ಕೊಡಗುಜಿಲ್ಲೆಯ ಕೆಲವು ಅತಿಥಿ ಉಪನ್ಯಾಸಕರು ತಮ್ಮ ಕುಟುಂಬ ನಿರ್ವಹಣೆಗಾಗಿ ಈ ಹಾದಿ ಹಿಡಿದಿದ್ದಾರೆ. ಇನ್ನೂ ಕೆಲವರು ಯಾವುದೇ ಕೆಲಸ ಇಲ್ಲದೆ ಮನೆಯಲ್ಲೇ ಕಷ್ಟದ ದಿನ ದೂಡುತ್ತಿದ್ದಾರೆ.
ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ, ನಾಪೋಕ್ಲು, ಗೋಣಿಕೊಪ್ಪ ಸೇರಿದಂತೆ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಲಾಕ್‌ಡೌನ್‌ನಿಂದ ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ಹಾಗೂ ವೇತನವಿಲ್ಲದೆ ಕಂಗಾಲಾಗಿದ್ದಾರೆ.ಕೊರೋನಾ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬ ಚಿಂತೆಯೂ ಇವರಿಗೆ ಕಾಡುತ್ತಿದೆ.
ಈಗಾಗಲೇ ಕೆಲವು ಅತಿಥಿ ಉಪನ್ಯಾಸಕರು ಕೂಡ ಆಲ್‌ಲೈನ್ ಮೂಲಕ ತರಬೇತಿಗಳನ್ನು ತೆಗೆದುಕೊಂಡಿದ್ದು, ಪಠ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ಕೆಲಸದ ವೇತನ ಸಿಗುತ್ತದೆಯೇ ಎಂಬ ಖಾತರಿ ಇಲ್ಲದಂತಾಗಿದೆ.
ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಕರಾಗಿ ಕೆಲವರು ದುಡಿಯುತ್ತಿದ್ದು, ಈಗ ಕೆಲಸವಿಲ್ಲದೆ ದಿಕ್ಕು ತೋಚದಂತಾಗಿದೆ. 10 ವರ್ಷ ಮೇಲ್ಪಟ್ಟು ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕೆಂದು ಮನವಿ ಮಾಡಿಕೊಂಡರೂ ಯಾವುದೇ ಪರಿಹಾರವಾಗಿಲ್ಲ. ಈಗ ಸರ್ಕಾರದಲ್ಲಿ ಅನುದಾನ ಇಲ್ಲದಿರುವುದರಿಂದ ಕಾಯಂ ಮಾಡಿಕೊಳ್ಳಿ ಎನ್ನುವುದು ಕೂಡ ಕಷ್ಟಎನ್ನುತ್ತಾರೆ ಅತಿಥಿ ಉಪನ್ಯಾಸಕರು.
ಅತಿಥಿ ಉಪನ್ಯಾಸಕರಿಗೆ ಕಳೆದ 5 ತಿಂಗಳಿನಿಂದ ವೇತನ ದೊರಕದೆ ಪರದಾಡುತ್ತಿದ್ದಾರೆ. ತಮ್ಮ ಕುಟುಂಬ ನಿರ್ವಹಣೆಗಾಗಿ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಪದವಿ ಕಾಲೇಜುಗಳಿಗೆ ತರಗತಿಗಳು ಆರಂಭವಾಗುತ್ತಿತ್ತು. ಆದರೆ ಈಗ ಕೊರೋನಾ ಹಿನ್ನೆಲೆಯಲ್ಲಿ ಸೆಪ್ಟಂಬರ್ ನಂತರ ಕಾಲೇಜು ಆರಂಭವಾಗುತ್ತದೆ ಎನ್ನಲಾಗುತ್ತಿದೆ. ಇದರಿಂದ ಮುಂದಿನ ಐದು ತಿಂಗಳ ಕಾಲ ವೇತನ ದೊರಕುತ್ತದೆಯೇ ಎಂಬ ಆತಂಕ ಉಂಟಾಗಿದೆ.