ಹುಡುಗರು ಲವ್ ಪ್ರಪೋಸ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ 15ರ ಬಾಲಕಿ!

First Published | Sep 1, 2024, 5:00 PM IST

ಮಂಡ್ಯ (ಸೆ.01): ಹೈಸ್ಕೂಲ್ ಓದುವ ಬಾಲಕಿಯ ಹಿಂದೆ ಬಿದ್ದ ಮೂರ್ನಾಲ್ಕು ಹದಿಹರೆಯದ ಹುಡುಗರು, ನಿನ್ನನ್ನು ಪ್ರೀತಿಸುತ್ತೇವೆ ಎಂದು ಲವ್ ಪ್ರಪೋಸ್ ಮಾಡಿದ್ದಾರೆ. ಆದರೆ, ಬಾಲಕಿ ಇದಕ್ಕೊಪ್ಪದಿದ್ದಾಗ ಆಕೆಯೊಂದಿಗೆ ವಾಗ್ವಾದ ಮಾಡಿದ್ದಾರೆ. ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿ ಹೈಸ್ಕೂಲ್ ಓದುತ್ತಿದ್ದ ಇಂಪನ (15) ಎಂದು ಗುರುತಿಸಲಾಗಿದೆ. ಪ್ರೌಢಶಾಲೆಗೆ ಹೋಗುವ ಬಾಲಕಿಗೆ ಪ್ರೀತಿಸುವಂತೆ ಒತ್ತಾಯ ಮಾಡಿದ ಕಿರುಕುಳಕ್ಕೆ ಬಾಲಕಿ ಮನನೊಂದಿದ್ದು, ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಪ್ರೌಢಶಾಲಾ ವಿದ್ಯಾರ್ಥಿನಿ ಇಂಪನಳನ್ನು ಇದೇ ಹನಕೆರೆ ಗ್ರಾಮದ ಅಪ್ರಾಪ್ತ ಬಾಲಕರು ಪ್ರೀತಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಬಾಲಕಿ ಇಂಪನಾಗೆ ಪ್ರೀತಿಸುವಂತೆ ಕೂಡ ಒತ್ತಾಯ ಮಾಡಿದ್ದಾರೆ.

Tap to resize

ಬಾಲಕಿಯೊಂದಿಗೆ ಪ್ರೀತಿಸುವಂತೆ ಪೀಡಿಸುವ ಸಂದರ್ಭದ ಆಡಿಯೋ ಸೆರೆ ಹಿಡಿದಿರುವ ಬಾಲಕರು, ಅದನ್ನು ಇಂಪನಾಳ ತಾಯಿಯ ವಾಟ್ಸಾಪ್‌ಗೆ ಕಳಿಸಿದ್ದಾರೆ. ಬಾಲಕಿಗೆ ಹುಡುಗರು ಸೇರಿಕೊಂಡು ಪ್ರೀತಿಸುವಂತೆ ಕಿರುಕುಳ ನೀಡಿದ್ದ ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿತ್ತು.

ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿ ಬಾಲಕರು ವೈರಲ್ ಆಗಿರುವ ಆಡಿಯೋ ತುಣಕನ್ನು ಆ ಬಾಲಕಿಯ ತಾಯಿಗೆ ವಾಟ್ಸಪ್‌ ಮೂಲಕ ಕಳುಹಿಸಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಇನ್ನು ದುರ್ಘಟನೆ ನಡೆಯುತ್ತಿದ್ದಂತೆಯೇ ಕಿರುಕುಳ ನೀಡಿದ್ದ ಎಲ್ಲ ಅಪ್ರಾಪ್ತ ಬಾಲಕರು ಗ್ರಾಮವನ್ನು ಬಿಟ್ಟು ಪರಾರಿ ಆಗಿದ್ದಾರೆ. ಮೃತ ಬಾಲಕಿಯ ಕುಟುಂಬ ಸದಸ್ಯರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Latest Videos

click me!