ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ಭಾನುವಾರ ನೂತನ ಗ್ರಾಮೀಣ ಗೋದಾಮು, ವಾಣಿಜ್ಯ ಮಳಿಗೆ, ಬಸ್ ತಂಗುದಾಣ, ಜಲಾಗಾರ ಕಟ್ಟಡಗಳ ಉದ್ಘಾಟನೆ ನಂತರ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ
ನಾನು ಕೂಡ ಒಬ್ಬ ರೈತನ ಮಗ, ಅದಕ್ಕಾಗಿ ಕೃಷಿ ಖಾತೆಯನ್ನು ಇಚ್ಛೆ ಪಟ್ಟು ಪಡೆದುಕೊಂಡಿದ್ದೇನೆ, ರೈತನಲ್ಲಿ ಆತ್ಮ ವಿಶ್ವಾಸ ತುಂಬುವ ಸಲುವಾಗಿ ನನ್ನ ಜನ್ಮ ದಿನದಂದು ರೈತರೊಂದಿಗೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದೇನೆ ಎಂದ ಸಚಿವರು
ಕಳೆದ 10 ತಿಂಗಳಲ್ಲಿ 30 ಜಿಲ್ಲೆಗಳನ್ನು ಭೇಟಿ ಮಾಡಿ ರೈತರ ಸಮಸ್ಯೆ ಆಲಿಸಿದ್ದೇನೆ, ರಾಜ್ಯದ ತುಂಬೆಲ್ಲಾ ರೈತರನ್ನು ಭೇಟಿ ಮಾಡಿದ್ದು ಕೋಲಾರದ ಕೃಷಿ ಪದ್ಧತಿ ಮೆಚ್ಚುವಂತಾಗಿದೆ. ಅಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಿದ್ದು ಬಹುಬೆಳೆ ಪದ್ಧತಿ ಅನುಸರಿಸುವರು. ನಮ್ಮ ಭಾಗದ ರೈತರು ಇದನ್ನು ಅನುಸರಿಸಬೇಕು ಎಂದರು.
ಈ ಮೊದಲು ಮಾಸೂರು ಗ್ರಾಮದಲ್ಲಿ ಕುಮದ್ವತಿ ನದಿಗೆ ಅಡ್ಡಲಾಗಿ ಮಾಸೂರು ಮತ್ತು ಮೇದೂರು ಗ್ರಾಮದಲ್ಲಿ ಜೊತೆಗೆ ಹಿರೇಮಾದಾಪುರ ತೋಟಗಂಟಿ ಗ್ರಾಮದಲ್ಲಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ತಾಲೂಕಿನ ಚಿಕ್ಕಬ್ಬಾರ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಭವನದ ಶಂಕುಸ್ಥಾಪನೆ, ಕುಡುಪಲಿ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆ ಹೀಗೆ ವಿವಿಧ ಕಾರ್ಯಕ್ರಮಗಳು ಬೆಳಗ್ಗೆ 10ರಿಂದ ಸಂಜೆಯವರೆಗೆ ಜರುಗಿದವು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆ ಅದರಲ್ಲೂ ರೈತಾಪಿ ವರ್ಗದ ಆರ್ಥಿಕ ಸುಭದ್ರತೆಗಾಗಿ ರಟ್ಟೀಹಳ್ಳಿ ತಾಲೂಕಿನಲ್ಲಿ ಕೆರೆ ನೀರು ತುಂಬಿಸುವದು, ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಮಾಡುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರ ಈ ರೀತಿಯ ಅನೇಕ ಸೌಲಭ್ಯ ನೀಡಿದ್ದು ಅಭಿವೃದ್ಧಿ ದಿಕ್ಕಿನಲ್ಲಿ ಹೊಸ ಹೆಜ್ಜೆ ಇಟ್ಟಂತಾಗಿದೆ ಎಂದು ಹೇಳಿದರು.
ಜಿ.ಪಂ. ಅಧ್ಯಕ್ಷ ಏಕನಾಥ ಬಾನುವಳ್ಳಿ ಮಾತನಾಡಿ, ಕಡೂರ ಗ್ರಾಮ ಪಂಚಾಯಿತಿ ಸತತ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆಯುತ್ತಿರುವುದು ಈ ಭಾಗದ ಅಭಿವೃದ್ಧಿ ಸೂಚಿಸುತ್ತದೆ ಎಂದರು. ಜಗದೀಶ ಲಕ್ಕನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಟ್ಟೀಹಳ್ಳಿ ತಾ.ಪಂ.ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ಉಪಾಧ್ಯಕ್ಷ ಭರಮಪ್ಪ ಏಲೇದಹಳ್ಳಿ, ರೇವಣೆಪ್ಪ ಯರಳ್ಳಿ, ಕಾ.ನಿ.ಅಧಿಕಾರಿಗಳಾದ ಮೋಹನಕುಮಾರ ಕೆ.ಸಿ., ತಹಸೀಲ್ದಾರ್ ಕೆ. ಹಗುರುಬಸವರಾಜ, ಪಿಡಿಒ ನಾಗರತ್ನ ಮುದ್ದಪ್ಪಳವರ, ಎಚ್.ಎಂ. ಹುಲಿಹಳ್ಳಿ, ಮುಖಂಡರಾದ ದೇವರಾಜ ನಾಗಣ್ಣನವರ, ಜಿ.ಪಂ. ಸದಸ್ಯ ಪ್ರಕಾಶ ಬನ್ನಿಕೋಡ್, ಶೇಖಪ್ಪ ತುಮ್ಮಿನಕಟ್ಟಿ ಉಪಸ್ಥಿತರಿದ್ದರು.