ತೀವ್ರಗೊಂಡ ಕಡಲ್ಕೊರೆತ, 23 ಮತ್ತು 24ರಂದು ಭಾರೀ ಮಳೆ ಸಾಧ್ಯತೆ

First Published | Jun 20, 2020, 9:35 AM IST

ದಕ್ಷಿಣ ಕನ್ನಡದ ಉಚ್ಚಿಲ-ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸೋಮೇಶ್ವರ ಮತ್ತು ಉಚ್ಚಿಲ ಭಾಗದಲ್ಲಿರುವ ಎರಡು ಮನೆಗಳು ತೀವ್ರ ಅಪಾಯದಂಚಿಗೆ ತಲುಪಿದೆ. ಜಿಲ್ಲಾಡಳಿತದ ಆದೇಶದಂತೆ ಎರಡು ಸ್ಥಳಗಳಿಗೆ ಭೇಟಿ ನೀಡಿರುವ ಸೋಮೇಶ್ವರ ಪುರಸಭೆ ಪೌರಾಯುಕ್ತೆ ಎರಡು ಮನೆಮಂದಿಯನ್ನು ಸ್ಥಳಾಂತರ ನಡೆಸಲು ಸೂಚಿಸಿದ್ದಾರೆ. ಇಲ್ಲಿವೆ ಫೊಟೋಸ್

ದಕ್ಷಿಣ ಕನ್ನಡದ ಉಚ್ಚಿಲ-ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸೋಮೇಶ್ವರ ಮತ್ತು ಉಚ್ಚಿಲ ಭಾಗದಲ್ಲಿರುವ ಎರಡು ಮನೆಗಳು ತೀವ್ರ ಅಪಾಯದಂಚಿಗೆ ತಲುಪಿದೆ.
ಸೋಮೇಶ್ವರ ದೇವಸ್ಥಾನ ಬಳಿಯಿರುವ ಮೋಹನ್‌ ಎಂಬವರಿಗೆ ಸೇರಿದ ಮನೆ ಅಪಾಯದಂಚಿನಲ್ಲಿದೆ. ಅವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಉಚ್ಚಿಲದಲ್ಲಿರುವ ವಸಂತ್‌ ಎಂಬವರ ಮನೆಮಂದಿಯೂ ಪುರಸಭೆ ಅಧಿಕಾರಿಗಳ ಸೂಚನೆಯಂತೆ ಸ್ಥಳಾಂತರಗೊಂಡಿದ್ದಾರೆ.
Tap to resize

ಉಚ್ಚಿಲ ಮೂರು ಮಾರ್ಗದ ಬಳಿ ರಸ್ತೆಗೆ ಅಪ್ಪಳಿಸುತ್ತಿರುವ ಅಲೆಗಳನ್ನು ತಡೆಯಲು ಶುಕ್ರ​ವಾರ ಬೆಳಗ್ಗಿನಿಂದ ಸಂಜೆಯವರೆಗೆ ಸ್ಥಳೀಯರು ಗೋಣಿ ಚೀಲದೊಳಗೆ ಮರಳು ತುಂಬಿಸಿ, ಸಮುದ್ರಕ್ಕೆ ಅಡ್ಡವಾಗಿ ಇಟ್ಟಿದ್ದಾರೆ. ಬ್ರೇಕ್‌ ವಾಟರ್‌ ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ಹಾಗೂ ಕಲ್ಲುಗಳನ್ನು ಸಮರ್ಪಕವಾಗಿ ಹಾಕದ ಕಾರಣ ಉಚ್ಚಿಲ, ಸೋಮೇಶ್ವರ ನಿವಾಸಿಗಳು ಅಪಾಯದಂಚಿಗೆ ತಲುಪುವಂತಾಗಿದೆ. ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಶುಕ್ರ​ವಾ​ರ ಬೆಳಗ್ಗೆಯಿಂದ ಸಂಜೆವರೆಗೆ 10ರಿಂದ 15ರಷ್ಟುತೆಂಗಿನ ಮರಗಳು ಸಮುದ್ರಪಾಲಾಗಿವೆ.
ದ.ಕ. ಜಿಲ್ಲೆಯಲ್ಲಿ ಮುಂಗಾರು ಮಳೆಯ ಪ್ರಮಾಣ ತಗ್ಗಿದೆ. ಆದರೆ ಮಳೆಯ ಪ್ರಭಾವ ಮುಂದುವರಿದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ನಸುಕಿನ ಜಾವ ಧಾರಾಕಾರ ಮಳೆಯಾಗಿದೆ. ಬೆಳಗ್ಗೆ ಮಳೆ ಬಿಟ್ಟಿದ್ದು, ಮಧ್ಯಾಹ್ನ ವೇಳೆಗೆ ಮತ್ತೆ ಸಾಧಾರಣ ಮಳೆ ಕಾಣಿಸಿದೆ. ಇದು ಸಂಜೆಯೂ ಮುಂದುವರಿದಿದೆ.
ಮಂಗಳೂರಿನಲ್ಲಿ ಕೂಡ ಮಳೆಯ ಅಬ್ಬರ ಇಲ್ಲ, ಆದರೆ ಆಗಾಗ ಒಮ್ಮೆಲೇ ಮಳೆ ಸುರಿದು ಹೋಗುತ್ತಿದೆ. ಹಗಲು ಪೂರ್ತಿ ಆಗೊಮ್ಮೆ ಈಗೊಮ್ಮೆ ಮೋಡ, ಬಿಸಿಲು ಕಂಡುಬಂದಿದೆ. ಉಳ್ಳಾಲದ ಸೋಮೇಶ್ವರದಲ್ಲಿ ಶುಕ್ರವಾರ ಕಡಲ್ಕೊರೆತ ಉಂಟಾಗಿದೆ. ಹವಾಮಾನ ಇಲಾಖೆ ಪ್ರಕಾರ, ಇನ್ನೂ ಒಂದೆರಡು ದಿನಗಳ ಕಾಲ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಹೇಳಲಾಗಿದೆ. ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 25.3 ಮಿಲಿ ಮೀಟರ್‌ ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಇನ್ನೂ ಐದು ದಿನ ಇದೇ ರೀತಿ ಜೋರಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಹಗಲಿಡೀ ಮಳೆಯಾಗಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಭಾರಿ ಗಾಳಿಯೂ ಬೀಸಿದೆ. ಉಡುಪಿ ಮತ್ತು ಕಾಪು ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವೂ ಆಗಿತ್ತು.
ರಾಜ್ಯ ಹವಾಮಾನ ಇಲಾಖೆಯು ಕರಾವಳಿಯ ಮೂರು ಜಿಲ್ಲೆಗಳಲ್ಲಿ 3 ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಯಲ್ಲೋ ಅಲರ್ಟ್‌ ಘೋಷಿಸಿದೆ. ಜೂ.23 ಮತ್ತು 24ರಂದು ಅತೀ ಭಾರಿ ಮಳೆಯಾಗುವ ಬಗ್ಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಕೇಂದ್ರ ಸರ್ಕಾರದ ಹವಾಮಾನ ಇಲಾಖೆಯು ಈ 5 ದಿನಗಳ ಕಾಲ ಸರಾಸರಿ 65 ಮಿ.ಮೀ.ಗಿಂತ ಹೆಚ್ಚು ಮಳೆಯಾಗುತ್ತದೆ ಎಂದೂ ಹೇಳಿದೆ. ಶುಕ್ರವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ, ವಾಡಿಕೆಯ 44.70 ಮಿ.ಮೀ. ಕಡಿಮೆ 41.20 ಮಿ.ಮೀ. ಮಳೆ ದಾಖಲಾಗಿದೆ.

Latest Videos

click me!