ಏರ್‌ ಶೋ ನಮ್ಮ ರಾಜ್ಯದ ಹೆಮ್ಮೆ: ಸಿಎಂ ಯಡಿಯೂರಪ್ಪ

First Published | Feb 3, 2021, 8:48 AM IST

ಬೆಂಗಳೂರು(ಫೆ.03): 'ಏರೋ ಇಂಡಿಯಾ 2021’ ವೈಮಾನಿಕ ಪ್ರದರ್ಶನ ಯಶಸ್ವಿಗೊಳಿಸಲು ಕೋವಿಡ್‌ ನಿಯಂತ್ರಣ ಕ್ರಮಗಳು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸತತ 13ನೇ ಆವೃತ್ತಿ ಪ್ರದರ್ಶನ ರಾಜ್ಯದಲ್ಲಿ ನಡೆಯುತ್ತಿರುವುದು ಇಡೀ ರಾಜ್ಯದ ಜನರು ಹೆಮ್ಮೆ ಪಡುವ ವಿಚಾರ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಏರೋ ಇಂಡಿಯಾ 2021ರ ಕರ್ಟನ್‌ ರೈಸರ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ದೇಶದಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದರ ನಡುವೆ ಏರೋ ಇಂಡಿಯಾ ಪ್ರದರ್ಶನವನ್ನೂ ನಡೆಸುತ್ತಿದೆ. ಸತತ 13ನೇ ಆವೃತ್ತಿಯೂ ರಾಜ್ಯದಲ್ಲೇ ನಡೆಯುತ್ತಿರುವುದು ಇಡೀ ರಾಜ್ಯದ ಜನರು ಹೆಮ್ಮೆ ಪಡಬೇಕಾದ ವಿಚಾರ. ಬೆಂಗಳೂರಿನಲ್ಲಿ ಈ ಬಾರಿಯೂ ಪ್ರದರ್ಶನ ಏರ್ಪಡಿಸಿರುವುದಕ್ಕೆ ಕೇಂದ್ರ ರಕ್ಷಣಾ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
undefined
ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ, ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಪ್ರದರ್ಶನಕ್ಕೆ ಸಹಕಾರ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಏರ್‌ ಶೋಗೆ ಎಲ್ಲ ರೀತಿಯ ಸಹಕಾರ ನೀಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ರಕ್ಷಣಾ ಕ್ಷೇತ್ರದ ಉಪಕರಣ ಉತ್ಪಾದನೆಯಲ್ಲೂ ತೊಡಗಿದೆ. ಈ ಮೂಲಕ ಕರ್ನಾಟಕ ಸರ್ಕಾರ ವೈಮಾನಿಕ ಉದ್ಯಮ ಕ್ಷೇತ್ರಕ್ಕೆ ಉತ್ತಮ ವೇದಿಕೆ ಒದಗಿಸಿ ಕೊಟ್ಟಿದೆ ಎಂದು ಹೇಳಿದರು.
undefined
Tap to resize

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಉಪಸ್ಥಿತರಿದ್ದರು.
undefined
ಕಾರ್ಯಕ್ರಮದಲ್ಲಿ ವೇದಿಕೆ ಅಲಂಕರಿಸಿದ್ದ ಎಲ್ಲ ಗಣ್ಯರೂ ಮಾಸ್ಕ್‌ ಧರಿಸಿದ್ದರಾದರೂ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಮಾತ್ರ ಮಾಸ್ಕ್‌ ಹಾಕಿರಲಿಲ್ಲ. ಇದನ್ನು ಗಮನಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮಾಸ್ಕ್‌ ಧರಿಸುವಂತೆ ಅವರಿಗೆ ಸೂಚಿಸಿದರು. ಬಳಿಕ ಅಶ್ವತ್ಥ ನಾರಾಯಣ ಅವರು ತಮ್ಮ ಆಪ್ತ ಸಹಾಯಕರಿಂದ ಮಾಸ್ಕ್‌ ತರಿಸಿಕೊಂಡು ಧರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಸನ್ಮಾನ ಮಾಡುವಾಗ ಮುಖ ಕಾಣುವಂತೆ ಮಾಸ್ಕ್‌ ಕೆಳಗೆ ಸರಿಸುವಂತೆ ಅಶ್ವತ್ಥ ನಾರಾಯಣ ಮನವಿ ಮಾಡಿದರು. ಅದರಂತೆ ರಾಜನಾಥ್‌ ಸಿಂಗ್‌ ಅವರು ಮಾಸ್ಕ್‌ ಸರಿಸುತ್ತಿದ್ದಂತೆ ವೇದಿಕೆಯ ಎಲ್ಲ ಗಣ್ಯರೂ ಮಾಸ್ಕ್‌ ಸರಿಸಿದರು.
undefined

Latest Videos

click me!