್ಕಿಳಿದಿದ್ದರು.

Latest Videos


ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್‌ ಮಹಿಳಾ ಡಬಲ್ಸ್‌ನಲ್ಲಿ ಹೊರಬಿದ್ದಿದ್ದಾರೆ. ಇದೀಗ ಗುರುವಾರ(ಜ.20)ದಂದು ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಯುಎಸ್‌ಎ ಆಟಗಾರ ರಾಜೀವ್ ರಾಮ್‌ ಜತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಸಾನಿಯಾ ಮಿರ್ಜಾ ಇದುವರೆಗೂ ಒಟ್ಟು 6 ಗ್ರ್ಯಾನ್‌ ಸ್ಲಾಂಗಳನ್ನು ಜಯಿಸಿದ್ದಾರೆ. ಈ ಪೈಕಿ ಮೂರು ಗ್ರ್ಯಾನ್‌ ಸ್ಲಾಂಗಳು ಮಹಿಳಾ ಡಬಲ್ಸ್ ವಿಭಾಗದಲ್ಲಿ ಜಯಿಸಿದ್ದರೆ, ಮತ್ತೆ ಮೂರು ಗ್ರ್ಯಾನ್‌ ಸ್ಲಾಂಗಳು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಜಯಿಸಿದ್ದಾರೆ.

ನಾನು ನಿವೃತ್ತಿಯ ತೀರ್ಮಾನಕ್ಕೆ ಬರಲು ಕೆಲವು ಕಾರಣಗಳಿವೆ. ನಾನು ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡೆ. ನಾನು ನನ್ನ ಮೂರು ವರ್ಷದ ಮಗುವಿನ ಜತೆಗೆ ಹಲವು ಕಡೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸುವುದು ಅಷ್ಟು ಸುರಕ್ಷಿತವಲ್ಲ ಎನ್ನುವುದರ ಅರಿವಿದೆ ನನಗೆ. ಈ ವಿಚಾರವನ್ನು ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ನನ್ನ ಮೊಣಕಾಲು ಇಂದು ನನ್ನನ್ನು ಸಾಕಷ್ಟು ಬಾಧಿಸುತ್ತಿದೆ. ಇದೇ ಕಾರಣಕ್ಕಾಗಿ ನಾವು ಈ ಪಂದ್ಯವನ್ನು ಸೋತೆವು ಎಂದು ಹೇಳಲಾರೆ. ಆದರೆ ಇದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯಬೇಕಾಗಬಹುದು ಎಂದು ಸಾನಿಯಾ ಹೇಳಿದ್ದಾರೆ.

ಇದರ ಜತೆಗೆ ಪ್ರತಿ ಬಾರಿಯು ಸ್ಪೂರ್ತಿಯಿಂದ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ, ದೇಹ ಕ್ಷೀಣಿಸುತ್ತಿದೆ. ನಾನು ಈ ಮೊದಲೇ ಹೇಳಿದಂತೆ ಎಲ್ಲಿಯವರೆಗೆ ನಾನು ಟೆನಿಸ್ ಎಂಜಾಯ್ ಮಾಡಲು ಸಾಧ್ಯವೋ ಅಲ್ಲಿಯವರೆಗೆ ಮಾತ್ರ ನಾನು ಟೆನಿಸ್ ಆಡಬಲ್ಲೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ತುಂಬಾ ದೀರ್ಘಕಾಲದ ವರೆಗೆ ಟೆನಿಸ್ ಕೋರ್ಟ್‌ನಲ್ಲಿ ಎಂಜಾಯ್ ಮಾಡಲು ಸಾಧ್ಯವಾಗಲಿದೆ ಎಂದು ನನಗನಿಸುತ್ತಿಲ್ಲ ಎಂದು ಹೈದರಾಬಾದ್ ಮೂಲದ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಈಗಾಗಲೇ ಹೇಳಿದಂತೆ, ಈ ಸೀಸನ್‌ನಲ್ಲಿ ನಾನು ಟೆನಿಸ್ ಮುಂದುವರೆಸುತ್ತೇನೆ. ಯಾಕೆಂದರೆ ಈ ವರ್ಷ ನಾನು ಟೆನಿಸ್ ಎಂಜಾಯ್ ಮಾಡಬಲ್ಲೆ ಎಂದೆನಿಸುತ್ತಿದೆ. ನಾನು ಕಮ್‌ಬ್ಯಾಕ್ ಮಾಡಲು ಮತ್ತಷ್ಟು ಕಠಿಣ ಪರಿಶ್ರಮ ಹಾಕುತ್ತೇನೆ ಹಾಗೂ ಫಿಟ್ ಆಗಿರಲು ಯತ್ನಿಸುತ್ತೇನೆ. ನಾನು ತೂಕ ಕಳೆದುಕೊಳ್ಳುವ ಮೂಲಕ ಹಲವು ತಾಯಂದಿರ ಪಾಲಿಗೆ ಆದರ್ಶಪ್ರಾಯಳಾಗಿದ್ದೇನೆ. ಮಗು ಪಡೆಯುವ ತಾಯಂದಿರು ತಮ್ಮ ಕನಸುಗಳನ್ನು ಕೈಬಿಡದೇ ಮುನ್ನುಗ್ಗಲು ಸಾಧ್ಯ ಎನ್ನುವುದನ್ನು ನಾನು ತೋರಿದ್ದೇನೆ ಎಂದು ಸಾನಿಯಾ ಹೇಳಿದ್ದಾರೆ.

click me!