ಬಳ್ಳಾರಿ: ಬಡ ಶಿಕ್ಷಕಿಗೆ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಶಿಷ್ಯರು!

First Published | Sep 7, 2020, 8:37 AM IST

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಸೆ.07): ಬಡ ಶಿಕ್ಷಕಿಯ ಸಂಕಷ್ಟಕ್ಕೆ ಮಿಡಿದ ಹಳೆ ವಿದ್ಯಾರ್ಥಿಗಳು 10 ಲಕ್ಷ ವೆಚ್ಚ​ದಲ್ಲಿ ಹೊಸ ಮನೆ ಕಟ್ಟಿಸಿಕೊಟ್ಟಿದ್ದಾರೆ.ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಬಳ್ಳಾರಿ ಜಿಲ್ಲೆ. 

ಹೌದು, ಆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರುವ ನೆಪದಲ್ಲಿ ‘ಗುರುವಂದನಾ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗುರುವಂದನಾ ಕಾರ್ಯಕ್ರಮಕ್ಕೆ ಶಿಕ್ಷಕಿಯನ್ನು ಆಹ್ವಾನಿಸಲು ಮನೆಯ ಮುಂದೆ ನಿಂತಾಗ ಆ ಶಿಕ್ಷಕಿಯ ಸ್ಥಿತಿ ಕಂಡು ಮಮ್ಮಲ ಮರುಗಿದರಲ್ಲದೆ, ನಮಗೆ ಅಕ್ಷರ ಕಲಿಸಿದ ಶಿಕ್ಷಕಿ ಹೀಗಿರಲು ನಾವು ಬಿಡುವುದಿಲ್ಲ ಎಂದು ನಿರ್ಧರಿಸಿದರು. ಪರಿಣಾಮ ಕೆಲವೇ ತಿಂಗಳಲ್ಲಿ ಲಕ್ಷಾಂತರ ಮೌಲ್ಯದ ಮನೆ ನಿರ್ಮಾಣವಾಯಿತು. ಹಳೆಯ ವಿದ್ಯಾರ್ಥಿಗಳ ಗುರುಭಕ್ತಿ ಆ ಬಡ ಶಿಕ್ಷಕಿಯ ಬದುಕೇ ಬದಲಿಸಿತು!
ಇದು ಅಕ್ಷರ ಕಲಿಸಿದ ಶಿಕ್ಷಕಿಯ ಆರ್ಥಿಕ ಸಂಕಷ್ಟ ಕಂಡ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಮೌಲ್ಯದ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಕಥೆ.
Tap to resize

ನಗರದ ರಾಮನಗರ ನಿವಾಸಿ ಪರಿಮಳಾ ಎಂಬವರು ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ‘ಸಿರುಗುಪ್ಪ ಎಜ್ಯುಕೇಶನ್‌ ಸೊಸೈಟಿ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ 1985ರಿಂದ 1996ರ ವರೆಗೆ ಸೇವೆ ಸಲ್ಲಿಸಿದ್ದರು. ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಈ ಶಿಕ್ಷಕಿ ಮದುವೆಯೂ ಆಗದೆ ಸೇವೆಯಿಂದ ನಿವೃತ್ತರಾದ ಬಳಿಕ ನಗರದಲ್ಲಿ ತಮ್ಮದೇ ಪುಟ್ಟದೊಂದು ಜಾಗದಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು.
1993ರ ಬ್ಯಾಚ್‌ನ 10ನೇ ತರಗತಿ ವಿದ್ಯಾರ್ಥಿಗಳು ಕಳೆದ ವರ್ಷ ಅಕ್ಟೋಬರ್‌ 13ರಂದು ಸಿರುಗುಪ್ಪದ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರಲ್ಲದೆ, ಕನ್ನಡ ಶಿಕ್ಷಕಿ ಪರಿಮಳಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಮನೆ ಹುಡುಕಿಕೊಂಡು ಬಳ್ಳಾರಿಗೆ ಬಂದಾಗ ಅವರು ಜೋಪಡಿಯಲ್ಲಿ ವಾಸ ಮಾಡುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ.
ಅಲ್ಲದೆ, ಶಿಕ್ಷಕಿ ಪರಿಮಳಾ ಅವರ ಆರೋಗ್ಯವೂ ಸ್ಥಿರವಾಗದಿರುವುದು ಕಂಡಿದೆ. ಕೂಡಲೇ ಶಿಕ್ಷಕಿಗೆ ಚಿಕಿತ್ಸೆ ಕೊಡಿಸಿದ್ದಾರಲ್ಲದೆ, ಗುರುವಂದನಾ ಕಾರ್ಯಕ್ರಮದ ಬಳಿಕ ಹಳೆಯ ವಿದ್ಯಾರ್ಥಿಗಳು ಮಾತನಾಡಿಕೊಂಡು ತಮ್ಮ ಕೈಲಾದ ಸಹಾಯ ಮಾಡಿ 10 ಲಕ್ಷಗಳನ್ನು ಜೋಡಿಸಿದ್ದಾರಲ್ಲದೆ, ಜೋಪಡಿಯನ್ನು ತೆರವುಗೊಳಿಸಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಶಿಕ್ಷಕಿಯ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಪರಿಮಳಾ ಟೀಚರ್‌ ಕನ್ನಡ ಶಿಕ್ಷಕರಾಗಿದ್ದವರು, ಅವರಿಂದ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.
ಗುರುವಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರ ಮನೆಗೆ ಹೋಗಿದ್ದಾಗ ಅವರ ಸ್ಥಿತಿ ಕಂಡು ತೀವ್ರ ನೊಂದುಕೊಂಡೆವು. ಎಲ್ಲರೂ ಮಾತನಾಡಿಕೊಂಡು ಕೈಲಾದ ಹಣ ಜೋಡಿಸಿ ಮನೆ ನಿರ್ಮಿಸಿದೆವು. ಕಳೆದ ಫೆಬ್ರವರಿಯಲ್ಲಿ ಮನೆ ನಿರ್ಮಿಸುವ ಕಾರ್ಯ ಶುರುವಾಯಿತು. ಹತ್ತು ದಿನಗಳ ಹಿಂದೆಯಷ್ಟೇ ಗೃಹಪ್ರವೇಶ ಕಾರ್ಯ ನಡೆಯಿತು ಎಂದು ಮನೆ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿ ವಹಿಸಿದ್ದ ಹಳೆಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಮಹ್ಮದ್‌ ಶಫಿ ತಿಳಿಸಿದ್ದಾರೆ.

Latest Videos

click me!