ಯಾದಗಿರಿ: ನಕಲಿ ಹತ್ತಿಬೀಜ ಮಾರಾಟ, ಮುಂಚೂಣಿಯಲ್ಲಿ ಗುರುಮಠಕಲ್‌ ?

First Published | Jun 21, 2021, 2:25 PM IST

ಮೊಗುಲಪ್ಪ ಬಿ. ನಾಯಕಿನ್‌

ಗುರುಮಠಕಲ್‌(ಜೂ.21):  ತೆಲಂಗಾಣದ ಗಡಿಭಾಗಕ್ಕಂಟಿಕೊಂಡಿರುವ ಗುರುಮಠಕಲ್‌ ಪಟ್ಟಣದಲ್ಲಿ ನಕಲಿ ಹತ್ತಿ ಬೀಜಗಳ ಮಾರಾಟ ದಂಧೆ ವಿರುದ್ಧ ಬೇಟೆಗಿಳಿದಿರುವ ತೆಲಂಗಾಣ ಪೊಲೀಸರು, ಈವರೆಗೆ ನಾಲ್ವರನ್ನು ಬಂಧಿಸಿ ವಿಕಾರಾಬಾದ್‌ ಜೈಲಿನಲ್ಲಿಟ್ಟಿದ್ದಾರೆ. ಇನ್ನೂ ಅನೇಕ ದಂಧೆಕೋರರು ಗುರುಮಠಕಲ್‌ ಪಟ್ಟಣದಲ್ಲಿದ್ದು, ಅವರ ಶೋಧಕ್ಕಾಗಿ ತೆಲಂಗಾಣ ಪೊಲೀಸರು ಜಾಲ ಬೀಸಿದ್ದಾರೆ.
 

ಗುರುಮಠಕಲ್‌ನಲ್ಲಿ ಕಳೆದ ವಾರಗಳಿಂದ ಎರಡು ದಿನಕ್ಕೊಮ್ಮೆ ನಕಲಿ ಹತ್ತಿ ಬೀಜ ಮಾರಾಟ ಮಾಡುವವರನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ತೆಲಂಗಾಣ ಪೊಲೀಸರು, ಇನ್ನೆರಡು ದಿನಗಳಲ್ಲಿ ಮತ್ತಷ್ಟೂ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ.
ಈ ಮಧ್ಯೆ, ನಕಲಿ ದಂಧೆಯಲ್ಲಿ ಶಾಮೀಲಿಲ್ಲದಿದ್ದರೂ, ಪಟ್ಟಣದ ವ್ಯಾಪಾರಿಯೊಬ್ಬರನ್ನು ಗಡಿಭಾಗದವರೆಗೆ ಕರೆದುಕೊಂಡ ಹೋದ ತೆಲಂಗಾಣ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಮಾತುಗಳು ಇಲ್ಲಿನ ವ್ಯಾಪಾರಿಗಳ ವಲದಯಲ್ಲಿ ಕೇಳಿ ಬರುತ್ತಿವೆ. ಇದೇ ಜೂನ್‌ 7 ರಂದು ಸಂಜೆ ತೆಲಂಗಾಣ ಪೊಲೀಸರು ಗುರುಮಠಕಲ್‌ ಪಟ್ಟಣಕ್ಕೆ ಬಂದು, ನಕಲಿ ಬೀಜ ಮಾರಾಟದ ವಿಚಾರಣೆಗಾಗಿ ಬನ್ನಿ ಎಂದು ಇಬ್ಬರನ್ನು ವಾಹನದಲ್ಲಿ ಕರೆದುಕೊಂಡು ಹೋಗಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರಂತೆ. ಇಲ್ಲಿನ ವ್ಯಾಪಾರಿಗಳ ವಲಯದಲ್ಲಿ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
Tap to resize

ನಕಲಿ ಹತ್ತಿ ಬೀಜಗಳನ್ನು ಮಾರಾಟ ಮಾಡುವವರನ್ನು ವಶಕ್ಕೆ ಪಡೆಯಲು ಕೊಡಂಗಲ್‌ ಪಿಎಸ್‌ಐ ಜೂ.19ರಂದು ನಮ್ಮ ಸಹಾಯವನ್ನು ಯಾಚಿಸಿದ್ದರು. ಆದರೆ, ಅದಕ್ಕಿಂತ ಮುಂಚೆ ಬಂ​ಧಿಸಿದ್ದು ನಮ್ಮ ಗಮನಕ್ಕೆ ಬಂದಿ​ಲ್ಲ ಎಂಬುದಾಗಿ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಕಲಿ ಬಿತ್ತನೆ ಬೀಜಗಳ ಬಗ್ಗೆ ತೆಲಂಗಾಣದ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ​ಯನ್ನು ಆಧರಿಸಿ, ಅಲ್ಲಿನ ವಿಕಾರಾಬಾದ್‌ ಜಿಲ್ಲೆಯ ಕೊಡಂಗಲ್‌ ಕೃಷಿ ಅ​ಧಿಕಾರಿ ಎ. ಬಾಲಜಿ ಪ್ರಸಾದ್‌ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಕೊಡಂಗಲ್‌ ಮಂಡಲ ವ್ಯಾಪ್ತಿಯ ಅಂಗಡಿ ರಾಯಚೂರ್‌ ಗ್ರಾಮದ ರೈತ ಇಂಗುಲ ಚಿನ್ನಬಾಲಪ್ಪ ಬಸ್ಸಪ್ಪ ಮನೆಗೆ ದಾಳಿ ನಡೆಸಿತ್ತು.
ಅಲ್ಲಿ ನಕಲಿ ಹತ್ತಿ ಬೀಜಗಳನ್ನು ವಶಪಡಿಸಿಕೊಂಡು ಕೊಡಂಗಲ್‌ ಪೊಲೀಸ್‌ ಠಾಣೆಯಲ್ಲಿ ಜೂನ್‌ 8 ರಂದು ದೂರು ದಾಖಲಿಸಿದ್ದಾರೆ. ಕೃಷಿ ಅಧಿ​ಕಾರಿ ದೂರು ಆಧರಿಸಿ ಚಿನ್ನಬಾಲಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ಅವುಗಳನ್ನು ಗುರುಮಠಕಲ್‌ ರಸಗೊಬ್ಬರ ಅಂಗಡಿಗಳಲ್ಲಿ ಪಡೆದುಕೊಂಡಿದ್ದೇನೆಂದು ತಿಳಿಸಿದ್ದಾನೆನ್ನಲಾಗಿದೆ.
ಇದನ್ನು ಖಚಿತ ಪಡಿಸಿಕೊಂಡು, ಜೂನ್‌ 7 ರಂದು ಇಬ್ಬರನ್ನು ವಶಪಡಿಸಿಕೊಂಡು ಜೂನ್‌9 ರಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅನ್ನವರಂ ಗ್ರಾಮದ ರೈತ ಮಹಿಳೆ ನಾಗೇಂದ್ರಮ್ಮ ಹೇಳಿಕೆ ಪ್ರಕಾರ, ಜೂನ್‌ 18 ರಂದು ಒಬ್ಬರನ್ನು ಮತ್ತು ಜೂನ್‌ 20 ರಂದು ಇನ್ನೊಬ್ಬರನ್ನು ಕೊಡಂಗಲ್‌ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೆರೆಡು ದಿನಗಳಲ್ಲಿ ಮತ್ತಷ್ಟೂಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಹೋಗುತ್ತೇನೆ ಎಂದು ತೆಲಂಗಾಣ ಪಿಎಸ್‌ಐ ಅಪ್ಪಯ್ಯ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.
ತೆಲಂಗಾಣದಲ್ಲಿ ನಿಷೇಧಿತ ಬಿತ್ತನೆ ಬೀಜಗಳು ಗುರುಮಠಕಲ್‌ನಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಜೂ.20 ರಂದು ‘ಕನ್ನಡಪ್ರಭ’ದಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಯೊಬ್ಬರು, ವರದಿಯಿಂದ ಹತ್ತಿ ಬಿತ್ತನೆ ಮಾಡಿದ ರೈತರು ಬೆಚ್ಚಿ ಬೀಳುತ್ತಾರೆ ಎಂದು ಪ್ರತಿಕ್ರಿಯಿಸಿರುವುದು ಅಚ್ಚರಿ ಮೂಡಿಸಿದೆ. ನಕಲಿ ಬಿತ್ತನೆ ಬೀಜಗಳ ಮಾರಾಟ ದಂಧೆಯಲ್ಲಿ ಗುರುಮಠಕಲ್‌ ಹೆಸರು ತೆಲಂಗಾಣದಲ್ಲಿ ಪ್ರಮುಖವಾಗಿ ಕೇಳಿಬಂದರೂ, ಇಲ್ಲಿನ ಅಧಿಕಾರಿಯ ಕಾರ್ಯವೈಖರಿ ಅನುಮಾನಕ್ಕೂ ಕಾರಣವಾಗಿದೆ.
ತೆಲಂಗಾಣ ಪೊಲೀಸರು ಗುರುಮಠಕಲ್‌ನ ರಸಗೊಬ್ಬರ ಅಂಗಡಿ ಮಾಲೀಕರನ್ನು ಕಾರಣವಿಲ್ಲದೆ ಟಾರ್ಗೆಟ್‌ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಂಪನಿ ನೀಡಿರುವ ಹತ್ತಿ ಬೀಜಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದೇವೆ. ತಪ್ಪುಗಳಿದ್ದರೆ ಕಂಪನಿಯನ್ನು ವಿಚಾರಿಸಿಕೊಳ್ಳಬೇಕು. ಯಾರೋ ಮಾಡಿದ ತಪ್ಪನ್ನು ನಮ್ಮಗಳ ಮೇಲೆ ಹಾಕಿದರೆ ರೈತರ ಗತಿಯೇನು ಎಂದು ಗುರುಮಠಕಲ್‌ ಪಟ್ಟಣದ ಹೆಸರೇಳಲಿಚ್ಛಿಸದ ರಸಗೊಬ್ಬರ ಅಂಗಡಿ ಮಾಲೀಕರು ತಿಳಿಸಿದ್ದಾರೆ.

Latest Videos

click me!