ರಾಯಚೂರಿನಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಯೊಂದನ್ನು ಕೊಪ್ಪಳ ಮೂಲದ ಯುವತಿ ತಡೆದಿದ್ದಾಳೆ. ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸಿ ನಂತರ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಯತ್ನಿಸಿದ ಪ್ರಿಯಕರನ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯ ನಾಟಕವಾಡಿ ಮೋಸ ಮಾಡಿದ ಆರೋಪದ ಮೇಲೆ ಯುವಕನೊಬ್ಬನ ಅದ್ಧೂರಿ ಮದುವೆಯನ್ನು ಸಂತ್ರಸ್ತ ಯುವತಿ ತಡೆದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಕೊಪ್ಪಳ ಮೂಲದ ಯುವತಿಯ ಕಣ್ಣೀರ ಕಥೆ ಇದಾಗಿದ್ದು, ಸದ್ಯ ಪ್ರಿಯಕರನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
26
ಪ್ರೀತಿ, ದೋಖಾ ಮತ್ತು ಗರ್ಭಪಾತದ ದುರಂತ
ಘಟನೆಯ ಪ್ರಮುಖ ಆರೋಪಿ ರಾಯಚೂರು ಮೂಲದ ರಿಷಬ್. ಸಂತ್ರಸ್ತ ಯುವತಿ ಕೊಪ್ಪಳ ಮೂಲದವರಾಗಿದ್ದು, ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಇಬ್ಬರ ಪರಿಚಯವಾಗಿದೆ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆ ಬಳಿಕ ಪ್ರೀತಿಯ ಹೆಸರಿನಲ್ಲಿ ಯುವಕ ರಿಷಬ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
36
ತಾಳಿ ಕಟ್ಟಿದ ಹುಡುಗಿ ಬಿಟ್ಟು ಮತ್ತೊಂದು ಮದುವೆ
ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಸಂತ್ರಸ್ತೆಯಿಂದ ಕೇಳಿ ಬಂದಿದೆ. ಬಳಿಕ ಆರೋಪಿ ರಿಷಬ್ ದೇವಸ್ಥಾನವೊಂದರಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ, ನಂತರ ಆಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ (Avoid) ಬೇರೊಂದು ಯುವತಿ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ.
ಯುವಕ ರಿಷಬ್ ಇಂದು (ಡಿ.12) ರಾಯಚೂರು ನಗರದಲ್ಲಿ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಸಕಲ ಸಿದ್ಧತೆ ಮಾಡಿಕೊಂಡಿದ್ದ. ಈತನ ಮೋಸದ ಜಾಲಕ್ಕೆ ಸಿಲುಕಿದ್ದ ಸಂತ್ರಸ್ತೆಗೆ ತನ್ನ ಪ್ರಿಯಕರನ ಮದುವೆಯ ಆಮಂತ್ರಣ ಪತ್ರಿಕೆಯು ಇನ್‌ಸ್ಟಾಗ್ರಾಂ ಮೂಲಕ ತಲುಪಿದೆ. ತಕ್ಷಣವೇ ಎಚ್ಚೆತ್ತ ಯುವತಿ, ಕೊಪ್ಪಳದಿಂದ ನೇರವಾಗಿ ರಾಯಚೂರಿಗೆ ಓಡೋಡಿ ಬಂದಿದ್ದಾಳೆ.
56
ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್
ನೇರವಾಗಿ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ ಸಂತ್ರಸ್ತೆ, ತನಗೆ ಆದ ಅನ್ಯಾಯವನ್ನು ಕುಟುಂಬದ ಸದಸ್ಯರು ಹಾಗೂ ನೆರೆದಿದ್ದ ಅತಿಥಿಗಳ ಮುಂದೆ ಬಿಚ್ಚಿಟ್ಟಿದ್ದಾಳೆ. ಈ ಕಾರಣದಿಂದ ಮದುವೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಕೂಡಲೇ ಮಧ್ಯ ಪ್ರವೇಶಿಸಿದ ಸ್ಥಳೀಯರು ಮತ್ತು ಪೊಲೀಸರು ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
66
ಯುವಕನ ಮೇಲೆ ಎಫ್‌ಐಆರ್
ಸಂತ್ರಸ್ತ ಯುವತಿಯ ದೂರಿನ ಅನ್ವಯ, ರಾಯಚೂರು ಮೂಲದ ಯುವಕ ರಿಷಬ್ ವಿರುದ್ಧ ಲವ್, ಸೆಕ್ಸ್, ಮ್ಯಾರೇಜ್ ದೋಖಾ ಆರೋಪದ ಮೇಲೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಂಬಿಸಿ, ಮೋಸ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಘಟನೆ ರಾಯಚೂರು ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.