ದ.ಕ.ಜಿಲ್ಲೆಯಲ್ಲಿ ಕೊರೋನಾ ಎಫೆಕ್ಟ್ನ ನಡುವೆ ಗುರುವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ನಿರಾತಂಕವಾಗಿ ಕಳೆದಿದೆ. ಜಿಲ್ಲೆಯಲ್ಲಿ ಒಟ್ಟು 30,835 ವಿದ್ಯಾರ್ಥಿಗಳಿಗೆ 95 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆದಿದೆ. ಒಟ್ಟು 51 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಜಿಲ್ಲೆಯಲ್ಲಿ ಒಟ್ಟು 762 ಮಂದಿ ವಿದ್ಯಾರ್ಥಿಗಳು ನಾನಾ ಕಾರಣಗಳಿಂದ ಗೈರುಹಾಜರಾಗಿದ್ದರು.
ಜಿಲ್ಲೆಯಲ್ಲಿ ಒಟ್ಟು 13,635 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 12,873 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಆಗಮಿಸಿದ್ದರು. ಹೊರ ಜಿಲ್ಲೆಯಿಂದ 82 ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ನೋಂದಾಯಿಸಿಕೊಂಡಿದ್ದು, ಅವರೆಲ್ಲರೂ ಹಾಜರಾಗಿದ್ದರು.
ಗಡಿಪ್ರದೇಶ ಕಾಸರಗೋಡಿನಿಂದ ಎಲ್ಲ 367 ವಿದ್ಯಾರ್ಥಿಗಳು ದ.ಕ. ಜಿಲ್ಲೆಗೆ ಪರೀಕ್ಷೆಗೆ ಆಗಮಿಸಿದ್ದರು. 28 ಗಡಿ ಭಾಗಗಳಲ್ಲಿ ವಿದ್ಯಾರ್ಥಿಗಳನ್ನು ವಿಶೇಷ ಬಸ್ ಮೂಲಕ ಪರೀಕ್ಷೆಗೆ ಕರೆತರಲಾಯಿತು.
ಪರೀಕ್ಷೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮೊದಲು ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಬಳಿಕ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು
ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಆಗಮಿಸಿದಾಗ ಹಾಗೂ ಪರೀಕ್ಷೆ ಮುಕ್ತಾಯ ನಂತರ ತೆರಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಗಮನ ನೀಡಲಾಯಿತು. ವಿದ್ಯಾರ್ಥಿಗಳು ಕೋವಿಡ್ ನಿಯಮವನ್ನು ಶಿಸ್ತಿನಿಂದ ಪಾಲಿಸಿದರು.
ಬಂಟ್ವಾಳದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ವಾಂತಿ ಮಾಡಿಕೊಂಡ ಘಟನೆ ನಡೆದಿದೆ. ವೈದ್ಯರು ತಪಾಸಣೆ ನಡೆಸಿದ ಬಳಿಕ ಆಕೆ ನಿರಾತಂಕವಾಗಿ ಪರೀಕ್ಷೆ ಬರೆದಿದ್ದಾಳೆ.
ಪುತ್ತೂರು ಹಾಗೂ ಮಂಗಳೂರು ವಿಭಾಗದಿಂದ ಎಲ್ಲ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಲಾಗಿತ್ತು.
ಉಡುಪಿ ಜಿಲ್ಲೆಯಲ್ಲಿ 6 ವಿದ್ಯಾರ್ಥಿಗಳು ಕಂಟೈನ್ಮೆಂಟ್ ವಲಯದಿಂದ ಬಂದಿದ್ದು, ಅವರಿಗೆ ಪರೀಕ್ಷೆ ಬರೆಯುವುದಕ್ಕೆ ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು.
ಗುರುವಾರ 4 ವಿದ್ಯಾರ್ಥಿಗಳಿಗೆ ಗಂಟಲು ನೋವು, ಜ್ವರ ಇತ್ಯಾದಿ ಅನಾರೋಗ್ಯದ ಲಕ್ಷಣಗಳಿರುವುದು ಕಂಡು ಬಂತು. ಅವರನ್ನೂ ಮುಂಜಾಗರೂಕತಾ ಕ್ರಮವಾಗಿ ಪ್ರತ್ಯೇಕ ಕೊಠಡಿಗಳಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಲಾಯಿತು.
ಗ್ರಾಮೀಣ ಭಾಗ ಮತ್ತು ದೂರದೂರುಗಳಿಂದ ಬರುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಕ್ಲಪ್ತ ಸಮಯಕ್ಕೆ ಬರುವುದಕ್ಕೆ 82 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉಚಿತ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.
ಕೆಲವು ಸಮೀಪದ ವಿದ್ಯಾರ್ಥಿಗಳು ನಡೆದುಕೊಂಡು ಬಂದಿರುವುದೂ ಕಂಡು ಬಂತು. ಆದರೆ ಸಾಕಷ್ಟುಮಕ್ಕಳನ್ನು ಹೆತ್ತವರು ಸ್ವಂತ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲದೆ ಕೆಲವು ಸಂಘ ಸಂಸ್ಥೆಗಳೂ ತಮ್ಮೂರಿನ ವಿದ್ಯಾರ್ಥಿಗಳಿಗೆ ಉಚಿತ ವಾಹನದ ವ್ಯವಸ್ಥೆ ಮಾಡಿದ್ದವು.
ವಿದ್ಯಾರ್ಥಿಗಳು ನೆಲದಲ್ಲಿ ಹಾಕಲಾಗಿದ್ದ ಗುರುತುಗಳಲ್ಲಿ ಸರದಿ ಸಾಲಿನಲ್ಲಿ, ದೈಹಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿದರು. ತಕ್ಷಣ ಅವರ ಕೈಗೆ ಸ್ಯಾನಿಟೈಸರ್ ಹಾಕಲಾಗುತ್ತಿತ್ತು. ನಂತರ ಅವರನ್ನು ಥರ್ಮಲ್ ಸ್ಯಾ್ಕನಿಂಗ್ ನಡೆಸಿ ಒಳಗೆ ಬಿಡಲಾಗುತಿತ್ತು. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ಧರಿಸಿದ್ದರು.
ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅವ್ಯವಸ್ಥೆ, ಅವ್ಯವಹಾರಗಳು ನಡೆದಿಲ್ಲ, ಪರೀಕ್ಷೆಗಳು ಅತ್ಯಂತ ಶಾಂತಿಯುತವಾಗಿ ಸುವ್ಯವಸ್ಥಿತವಾಗಿ ನಡೆದಿವೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.