ಅಫಜಲ್ಪುರ ತಾಲೂಕಿನ ಗಡಿ ಗ್ರಾಮ ಮಣ್ಣೂರು ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ. ಭೀಮೆ ಕಲಬುರಗಿಗೆ ಕಾಲಿಡೋದೇ ಮಣ್ಣೂರಿನಿಂದ ಎನ್ನೋದು ವಿಶೇಷ.
ಪಕ್ಕದ ಮಹಾರಾಷ್ಟ್ರದವರು ಭೀಮೆಗೆ ಅಡ್ಡಲಾಗಿ ನಿರ್ಮಿಸಿರೋ ಹಿಳ್ಳಿ ಬಾಂದಾರಲ್ಲಿ ಉಕ್ಕೇರಿ ಭೀಮೆ ಕಲಬುರಗಿ ಪ್ರವೇಶಿಸುವ ದಾರಿಯಲ್ಲಿ ಬರುವ ಮೊದಲ ಊರು ಮಣ್ಣೂರು. ಹೀಗಾಗಿ ಭೀಮೆಯ ಹೊಡೆತ ಈ ಊರಿಗೆ ಎಲ್ಲ ಊರುಗಳಿಗಿಂತ ತುಸು ಹೆಚ್ಚಾಗಿದೆ. ಅದರಂತೆಯೇ ಈ ಊರಿನ ಪೂಜಾರಿ ಓಣಿ, ಕರಗೇರಿ, ಮಾಂಗ್‌ವಾಡಿ, ಪಜಾ ಸಮುದಾಯದವರು ವಾಸವಿರುವ ಬಡಾವಣೆಗಳು ಕಳೆದ 3 ದಿನದಿಂದ ಭೀಮೆಯ ನೀರಲ್ಲೇ ನಿಂತಿವೆ.
20 ಸಾವಿರ ಜನವಸತಿಯ ಮಣ್ಣೂರಿಗೆ ಭೀಮೆಯ ಪ್ರವಾಹ ಹೊಸತೇನಲ್ಲ, ಆದರೂ ಈ ಪರಿ ನೀರು ಉಕ್ಕೇರಿದ್ದು ಐದಾರು ದಶಕದ ನಂತರ ಎಂದು ಊರಿನ ಹಿರಿಯರು ಹೇಳುತ್ತಿದ್ದಾರೆ.
ಮಹಾರಾಷ್ಟ್ರ ಭೀಮೆಯ ಪ್ರವಾಹವನ್ನೇ ಸೀನಾ ನದಿಗೆ ಹೊರಳಿಸಿಕೊಂಡು ಹೆಚ್ಚುವರಿ ನೀರು ಬಳಸಲು ಮುಂದಾದ ದಿನದಿಂದಲೇ ಭೀಮೆಗೆ ಪ್ರವಾಹ ಅನ್ನೋದೆ ಇರಲಿಲ್ಲ. ಆದರೆ ಈ ಬಾರಿ ಭೀಮೆಯ ಉಗಮಸ್ಥಾನ ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಮಳೆ, ಅದಕ್ಕೇ ಮತ್ತೆ ಪ್ರವಾಹ ಬರುತ್ತಿದೆ ಎನ್ನುವ ಊರವರು ಈ ಬಾರಿ ತೊಂದರೆಗೊಳಗಾಗಿದ್ದಾರೆ.
ಮಣ್ಣೂರು ಗ್ರಾಮದ 150 ಮನೆಗಳಿಗೆ ನೀರು ನುಗ್ಗಿದ್ದು, 200 ಮಂದಿ ಪ್ರವಾಹದಿಂದ ಪೀಡಿತರಾಗಿದ್ದಾರೆ. ಇಲ್ಲಿನ ಹೊಲಿ ಯಲ್ಲಮ್ಮ ದೇವಿ ಮಂದಿರ, ವೇದೇಶತೀರ್ಥ ವಿದ್ಯಾಪೀಠ, ಶ್ರೀ ಮಾಧವೀತರ್ಥರು, ಶ್ರೀ ವೇದೇಶತೀರ್ಥರ ವೃಂದಾವನಗಳು ಜಲಾವೃತವಾಗಿವೆ.
ಪೂಜಾರಿ ಓಣಿ, ಎಸ್ಸಿ ಬಡಾವಣೆಗಳಲ್ಲಿ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಇಲ್ಲಿನವರು ಕಾಯಂ ಪುನಾವಸತಿಗೆ ಮೊರೆ ಇಡುತ್ತಿದ್ದಾರೆ. ಹೊಸ ಬಡಾವಣೆ ಎತ್ತರದಾಗ ಮಾಡಿ ಕೊಡ್ರಿ ಎಂದು ಆಗ್ರಹಿಸುತ್ತಿರುವ ಸಂತ್ರಸ್ತರು
ದಶಕದ ಹಿಂದೆ ಇಲ್ಲಿ 150 ಕುಟುಂಬಗಳ ಪುನಾವಸತಿ ಮಾಡಲಾಗಿತ್ತಾದರೂ ನದಿ ತೀರದಲ್ಲಿನ ಕುಟುಂಬವಾಸಿಗಳ ಸಂಖ್ಯೆ ಹೆಚ್ಚಿರೋದರಿಂದ ಪುನಾವಸತಿ ಬೇಡಿಕೆ ಈಗ ಇನ್ನೂ ಹೆಚ್ಚಿದೆ.
ನದಿ ತೀರದಲ್ಲಿರುವ ಮಣ್ಣೂರು, ಕುಡಿಗನೂರ್, ಬಾಬಾನಗರ, ಶೇಷಗಿರಿವಾಡಿ ಸುತ್ತಮುತ್ತ ಕಂಡಕಂಡಲ್ಲಿ ನದಿ ನೀರು ನುಗ್ಗಿದ್ದರಿಂದ ಇಲ್ಲಿ 20 ಸಾವಿರ ಹೆಕ್ಟರ್‌ಗೂ ಹೆಚ್ಚಿನ ತೊಗರಿ, ಕಬ್ಬು, ಸೂರ್ಯಕಾಂತಿ ಫಸಲು ನೀರುಪಾಲಾಗಿದೆ. ಈ ಹಾನಿ ಪ್ರಮಾಣ ಇನ್ನೂ ಹೆಚ್ಚುವ ಸಂಭವಗಳೇ ಇವೆ.