ಬೆಂಗಳೂರು: ನಿಧಿಯಾಸೆಗೆ 900 ವರ್ಷಗಳ ಪುರಾತನ ದೇಗುಲದ ಗರ್ಭಗುಡಿ ಅಗೆದ ಆಂಧ್ರದ ರಿಯಲ್ ಎಸ್ಟೇಟ್ ಉದ್ಯಮಿ!

Published : Mar 04, 2026, 11:21 AM IST

ಬೆಂಗಳೂರಿನ HSR ಲೇಔಟ್ ಸಮೀಪದ 900 ವರ್ಷಗಳ ಇತಿಹಾಸವಿರುವ ಎಳ್ಳುಕುಂಟೆ ಗ್ರಾಮದ ಪುರಾತನ ದೇವಾಲಯದಲ್ಲಿ ನಿಧಿಗಾಗಿ ಕಿಡಿಗೇಡಿಗಳು 15 ಅಡಿ ಆಳದ ಗುಂಡಿ ತೋಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೈವಾಡವನ್ನು ಶಂಕಿಸಿದ್ದಾರೆ.  

PREV
16
900 ವರ್ಷಗಳ ಪುರಾತನ ದೇಗುಲ

ಬೆಂಗಳೂರು ನಗರದಲ್ಲಿನ ವೇಗವಾದ ನಗರೀಕರಣದ ನಡುವೆ ಮರೆತು ಹೋಗುತ್ತಿರುವ ಐತಿಹಾಸಿಕ ಪರಂಪರೆಯೊಂದಾದ ಎಳ್ಳುಕುಂಟೆ ಗ್ರಾಮ ಇದೀಗ ನಿಧಿಗಳ್ಳರ ಹಾವಳಿಯಿಂದ ಸುದ್ದಿಯಲ್ಲಿದೆ. ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದ ಕೆಳಭಾಗದಲ್ಲಿ ನಿಧಿಗಾಗಿ ಅಗೆದು ಹಾನಿ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮತ್ತು ಆತಂಕ ಹುಟ್ಟಿಸಿದೆ.

26
HSR ಲೇಔಟ್ ಸಮೀಪದಲ್ಲಿರುವ ಎಳ್ಳುಕುಂಟೆ ಗ್ರಾಮ

ನಗರದ HSR ಲೇಔಟ್ ಸಮೀಪದಲ್ಲಿರುವ ಎಳ್ಳುಕುಂಟೆ ಗ್ರಾಮ, ಬೆಂಗಳೂರಿನ 12 ಪ್ರಮುಖ ಐತಿಹಾಸಿಕ ಪ್ರದೇಶಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಗ್ರಾಮದಲ್ಲಿ ಇಂದಿಗೂ ಶತಮಾನಗಳಷ್ಟು ಹಳೆಯ ಶಿಲೆಗಳು ಕಂಡುಬರುತ್ತಿದ್ದು, ಸ್ಥಳೀಯ ನಿವಾಸಿಗಳು ಅವುಗಳನ್ನು ಭಕ್ತಿಪೂರ್ವಕವಾಗಿ ಪೂಜಿಸುತ್ತಾರೆ. ಪ್ರತಿವರ್ಷ ಇಲ್ಲಿ ಬಸವೇಶ್ವರ ಜಾತ್ರೆ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಗ್ರಾಮಸ್ಥರ ಸಂಪ್ರದಾಯ ಮತ್ತು ನಂಬಿಕೆಗಳ ಕೇಂದ್ರವಾಗಿರುವ ಈ ದೇವಾಲಯ ಈಗ ದುಸ್ಥಿತಿಗೆ ತಲುಪಿರುವುದು ವಿಷಾದನೀಯ.

36
15 ಅಡಿ ಆಳಕ್ಕೆ ಅಗೆದಿರುವುದು ಬೆಳಕಿಗೆ

ಮೂರು-ನಾಲ್ಕು ದಿನಗಳ ಹಿಂದೆ ಕಿಡಿಗೇಡಿಗಳು ನಿಧಿಯಾಸೆಯಿಂದ ದೇವರ ಪ್ರತಿಷ್ಠಾಪಿತ ಸ್ಥಳದ ಕೆಳಭಾಗದಲ್ಲಿ ಸುಮಾರು 15 ಅಡಿ ಆಳಕ್ಕೆ ಅಗೆದಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಪೂಜೆ, ಹೋಮ-ಹವನ ನಡೆಸಿದ ನಂತರ ಈ ಕೃತ್ಯ ಎಸಗಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿ ಯಾರಿಗೂ ಅನುಮಾನ ಬಾರದಂತೆ ಶೆಡ್ ನಿರ್ಮಿಸಿ, ಅದರೊಳಗೆ ಗುಪ್ತವಾಗಿ ತೋಡಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

46
10-15 ವರ್ಷಗಳ ಹಿಂದೆ ತಾಮ್ರದ ಚೆಂಬು ಪತ್ತೆಯಾಗಿತ್ತು

ಸ್ಥಳೀಯರ ಪ್ರಕಾರ, ಸುಮಾರು 10-15 ವರ್ಷಗಳ ಹಿಂದೆ ಸಮೀಪದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವ ವೇಳೆ ತಾಮ್ರದ ಚೆಂಬು ಪತ್ತೆಯಾಗಿತ್ತು ಎನ್ನಲಾಗುತ್ತಿದೆ. ಆ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಮ್ಮೆ ನಿಧಿಗಾಗಿ ತೋಡುವ ಕಾರ್ಯ ನಡೆದಿರುವುದು ಸಂಶಯಗಳಿಗೆ ಕಾರಣವಾಗಿದೆ. ಘಟನೆಯ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಹಲವರಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. HSR ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಿಂತಿರುಗಿದ್ದಾರೆ ಎನ್ನಲಾಗಿದ್ದು, ಇದುವರೆಗೆ ಯಾವುದೇ ಕಟ್ಟುನಿಟ್ಟಿನ ಕ್ರಮ ಗೋಚರಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

56
ಆಂಧ್ರ ಪ್ರದೇಶ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೈವಾಡವಿರುವ ಶಂಕೆ

ಈ ಕೃತ್ಯದಲ್ಲಿ ಸುಧಾಕರ್ ಎಂಬ ವ್ಯಕ್ತಿಯ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆಂಧ್ರ ಪ್ರದೇಶ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಸುಧಾಕರ್ ದೇವಸ್ಥಾನದ ಜಾಗವನ್ನು ಕಬಳಿಸಿರುವ ಆರೋಪವೂ ಕೇಳಿಬರುತ್ತಿದೆ. ದೇವಸ್ಥಾನಕ್ಕೆ ಮೀಸಲಾಗಿದ್ದ ಜಾಗವನ್ನು ಬಿಡದೆ, ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳ ನಡುವೆ ದೇವಾಲಯವನ್ನು ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಗೆ ತಳ್ಳಲಾಗಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.

66
ಎಳ್ಳುಕುಂಟೆ ಪುರಾತನ ಗ್ರಾಮಗಳ ಸಂರಕ್ಷಣೆ ಮುಖ್ಯ

ನಗರದ ವಿಸ್ತರಣೆಯ ನಡುವೆ ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಎಳ್ಳುಕುಂಟೆಯಂತಹ ಪುರಾತನ ಗ್ರಾಮಗಳ ಸಂರಕ್ಷಣೆ ಮತ್ತು ದೇವಾಲಯಗಳ ರಕ್ಷಣೆಗಾಗಿ ಸಂಬಂಧಪಟ್ಟ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸುವ ಅಗತ್ಯವೂ ಎದುರಾಗಿದೆ. ಐತಿಹಾಸಿಕ ಪರಂಪರೆ ಮತ್ತು ಧಾರ್ಮಿಕ ಭಾವನೆಗಳನ್ನು ಕಾಪಾಡುವುದು ಸಮಾಜದ ಹಾಗೂ ಆಡಳಿತದ ಜವಾಬ್ದಾರಿಯಾಗಿದೆ. ಎಳ್ಳುಕುಂಟೆ ಗ್ರಾಮದ ಈ ಘಟನೆ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Read more Photos on
click me!

Recommended Stories