ಧಾರವಾಡ ವಿದ್ಯಾರ್ಥಿನಿಗೆ ಕಿರುಕುಳ ಆರೋಪ ಕವಿವಿ ಪ್ರೊಫೆಸರ್ ದೇವರಾಜ್ ಸಸ್ಪೆಂಡ್; ಎಬಿವಿಪಿ ಹೋರಾಟಕ್ಕೆ ಜಯ!

Published : Jun 17, 2026, 02:32 PM IST

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ದೇವರಾಜ್ ತಂಗುದೊರೈ ಅವರನ್ನು ಅಮಾನತುಗೊಳಿಸಲಾಗಿದೆ. ಎಬಿವಿಪಿ ಕಾರ್ಯಕರ್ತರು ನಡೆಸಿದ ತೀವ್ರ ಪ್ರತಿಭಟನೆ ಮತ್ತು ಒತ್ತಡಕ್ಕೆ ಮಣಿದು ಕುಲಪತಿಗಳು ಈ ಆದೇಶ ಹೊರಡಿಸಿದ್ದಾರೆ.

PREV
15

ಧಾರವಾಡ (ಜೂ.17): ಕರ್ನಾಟಕ ವಿಶ್ವವಿದ್ಯಾಲಯದ (ಕವಿವಿ) ಆವರಣ ಬುಧವಾರ ಸಂಜೆ ರಣಾಂಗಣವಾಗಿ ಮಾರ್ಪಟ್ಟಿತ್ತು. ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ದೇವರಾಜ್ ತಂಗುದೊರೈ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಡೆಸಿದ ಬೃಹತ್ ಪ್ರತಿಭಟನೆಗೆ ವಿವಿ ಆಡಳಿತ ಮಂಡಳಿ ಕೊನೆಗೂ ಮಣಿದಿದೆ. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಪ್ರೊಫೆಸರ್ ದೇವರಾಜ್ ಅವರನ್ನು ಅಮಾನತುಗೊಳಿಸಿ ಕುಲಪತಿ ಎ.ಎಂ. ಖಾನ್ ಆದೇಶ ಹೊರಡಿಸಿದ್ದಾರೆ.

25

ಪ್ರಕರಣದ ಹಿನ್ನೆಲೆ:

ಕವಿವಿಯ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ದೇವರಾಜ್ ತಂಗುದೊರೈ ಅವರು ವಿದ್ಯಾರ್ಥಿನಿಯೊಬ್ಬರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕಳೆದ ವಾರವಷ್ಟೇ ಪ್ರೊಫೆಸರ್ ವಿದ್ಯಾರ್ಥಿನಿಯೊಬ್ಬರ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಫೋಟೋಗಳು ವಿವಿ ಆವರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಇಷ್ಟೆಲ್ಲಾ ಪುರಾವೆಗಳಿದ್ದರೂ ಕವಿವಿ ಆಡಳಿತ ಮಂಡಳಿ ಪ್ರೊಫೆಸರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿತ್ತು. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

35

ಕವಿವಿ ಆವರಣದಲ್ಲಿ ಹೈಡ್ರಾಮಾ:

ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ವಿವಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾಕಾರರು ಕುಲಪತಿಗಳ ಭವನದತ್ತ ನುಗ್ಗಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತೀವ್ರ ತಳ್ಳಾಟ-ನೂಕಾಟ ನಡೆಯಿತು. ಆಕ್ರೋಶಗೊಂಡ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ಹಾರಿ ಕುಲಪತಿಗಳ ಆಡಳಿತ ಕಚೇರಿ ಎದುರು ಜಮಾಯಿಸಿದರು. ಕಚೇರಿ ಮುಂಭಾಗದಲ್ಲಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

45

ಕೊನೆಗೂ ಅಮಾನತು ಆದೇಶ:

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಲಪತಿ ಎ.ಎಂ. ಖಾನ್ ಅವರು ಪರಿಸ್ಥಿತಿಯನ್ನು ಅವಲೋಕಿಸಿದರು. ವಿದ್ಯಾರ್ಥಿಗಳ ಪಟ್ಟು ಹಾಗೂ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ದೇವರಾಜ್ ತಂಗುದೊರೈ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದರು. ವಿವಿ ಆಡಳಿತ ಮಂಡಳಿಯಿಂದ ಅಧಿಕೃತ ಅಮಾನತು ಆದೇಶ ಹೊರಬರುತ್ತಿದ್ದಂತೆಯೇ ಎಬಿವಿಪಿ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.

55

ವಿಶ್ವವಿದ್ಯಾಲಯದಂತಹ ಪವಿತ್ರ ಶಿಕ್ಷಣ ಪ್ರಸಾರ ಕೇಂದ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Read more Photos on
click me!

Recommended Stories