ಕೋಲಾರ ನಕಲಿ ವೈದ್ಯನ ಹಾವಳಿ; ರಕ್ತ ವಾಂತಿ ಮಾಡುತ್ತಲೇ ಪ್ರಾಣಬಿಟ್ಟ 8 ವರ್ಷದ ಬಾಲಕಿ!

Published : Oct 02, 2025, 08:35 PM IST

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಕಲಿ ವೈದ್ಯನೊಬ್ಬ ಜ್ವರಕ್ಕೆ ನೀಡಿದ ಹೈ ಡೋಸ್ ಇಂಜೆಕ್ಷನ್‌ನಿಂದ 8 ವರ್ಷದ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಈ ಘಟನೆಯು ಗ್ರಾಮೀಣ ಪ್ರದೇಶಗಳಲ್ಲಿನ ನಕಲಿ ವೈದ್ಯರ ಹಾವಳಿಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

PREV
16
ನಕಲಿ ವೈದ್ಯರ ಹಾವಳಿಗೆ ಬಾಲಕಿ ಬಲಿ

ಕೋಲಾರ (ಅ.02): ನಕಲಿ ವೈದ್ಯರ ದಂಧೆ ಮತ್ತು ಅವರ ಅವೈಜ್ಞಾನಿಕ ಚಿಕಿತ್ಸೆಗಳು ಗ್ರಾಮೀಣ ಪ್ರದೇಶದ ಅಮಾಯಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದಕ್ಕೆ ಮತ್ತೊಂದು ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಮಾಲೂರಿನಲ್ಲಿರುವ ನಕಲಿ ಕ್ಲಿನಿಕ್‌ನ ವೈದ್ಯನ ಯಡವಟ್ಟಿನಿಂದಾಗಿ 8 ವರ್ಷದ ಬಾಲಕಿ ತೀವ್ರವಾಗಿ ನರಳಾಡಿ ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಆಕ್ರೋಶಗೊಂಡಿರುವ ಪೋಷಕರು ನಕಲಿ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

26
ಜ್ವರವೆಂದು ಕ್ಲಿನಿಕ್‌ಗೆ ಹೋದರೆ ಇಂಜೆಕ್ಷನ್ ಕೊಟ್ಟ ನಕಲಿ ಡಾಕ್ಟರ್

ಮಾಲೂರು ತಾಲೂಕಿನ ದೊಡ್ಡ ಇಗಲೂರು ಗ್ರಾಮದ ನಿವಾಸಿಗಳಾದ ತಾನವಿ (8) ಎಂಬ ಬಾಲಕಿಯೇ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಬಾಲಕಿಗೆ ಜ್ವರ ಕಾಣಿಸಿಕೊಂಡ ಕಾರಣ, ಪೋಷಕರು ಸೋಮವಾರದಂದು (ಅ.01) ಪಕ್ಕದ ಸಂತೇಹಳ್ಳಿ ಗ್ರಾಮದಲ್ಲಿರುವ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು.

36
ಹೈ ಡೋಸ್ ಇಂಜೆಕ್ಷನ್‌ನಿಂದ ಬಾಲಕಿಗೆ ವಿಪರೀತ ನೋವು:

ಆದರೆ, ಅಲ್ಲಿನ ನಕಲಿ ವೈದ್ಯನು ಮಗುವಿಗೆ ನೀಡಬೇಕಾದ ಪ್ರಮಾಣಕ್ಕಿಂತ ಹೆಚ್ಚು ಅಥವಾ ದೊಡ್ಡವರಿಗೆ ನೀಡುವ ಮಾದರಿಯ ಪ್ರಬಲ ಇಂಜೆಕ್ಷನ್ (ಹೈ ಡೋಸ್)‌ ಅನ್ನು ಬಾಲಕಿಗೆ ನೀಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಇಂಜೆಕ್ಷನ್ ತೆಗೆದುಕೊಂಡ ನಂತರ ತಾನವಿ ತೀವ್ರ ನೋವಿನಿಂದ ನರಳಾಡಲು ಪ್ರಾರಂಭಿಸಿದ್ದಾಳೆ. ಎರಡು ದಿನಗಳ ಕಾಲ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಆ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಚರ್ಮ ಹಸಿರು ಬಣ್ಣಕ್ಕೆ ತಿರುಗಿತ್ತು.

46
ಚಿಕಿತ್ಸೆ ಫಲಿಸದೆ ರಕ್ತದ ವಾಂತಿ ಮಾಡಿ ಸಾವು:

ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದನ್ನು ಗಮನಿಸಿದ ಪೋಷಕರು ನಿನ್ನೆ ಸಂಜೆ (ಅ.01) ಮಾಲೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ನೀಡಿದ ಚಿಕಿತ್ಸೆ ಫಲಕಾರಿಯಾಗದೆ, ಇಂದು ಸಂಜೆ (ಅ.02) ರಕ್ತದ ವಾಂತಿ ಮಾಡಿ ಬಾಲಕಿ ತಾನವಿ ಸಾವನ್ನಪ್ಪಿದ್ದಾಳೆ. ನಕಲಿ ವೈದ್ಯ ನೀಡಿದ ಇಂಜೆಕ್ಷನ್‌ನಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ಪೋಷಕರು ದುಃಖತಪ್ತವಾಗಿ ಆರೋಪಿಸಿದ್ದಾರೆ.

56
ದೂರು ದಾಖಲಾಗುತ್ತಿದ್ದಂತೆ ನಕಲಿ ವೈದ್ಯ ಪರಾರಿ

ಘಟನೆ ಬೆಳಕಿಗೆ ಬರುತ್ತಿದ್ದಂತೆ ನಕಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಕ್ಲಿನಿಕ್‌ಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾನೆ. ಪೋಷಕರು ಕೂಡಲೇ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿ, ನಕಲಿ ಕ್ಲಿನಿಕ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ (Postmortem) ವರದಿಗಾಗಿ ಕಾಯುತ್ತಿದ್ದಾರೆ.

66
ನಕಲಿ ವೈದ್ಯರ ಹಾವಳಿಗೆ ಬಿದ್ದಿಲ್ಲ ಬ್ರೇಕ್

ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ತಪ್ಪಿತಸ್ಥ ನಕಲಿ ವೈದ್ಯನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಗ್ರಾಮೀಣ ಭಾಗದಲ್ಲಿರುವ ನಕಲಿ ಕ್ಲಿನಿಕ್‌ಗಳು ಮತ್ತು ವೈದ್ಯರ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read more Photos on
click me!

Recommended Stories