ಮಡಿಕೇರಿಯನ್ನು ನಾವು ಮಂಜಿನ ನಗರಿ ಎಂದು ಕರೆಯುವುದೇ ಅಲ್ಲಿ ಮಳೆಗಾಲದಲ್ಲಿ ಬೀಳುವ ಮಂಜಿನಿಂದಾಗಿ. ಈಗ ಮಳೆಗಾಲ ಆರಂಭಕ್ಕೂ ಮುನ್ನ ಮಂಜು ಆವರಿಸಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಕೂರ್ಗ್‌ಗೆ ಪ್ರವಾಸ ಹೋಗುವವರು ಈ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತದ ನಂತರ ಪ್ರವಾಸವನ್ನು ಕಡಿಮೆ ಮಾಡಿದ್ದರು.
ಜೊತೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊಡಗಿಗೆ ಹೋಗುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಕೊಡಗು ಭಾಗದಲ್ಲಿ ಅರಣ್ಯ ನಾಶದಿಂದ ಮಂಜು ಬೀಳುವುದು ಕಡಿಮೆಯಾಗಿದೆ ಎಂದು ಭಾವಿಸಿದ್ದರು.
ಆದರೆ, ಅಸಲಿಯತ್ತೇ ಬೇರೆ. ಕೊಡಗಿನಲ್ಲಿ ನಿಸರ್ಗದ ಮೇಲೆ ಆಗುವ ದಬ್ಬಾಳಿಕೆಯನ್ನು ತಂತಾನೇ ಸರಿ ಮಾಡಿಕೊಳ್ಳಲು ಭೂಕುಸಿತ ಉಂಟಾಗಿ ಪ್ರವಾಹ ಸೃಷ್ಟಿಸಿತ್ತು. ಈಗ ಪುನಃ ಮೂರ್ನಾಲ್ಕು ವರ್ಷಗಳಲ್ಲಿ ತನ್ನ ಪ್ರಕೃತಿ ಸೌಂದರ್ಯವನ್ನು ಮರುಕಳಿಸಿ ನಿಂತಿದೆ.
ಏಪ್ರಿಲ್ ತಿಂಗಳ ಬಿರು ಬೇಸಿಗೆ ಮುಗಿಯುತ್ತಿದ್ದಂತೆಯೇ ಮೇ ತಿಂಗಳ ಮೊದಲ ವಾರದಿಂದಲೂ ರಾಜ್ಯದಲ್ಲಿ ಉತ್ತಮ ಪೂರ್ವ ಮುಂಗಾರು ಕೂಡ ಆಗಮಿಸಿದೆ. ಇದರಿಂದಾಗಿ ಕಳೆದ 15 ದಿನಗಳಿಂದ ಭೂ ತಾಯಿ ಹಸಿರು ಸೀರೆನ್ನುಟ್ಟ ಸುಂದರಿಯಂತೆ ಕಂಗೊಳಿಸುತ್ತಿದ್ದಾಳೆ.
ಹಸಿರು ಸೀರೆಯುಟ್ಟ ಭೂ ತಾಯಿಯ ಮುಡಿಗೆ ಮಲ್ಲಿಗೆ ಮುಡಿಸಿದಂತೆ ಮಂಜು ಆವರಿಸುತ್ತಿದೆ. ಕೆಲವೊಮ್ಮೆ ದಟ್ಟ ಮಂಜು ಆವರಿಸಿದರೆ ಮತ್ತೆ ಕೆಲವೊಮ್ಮೆ ತಿಳಿಯಾಗುತ್ತದೆ. ಹೀಗೆ ಮಂಜಿನ ಆಟ ಮಡಿಕೇರಿಯಲ್ಲಿ ಶುರುವಾಗಿದೆ.
ಬೆಂಗಳೂರಿನಿಂದ ಕೊಡಗಿಗೆ ಹೋಗುವಾಗ ಗಡಿಭಾಗ ಕುಶಾಲನಗರ ತಲುಪುತ್ತಿದ್ದಂತೆಯೇ ಮಂಜಿನ ಹನಿಗಳ ಮುದ ಆರಂಭವಾಗುತ್ತದೆ. ಬೆಟ್ಟ ಗುಡ್ಡಗಳ ಸಾಲಿನಲ್ಲಿ ಹೋಗುವಾಗ ದಟ್ಟ ಮಂಜು ಆವರಿಸಿ ರಸ್ತೆಯೇ ಕವಿದಿರುತ್ತದೆ.
ಮಡಿಕೇರಿಗೆ ಹೋಗುವಾಗ ವಾಹನ ಸವಾರಿ ಮಾಡುವವರು ತುಸು ನಿಧಾನವಾಗಿ ಹೋಗಿ ಪ್ರಕೃತಿಯ ಮಡಿಲಲ್ಲಿ ನಿಂತು ನಿಸರ್ಗದ ಸೌಂದರ್ಯ ಸವಿಯಬಹುದು.
ಚಿತ್ರ ಕೃಪೆ: ವಿಘ್ನೇಶ್ ಭೂತನಕಾಡು