ಯಲಬುರ್ಗಾ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೀಲಪ್ಪ ಎಚ್. ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಿಂದ ಪ್ರತಿ ದಿನ 30 ಕಿ.ಮೀ. ಸೈಕಲ್ ತುಳಿದು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದಾರೆ. ಸಂಜೆ ಡ್ಯೂಟಿ ಮುಗಿದ ಬಳಿಕ ಮತ್ತೆ 30 ಕಿ.ಮೀ. ಸೈಕಲ್ ತುಳಿದು ವಾಪಸ್ ಗ್ರಾಮಕ್ಕೆ ತೆರಳುತ್ತಾರೆ.
ನಿಡಗುಂದಿಯಲ್ಲಿ ವಾಸ ಮಾಡುತ್ತಿರುವ ನೀಲಪ್ಪ ಎಚ್ ಈ ಮೊದಲು ಬಸ್ ಮೂಲಕ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದರು.
ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದೇ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಅವರಿಗೆ ಬಸ್ ಸಿಗುತ್ತಿಲ್ಲ. ಖಾಸಗಿ ವಾಹನಗಳ ಸಂಚಾರವೂ ಇಲ್ಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಂಜಾನೆ 5.30 ಕ್ಕೆ ಸೈಕಲ್‌ನಲ್ಲಿ ಹೊರಡುವ ಅವರು 7 ಗಂಟೆಗೆ ಯಲಬುರ್ಗಾಕ್ಕೆ ಕರ್ತವ್ಯಕ್ಕೆ ಆಗಮಿಸುತ್ತಾರೆ.
ನಮ್ಮ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುವ ನೀಲಪ್ಪ ಅತ್ಯಂತ ಕ್ರಿಯಾಶೀಲ ವ್ಯಕ್ತಿ, ಸಮಯ ಪ್ರಜ್ಞೆ ಇಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಾನೆ. ರಜೆ ತೆಗೆದುಕೊಂಡಿರುವುದು ಬಹಳ ವಿರಳ. ಇತರ ನೌಕರರು ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯ ರ್ನಿಹಿಸಬೇಕು ಎಂದು ಯಲಬುರ್ಗಾ ಸಾರಿಗೆ ಡಿಪೋ ಮ್ಯಾನೇಜರ್ ರಮೇಶ ಚಿಣಗಿ ಅವರು ಹೇಳಿದ್ದಾರೆ.
ನಮ್ಮ ವೃತ್ತಿಯಲ್ಲಿ ಸದಾ ಶ್ರದ್ಧೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸಿಗುವ ತೃಪ್ತಿಕ್ಕಿಂತ ಬೇರೊಂದಿಲ್ಲ ಎಂದು ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್ ಅವರು ತಿಳಿಸಿದ್ದಾರೆ.