ಅಯೋಧ್ಯೆ ಶ್ರೀರಾಮ ಮಂದಿರ ದೇಣಿಗೆಯಲ್ಲಿ ಅಕ್ರಮ ಆರೋಪ: ಮೌನ ಮುರಿದ ಶಿಲ್ಪಿ ಅರುಣ್ ಯೋಗಿರಾಜ್!

Published : Jun 26, 2026, 06:55 PM IST

ಅಯೋಧ್ಯೆ ರಾಮ ಮಂದಿರದ ದೇಣಿಗೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸರಳತೆಯನ್ನು ಶ್ಲಾಘಿಸಿದ ಅವರು, ಈ ಗೊಂದಲದ ಬಗ್ಗೆ ತನಿಖೆ ಕುರಿತಾಗಿ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.

PREV
16

ಮೈಸೂರು (ಜೂ.26): ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿರುವ ರಾಮಲಲ್ಲಾ ಮೂರ್ತಿ ಕೆತ್ತನೆಯ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಇತ್ತೀಚೆಗೆ ದೇವಸ್ಥಾನದ ದೇಣಿಗೆ ವಿಚಾರದಲ್ಲಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳು ಕೋಟ್ಯಂತರ ಭಕ್ತರ ನಂಬಿಕೆಗೆ ಮತ್ತು ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ.

26

ಕಣ್ಣಾರೆ ಕಂಡಿದ್ದ ದೃಶ್ಯಗಳನ್ನು ನೆನಪಿಸಿಕೊಂಡ ಶಿಲ್ಪಿ:

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಅರುಣ್ ಯೋಗಿರಾಜ್, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಸಮಯದಲ್ಲಿ ತಾವು ಕಂಡ ದೃಶ್ಯಗಳನ್ನು ಹಂಚಿಕೊಂಡರು. 'ದೇವಸ್ಥಾನಕ್ಕೆ ದೇಣಿಗೆ ನೀಡುವವರ ಸಂಖ್ಯೆ ಅಪಾರವಾಗಿತ್ತು. ಕೇವಲ ಸಾಮಾನ್ಯ ಜನರಲ್ಲ, ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಮತ್ತು ವಿಐಪಿಗಳು ಚೆಕ್ ಹಿಡಿದು ಸಾಲಿನಲ್ಲಿ ನಿಂತು ದೇಣಿಗೆ ನೀಡುತ್ತಿದ್ದರು. ಅಂತಹ ಭಕ್ತಿ ಮತ್ತು ಸಮರ್ಪಣಾ ಮನೋಭಾವವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈಗ ಇಂತಹ ಆರೋಪಗಳು ಕೇಳಿಬರುತ್ತಿರುವುದು ನಿಜಕ್ಕೂ ದುರದೃಷ್ಟಕರ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

36

ಚಂಪತ್ ರಾಯ್ ಸರಳತೆ ಮತ್ತು ಪಾರದರ್ಶಕತೆ:

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಬಗ್ಗೆ ಮಾತನಾಡಿದ ಯೋಗಿರಾಜ್, 'ಅವರು ಅತ್ಯಂತ ಸರಳ ವ್ಯಕ್ತಿ. ಅಯೋಧ್ಯೆಯ ಒಂದು ಪುಟ್ಟ ಕೋಣೆಯಲ್ಲಿ, ಎಸಿ ಕೂಡ ಇಲ್ಲದೆ ಕೇವಲ ಫ್ಯಾನ್ ಹಾಕಿಕೊಂಡು ದಿವಾನ್ ಮಂಚದ ಮೇಲೆ ಮಲಗುತ್ತಿದ್ದರು. ಅವರ ನಡವಳಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇತ್ತು. ಯಾವುದೇ ವಿಐಪಿಗಳು ರಹಸ್ಯವಾಗಿ ಮಾತನಾಡಲು ಬಂದರೆ ಅವರು ಒಪ್ಪುತ್ತಿರಲಿಲ್ಲ. ಏನೇ ಇದ್ದರೂ ಎಲ್ಲರ ಮುಂದೆ ಓಪನ್ ಆಗಿ ಮಾತನಾಡಿ ಎನ್ನುತ್ತಿದ್ದರು. ಪ್ರತಿಯೊಂದು ನಿರ್ಧಾರವನ್ನೂ ಎಲ್ಲರನ್ನೂ ಒಟ್ಟಿಗೆ ಕೂರಿಸಿಯೇ ತೆಗೆದುಕೊಳ್ಳುತ್ತಿದ್ದರು' ಎಂದು ಅವರ ಪರವಾಗಿ ಮಾತನಾಡಿದರು.

46

ತಂತ್ರಜ್ಞಾನದ ಬಳಕೆ ಮತ್ತು ಅಕ್ರಮದ ಸಂಶಯ:

ದೇಣಿಗೆ ಸಂಗ್ರಹದಲ್ಲಿ ಹೈದರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯು ಪ್ರತಿಯೊಂದು ರೂಪಾಯಿಯನ್ನೂ ಆನ್‌ಲೈನ್ ಮೂಲಕ ಟ್ರ್ಯಾಕ್ ಮಾಡುತ್ತಿತ್ತು. ಹತ್ತು ರೂಪಾಯಿ ದೇಣಿಗೆ ನೀಡಿದರೂ ಕೂಡಲೇ ಡಿಜಿಟಲ್ ರಶೀದಿ ಮೊಬೈಲ್‌ಗೆ ಬರುತ್ತಿತ್ತು. ಆದರೆ, ಟ್ರಸ್ಟ್ ಬೆಳೆಯುತ್ತಿದ್ದಂತೆ ಕೆಲವು ಹಂತಗಳಲ್ಲಿ ನಿಯಂತ್ರಣ ತಪ್ಪಿರಬಹುದು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ಹಣ ದುರುಪಯೋಗ ಮಾಡಿಕೊಂಡಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.

56

ತನಿಖೆಗೆ ಆಗ್ರಹ ಮತ್ತು ಎಫ್‌ಐಆರ್:

ಹಣದ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಲು ಸ್ವತಃ ಚಂಪತ್ ರಾಯ್ ಅವರೇ ಎಸ್‌ಐಟಿ (SIT) ತನಿಖೆಗೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. 'ಈ ಆರೋಪಗಳು ಗಿಡಕ್ಕೆ ಬಂದ ರೋಗದಂತೆ, ತನಿಖೆಯ ಮೂಲಕ ಈ ರೋಗ ವಾಸಿಯಾಗಬೇಕು. ಭಕ್ತರಿಗೆ ಸತ್ಯಾಂಶ ಏನೆಂದು ತಿಳಿಯಬೇಕು' ಎಂದು ಅರುಣ್ ಯೋಗಿರಾಜ್ ಒತ್ತಾಯಿಸಿದರು.

66

ಕೊನೆಯದಾಗಿ, 'ಹಣದ ವಿಷಯದಲ್ಲಿ ದೇವರನ್ನು ಅಳೆಯಬಾರದು. ನಾವು ನೀಡುವ ಹಣದಲ್ಲಿ ಭಕ್ತಿ ಇರುವುದಿಲ್ಲ, ಅದು ಕೇವಲ ವ್ಯವಸ್ಥೆಯ ಭಾಗ. ಒಬ್ಬ ಶಿಲ್ಪಿ ತನ್ನ ಜೀವನೋಪಾಯಕ್ಕಾಗಿ ಸಂಸಾರಸ್ಥನಾಗಿ ಹಣ ಪಡೆಯುತ್ತಾನೆಯೇ ಹೊರತು, ಯಾರೂ ಹಣ ಕೊಟ್ಟು ದೇವರನ್ನು ಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳಿಂದ ರಾಮನ ಮೇಲಿರುವ ನನ್ನ ಭಕ್ತಿ ಎಂದಿಗೂ ಕಮ್ಮಿಯಾಗುವುದಿಲ್ಲ' ಎಂದು ಹೇಳಿದರು.

Read more Photos on
click me!

Recommended Stories