ಗದಗ ಪೌಲ್ಟ್ರಿಫಾರ್ಮ್‌ ದುರ್ವಾಸನೆ: ನೂರಾರು ಕೋಳಿ, ಸಾವಿರಾರು ಮೊಟ್ಟೆ ಹೊತ್ತಯ್ದ ಗ್ರಾಮಸ್ಥರು!

Published : Dec 25, 2025, 01:30 PM IST

ಗದಗ ಜಿಲ್ಲೆಯ ಉಣಚಗೇರಿ ಗ್ರಾಮದಲ್ಲಿ, 15 ವರ್ಷಗಳಿಂದ ದುರ್ವಾಸನೆ ಬೀರುತ್ತಿದ್ದ ಕೋಳಿ ಫಾರ್ಮ್‌ನಿಂದ ಬೇಸತ್ತ ಗ್ರಾಮಸ್ಥರು ಪೊಲೀಸರ ಸಮ್ಮುಖದಲ್ಲೇ ಫಾರ್ಮ್‌ಗೆ ನುಗ್ಗಿ ಸಾವಿರಾರು ಕೋಳಿ ಮತ್ತು ಮೊಟ್ಟೆಗಳನ್ನು ಲೂಟಿ ಮಾಡಿದ್ದಾರೆ.

PREV
14
ಕೋಳಿ, ಮೊಟ್ಟೆಗಳನ್ನು ಹೊತ್ತೊಯ್ದ ಗ್ರಾಮಸ್ಥರು

ಗದಗ (ಡಿ.25): ಜಿಲ್ಲೆಯ ಗಜೇಂದ್ರಗಡ ಹೊರವಲಯದ ಉಣಚಗೇರಿ ಗ್ರಾಮದಲ್ಲಿ 15 ವರ್ಷಗಳ ಹಳೆಯ ಸಮಸ್ಯೆಯೊಂದು ಸ್ಫೋಟಗೊಂಡಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರ ಸಮ್ಮುಖದಲ್ಲೇ ಕೋಳಿ ಫಾರ್ಮ್‌ಗೆ ನುಗ್ಗಿ ಸಾವಿರಾರು ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ದಿರುವ ವಿಚಿತ್ರ ಘಟನೆ ನಡೆದಿದೆ.

24
ಸಮಸ್ಯೆಯ ಹಿನ್ನೆಲೆ

ನೂರಾರು ಮನೆಗಳಿರುವ ಈ ಗ್ರಾಮದಿಂದ ಕೇವಲ 30 ಮೀಟರ್ ಅಂತರದಲ್ಲಿ 'ಮೇಘರಾಜ್ ಕೋಳಿ ಫಾರ್ಮ್' ನಿರ್ಮಾಣ ಮಾಡಲಾಗಿತ್ತು. ಕಳೆದ 15 ವರ್ಷಗಳಿಂದ ಇಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಜನವಸತಿ ಪ್ರದೇಶಕ್ಕೆ ತೀರಾ ಹತ್ತಿರವಿರುವ ಈ ಫಾರ್ಮ್‌ನಿಂದಾಗಿ ಇಡೀ ಗ್ರಾಮ ಗಬ್ಬು ನಾರುತ್ತಿದೆ. ವಾತಾವರಣ ಹಾಳಾಗಿರುವ ಕಾರಣ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರತಿಭಟಿಸುತ್ತಿದ್ದರು.

34
ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ

ಈ ಕೋಳಿ ಫಾರ್ಮ್ ಅನ್ನು ಜನವಸತಿ ಇಲ್ಲದ ಕಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಗದಗ ಜಿಲ್ಲಾಧಿಕಾರಿಗಳಿಗೆ ಹಾಗೂ ಗಜೇಂದ್ರಗಡ ಪುರಸಭೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ ಈ ಸಮಸ್ಯೆಗೆ ತಲೆಕೆಡಿಸಿಕೊಂಡಿರಲಿಲ್ಲ. ಅಧಿಕಾರಿಗಳ ಈ ಉಡಾಫೆ ಧೋರಣೆಯಿಂದ ಬೇಸತ್ತ ಉಣಚಗೇರಿ ಗ್ರಾಮಸ್ಥರು, ಇಂದು ತಾವೇ ಕಾನೂನು ಕೈಗೆತ್ತಿಕೊಂಡು ನೇರವಾಗಿ ಫಾರ್ಮ್‌ಗೆ ನುಗ್ಗಿದ್ದಾರೆ.

44
ಪೊಲೀಸರ ಎದುರೇ ಲೂಟಿ

ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರಾದರೂ, ಗ್ರಾಮಸ್ಥರ ಆಕ್ರೋಶದ ಮುಂದೆ ಏನೂ ಮಾಡಲು ಸಾಧ್ಯವಾಗದೆ ಮೂಕಪ್ರೇಕ್ಷಕರಂತೆ ನಿಂತಿದ್ದರು. ರೊಚ್ಚಿಗೆದ್ದ ಜನರು ಫಾರ್ಮ್‌ನಲ್ಲಿದ್ದ ಕೈಗೆ ಸಿಕ್ಕ ಕೋಳಿಗಳನ್ನು ಹಾಗೂ ಮೊಟ್ಟೆ ಟ್ರೇಗಳನ್ನು ಎತ್ತಿಕೊಂಡು ಮನೆಯತ್ತ ಮುಖ ಮಾಡಿದರು. ಕೇವಲ ಕೆಲವೇ ನಿಮಿಷಗಳಲ್ಲಿ ಇಡೀ ಫಾರ್ಮ್ ಖಾಲಿಯಾಗಿದೆ. ಫಾರ್ಮ್ ಮಾಲೀಕ ಕೂಡ ಜನರ ಆಕ್ರೋಶ ಕಂಡು ಅಸಹಾಯಕನಾಗಿ ಸುಮ್ಮನಾಗಿದ್ದನು. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

Read more Photos on
click me!

Recommended Stories