ಶುಕ್ರವಾರ ವಿಧಾನಸೌಧ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಅಂತಾರಾಷ್ಟ್ರೀಯ ಜಿಲ್ಲೆ - 317ರ ಮೂರು ಸಂಚಾರಿ ರಕ್ತ ಸಂಗ್ರಹಣೆ ಮತ್ತು ಸಾಗಾಣಿಕೆ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, 2019-20 ರಲ್ಲಿ ರಕ್ತ ಸಂಗ್ರಹದಲ್ಲಿ ಶೇ.100ರಷ್ಟು ಗುರಿ ಸಾಧಿಸಲಾಗಿತ್ತು, ಆದರೆ ಕೋವಿಡ್ ಸಂದರ್ಭದಲ್ಲಿ ರಕ್ತದಾನ ಕಡಿಮೆಯಾಗಿದೆ. ಹೀಗಾಗಿ ರಕ್ತದಾನ ಮಾಡಲು ಜನರು ಮುಂದಾಗಬೇಕು. 18 ವರ್ಷದಿಂದ 65 ವರ್ಷದೊಳಗಿನ ಆರೋಗ್ಯವಂತ ಜನರು ವರ್ಷಕ್ಕೆ ಮೂರ್ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದೆ ಎಂದರು.
ರಾಜ್ಯದಲ್ಲಿ ಆರೋಗ್ಯ ವಲಯವನ್ನು ಸಧೃಢಗೊಳಿಸಲು ಸಾರ್ವಜನಿಕ ಸೇವಾ ಸಂಸ್ಥೆಗಳು ಮಹತ್ತರ ಕೊಡುಗೆ ನೀಡುತ್ತಿದೆ. ಕೇಂದ್ರ ಸರ್ಕಾರದ ನೀತಿಯಂತೆ ಆರೋಗ್ಯ ವಲಯಕ್ಕೆ ಸಾಂಸ್ಥಿಕ ಸಾಮಾಜಿಕ ನಿಧಿಯ ಶೇ.25ರಷ್ಟನ್ನು ಬಳಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಾಂಸ್ಥಿಕ ಸಾಮಾಜಿಕ ನಿಧಿ ಸಮಿತಿಯನ್ನು ರಚಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ವರ್ಷ 4 ಕೋಟಿ ಯುನಿಟ್‌ನಷ್ಟುರಕ್ತದ ಬೇಡಿಕೆ ಇದೆ. ಶೇ.1ರಷ್ಟು ಜನರು ರಕ್ತ ನೀಡಿದರೂ ಈ ಅವಶ್ಯಕತೆಯನ್ನು ನೀಗಿಸಬಹುದು. ಇದಕ್ಕಾಗಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಕೋವಿಡ್ ಎರಡನೇ ಅಲೆಯ ಹೊಸ್ತಿಲಲ್ಲಿ ನಾವಿದ್ದು, ಈ ಸಂದರ್ಭ ರಕ್ತದಾನ ಹೆಚ್ಚು ಅಗತ್ಯವಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್‌ನ ಜಿ.ಎ.ರಮೇಶ್, ರಾಮಕೃಷ್ಣಪ್ಪ, ಆರೋಗ್ಯ ಇಲಾಖೆಯ ಆಯುಕ್ತ ತ್ರಿಲೋಕಚಂದ್ರ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಪ್ಪ ಉಪಸ್ಥಿತರಿದ್ದರು.