ಪಂಚಮಸಾಲಿ ಮಠದ ಹರಿಹರ ಪೀಠ ವಿವಾದ ವಚನಾನಂದ ಶ್ರೀ ಮಾಜಿ ಸಚಿವ ನಿರಾಣಿಯಿಂದ 2 ಕೋಟಿ ಪಡೆದ ಆರೋಪ!

Published : Apr 16, 2026, 01:31 PM IST

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹೆಚ್.ಎಸ್. ನಾಗರಾಜ ಅವರು, ವಚನಾನಂದ ಶ್ರೀಗಳು ಮಾಜಿ ಸಚಿವ ಮುರುಗೇಶ ನಿರಾಣಿಯಿಂದ 2 ಕೋಟಿ ರೂ. ಪಡೆದು ದುರ್ಬಳಕೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಠದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವ ಆರೋಪ.

PREV
17
ಮುರುಗೇಶ ನಿರಾಣಿಯಿಂದ 2 ಕೋಟಿ ಪಡೆದ ಆರೋಪ

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಒಳಗಿನ ವಿವಾದ ತಾರಕಕ್ಕೇರಿದ್ದು, ಟ್ರಸ್ಟಿ ಹೆಚ್‌.ಎಸ್‌. ನಾಗರಾಜ ಅವರು ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿ ಸಂಚಲನ ಸೃಷ್ಟಿಸಿದ್ದಾರೆ. ದಾವಣಗೆರೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಶ್ರೀ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಂದ ಸುಮಾರು ಎರಡು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ನಾಗರಾಜ ಆರೋಪಿಸಿದರು. ಸಮಾಜದ ಉದ್ದೇಶಕ್ಕಾಗಿ ನೀಡಲಾದ ಆ ಹಣ ಎಲ್ಲಿಗೆ ಹೋಗಿದೆ? ಅದು ನಿಮ್ಮ ಐಷಾರಾಮಿ ಜೀವನಕ್ಕೆ ಬಳಸಲ್ಪಟ್ಟಿದೆಯೇ?” ಎಂದು ಪ್ರಶ್ನಿಸಿದರು. ಈ ಹಣವನ್ನು ಸುಮಾರು ಒಂದೂವರೆ-ಎರಡು ವರ್ಷಗಳ ಹಿಂದೆ ಪಡೆದಿದ್ದು, ಅದರ ಲೆಕ್ಕ ನೀಡಬೇಕೆಂದು ಒತ್ತಾಯಿಸಿದರು.

27
ಈಗ ಮಾತ್ರ ಭಕ್ತರ ಬಗ್ಗೆ ಮಾತನಾಡುತ್ತಿರುವುದು ಏಕೆ?

ವಚನಾನಂದ ಶ್ರೀಗಳು ಸಮಾಜದ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ನಾಗರಾಜ, “ಮಠದಲ್ಲಿ ನಿಷ್ಠೆಯಿಂದ ಇರುವ ಬದಲು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಲಾಗಿದೆ. ಈಗ ಮಾತ್ರ ಭಕ್ತರ ಬಗ್ಗೆ ಮಾತನಾಡುತ್ತಿರುವುದು ಏಕೆ?” ಎಂದು ಪ್ರಶ್ನಿಸಿದರು.

37
ಅಪಾಯಕಾರಿ ಸ್ವಾಮೀಜಿ

ಇದಲ್ಲದೆ, ವಚನಾನಂದ ಶ್ರೀಗಳು ಹಿರಿಯ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ನಡೆದ ಮಾತುಕತೆಗಳನ್ನು ರಹಸ್ಯವಾಗಿ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡು ನಂತರ ಅವನ್ನು ಪ್ರದರ್ಶಿಸುತ್ತಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಯಾವ ನಾಯಕರು ಕೂಡ ವಚನಾನಂದ ಶ್ರೀಗಳೊಂದಿಗೆ ಫೋನ್‌ನಲ್ಲಿ ಮಾತನಾಡಬಾರದು. ಅವರು ಅಪಾಯಕಾರಿ ಸ್ವಾಮೀಜಿ ಎಂದು ಎಚ್ಚರಿಕೆ ನೀಡಿದರು.

47
ಹಣ ನೀಡಿ ಜನರನ್ನು ಕರೆತರಿಸುವುದು ಸರಿಯಲ್ಲ

ಇತ್ತೀಚೆಗೆ ವಚನಾನಂದ ಶ್ರೀಗಳು ಒಬ್ಬರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆದ ವಿಷಯಕ್ಕೂ ಪ್ರತಿಕ್ರಿಯಿಸಿದ ನಾಗರಾಜ, “ಟ್ರಸ್ಟ್‌ನವರು ತಮ್ಮನ್ನು ಮಠದಿಂದ ಹೊರಹಾಕುವ ಸಾಧ್ಯತೆ ಇದೆ ಎಂಬುದನ್ನು ಅರಿತ ನಂತರವೇ ಇಂತಹ ಕ್ರಿಮಿನಲ್ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಹಣ ನೀಡಿ ಜನರನ್ನು ಕರೆತರಿಸುವುದು ಸರಿಯಲ್ಲ,” ಎಂದು ಆರೋಪಿಸಿದರು. ಸಿರಿಗೆರೆ ಶ್ರೀಗಳ ಹೆಸರನ್ನು ಬಳಸುವ ಯೋಗ್ಯತೆ ವಚನಾನಂದ ಶ್ರೀಗಳಿಗೆ ಇಲ್ಲ ಎಂದು ಕಿಡಿಕಾರಿದ ಅವರು, “ಸಿರಿಗೆರೆ ಶ್ರೀಗಳು ನಮ್ಮ ಗುರುಗಳು. ಅವರ ಬಗ್ಗೆ ಮಾತನಾಡಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ,” ಎಂದು ಎಚ್ಚರಿಸಿದರು.

57
ಮಠ ತೊರೆಯಲು 1 ವಾರ ಗಡುವು

ವಚನಾನಂದ ಶ್ರೀಗಳು ಮಠವನ್ನು ತಕ್ಷಣ ತೊರೆಯಬೇಕು ಎಂದು ಒತ್ತಾಯಿಸಿದ ನಾಗರಾಜ, ಅವರಿಗೆ ಒಂದು ವಾರದ ಗಡುವು ನೀಡಿದರು. “ಒಂದು ವಾರದೊಳಗೆ ಮಠವನ್ನು ಗೌರವಯುತವಾಗಿ ಬಿಟ್ಟು ಹೋಗಬೇಕು. ಇಲ್ಲದಿದ್ದರೆ ಸಾವಿರಾರು ಜನರನ್ನು ಸೇರಿಸಿ ಮಠದಿಂದ ಹೊರಹಾಕುವ ಕ್ರಮ ಕೈಗೊಳ್ಳುತ್ತೇವೆ,” ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

67
ತಮ್ಮ ಸಹೋದರ ವಿರುದ್ಧ ಆಕ್ರೋಶ

ಇದೇ ವೇಳೆ, ಹರಿಹರ ಪಂಚಮಸಾಲಿ ಪೀಠದ ವಿವಾದದಲ್ಲಿ ತಮ್ಮ ಸಹೋದರ ಹಾಗೂ ಹರಿಹರದ ಮಾಜಿ ಶಾಸಕ ಹೆಚ್‌.ಎಸ್‌. ಶಿವಶಂಕರ್ ವಿರುದ್ಧವೂ ನಾಗರಾಜ ತೀವ್ರ ವಾಗ್ದಾಳಿ ನಡೆಸಿದರು. “ಸಮಾಜವನ್ನು ಬಳಸಿಕೊಳ್ಳುವವರಾಗಿದ್ದು, ಅದರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ,” ಎಂದು ಆರೋಪಿಸಿದರು.

ಕೂಡಲಸಂಗಮ ಪೀಠ ಹಾಗೂ 2ಎ ಮೀಸಲಾತಿ ಹೋರಾಟದ ಹಣಕಾಸು ವ್ಯವಹಾರಗಳ ಕುರಿತು ಕೂಡ ಪ್ರಶ್ನೆ ಎತ್ತಿದ ನಾಗರಾಜ, “ಎಷ್ಟು ಹಣ ಸಂಗ್ರಹಿಸಲಾಗಿದೆ? ಅದರ ಲೆಕ್ಕ ಎಲ್ಲಿದೆ?” ಎಂದು ಪ್ರಶ್ನಿಸಿದರು. “ಅಕ್ಕಿ ಹಾಗೂ ಇತರ ಧಾನ್ಯಗಳನ್ನೂ ಸಂಗ್ರಹಿಸಿ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದರ ಸಂಪೂರ್ಣ ಲೆಕ್ಕ ನೀಡಬೇಕು,” ಎಂದು ಒತ್ತಾಯಿಸಿದರು.

77
ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ

ಉಮಾಪತಿ ಅವರು ಸಮಾಜದ ಆಸ್ತಿ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಎಲ್ಲರಿಗೂ ಇರಬೇಕು ಎಂದು ಹೇಳಿದ ನಾಗರಾಜ, ತಮ್ಮ ವಿರುದ್ಧ ಟೀಕೆ ಮಾಡಿದವರನ್ನೇ ಈಗ ತಮ್ಮ ಮೇಲೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಒಟ್ಟಾರೆ, ಹರಿಹರ ಪಂಚಮಸಾಲಿ ಪೀಠದ ಒಳಗಿನ ಈ ಸಂಘರ್ಷ ಈಗ ಬಹಿರಂಗವಾಗಿ ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

Read more Photos on
click me!

Recommended Stories