ಕೊಪ್ಪಳ: ಜಾತ್ರೆ ಸಾಕ್ಷೀಕರಿಸಿದ ಲಕ್ಷಾಂತರ ಭಕ್ತರು..!

First Published Jan 31, 2021, 11:13 AM IST

ಕೊಪ್ಪಳ(ಜ.31): ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆ ಇರದೇ ಸರಳವಾಗಿ ಅಜ್ಜನ ಜಾತ್ರೆ ನಡೆಸಲು ನಿರ್ಧರಿಸಿ ಪ್ರತಿ ಬಾರಿಯ ಸಂಪ್ರದಾಯದಂತೆ ಮುಸ್ಸಂಜೆಯ ಬದಲು ಮುಂಜಾನೆಯೇ ರಥೋತ್ಸವ ನಡೆಸಿಲಾಯಿತಾದರೂ ಸಹ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ರಥೋತ್ಸವನ್ನು ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಕಣ್ತುಂಬಿಕೊಂಡು ಭಕ್ತಿಭಾವ ಮೆರೆದರು.
 

ಹತ್ತಾರು ರೀತಿಯ ಶಿಷ್ಟಾಚಾರ, ಕಟ್ಟಳೆ, ಬಿಗು ಪೊಲೀಸ್‌ ಬಂದೋಬಸ್ತ್‌, ರಥ ಬೀದಿಯನ್ನೇ ನೋ ಮ್ಯಾನ್‌ ಏರಿಯಾ ಮಾಡಿದರೂ ಸಹ ಭಕ್ತರು ಅದ್ಯಾವುದನ್ನೂ ಲೆಕ್ಕಿಸದೇ ದಶ ದಿಕ್ಕುಗಳಿಂದ ಗವಿಸಿದ್ದೇಶ್ವರ ಜಾತ್ರೆಯ ಪಕ್ಕದ ಮೈದಾನಕ್ಕೆ, ಅಕ್ಕಪಕ್ಕದ ರಸ್ತೆಗಳತ್ತ ಹರಿದು ಬಂದರು. ಉತ್ತತ್ತಿ, ಬಾಳೆಹಣ್ಣು ಎಸೆದು ಪುನೀತರಾದರು. ಜನಸಾಗರ ಸೇರಬಾರದೆಂಬ ಉದ್ದೇಶದಿಂದ ಜಾತ್ರೆಯ ಸಮಯವನ್ನು ಶುಕ್ರವಾರ ರಾತ್ರಿಯ ವರೆಗೂ ಗೌಪ್ಯವಾಗಿಯೇ ಇಡಲಾಗಿತ್ತು. ರಾತ್ರಿ. 8.30 ರ ಹೊತ್ತಿಗೆ ಪ್ರಕಟಿಸಲಾಯಿತಾದರೂ, ಯಾರೂ ಬರಬಾರದು, ಲೈವ್‌ ಪ್ರಸಾರ ಇದೆ. ಮನೆಯಲ್ಲೇ ವೀಕ್ಷಿಸಿ ಎಂದು ಗವಿಸಿದ್ಧೇಶ್ವರ ಶ್ರೀಗಳು ಮನವಿ ಮಾಡಿಕೊಂಡರೂ ಭಕ್ತರು ಜಾತ್ರೆ ತಪ್ಪಿಸಿಕೊಳ್ಳಲು ಸಿದ್ಧರಿರಲಿಲ್ಲ. ಶ್ರೀಗಳ ಮಾತು ಆಲಿಸದೇ ಇರಲು ತಯಾರಿರಲಿಲ್ಲ. ಭಕ್ತಸಾಗರ ಜೇನು ಹುಳುವಿನಂತೆ ಮೈದಾನಕ್ಕೆ ಹರಿದು ಬಂತು.
undefined
ಸಾಮಾನ್ಯವಾಗಿ ಪ್ರತಿ ವರ್ಷ ಸಂಜೆ ನಡೆಯುತ್ತಿದ್ದ ರಥೋತ್ಸವಕ್ಕೆ 6-7 ಲಕ್ಷ ಭಕ್ತರ ಹರ್ಷೋದ್ಘಾರವಿರುತ್ತಿತ್ತು. ರಥಬೀದಿಯುದ್ದಕ್ಕೂ ಕಾಂಪೌಂಡ್‌ ನಿರ್ಮಿಸಿ, ಅಲ್ಲಲ್ಲಿ ಇದ್ದ ದಾರಿಗಳಿಗೆ ಬ್ಯಾರಿಕೇಡ್‌ ಹಾಕಿ, ಯಾರೂ ಒಳಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಯಿತು. ಪ್ರತಿವರ್ಷ ರಥವನ್ನು ಎಳೆಯುತ್ತಿದ್ದ ಭೋವಿ ಸಮುದಾಯದವರು ಮಾತ್ರ ಭಾಗವಹಿಸಿ ರಥ ಎಳೆದರು. ಅವರಿಗೆ ಸಾಥ್‌ ನೀಡಲು ಮಠದ ವ್ಯಾಪ್ತಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ , ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
undefined
ಇನ್ನುಳಿದಂತೆ ನೋ ಮ್ಯಾನ್‌ ಏರಿಯಾದಲ್ಲಿ ಚುನಾಯಿತಿ ಪ್ರತಿನಿಧಿಗಳು, ಮಾಧ್ಯಮದವರು, ಹಿರಿಯರು, ಅಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮಾತ್ರ ಪಾಲ್ಗೊಂಡಿದ್ದರು. ಉಳಿದಂತೆ ಇಡೀ ರಥಬೀದಿ ಬಣ ಬಣ ಎನ್ನುತ್ತಿತ್ತು. ಇಂಥ ರಥ ಬೀದಿಯಲ್ಲಿ ಗಜಗಾಂಭಿರ್ಯದಿಂದ ಮಹಾರಥೋತ್ಸವ ಸಾಂಗವಾಗಿ ನಡೆಯಿತು.
undefined
ಪ್ರತಿ ವರ್ಷದಂತೆ ನಡೆಯುವ ಎಲ್ಲ ಧಾರ್ಮಿಕ ಸಂಪ್ರದಾಯಗಳನ್ನು ಆಚರಣೆ ಮಾಡಲಾಯಿತು. ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ನಾನಾ ವಾದ್ಯ ವೃಂದಗಳ ಮೆರವಣಿಗೆಯಲ್ಲಿ ಕರೆತರಲಾಯಿತು. ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಾರಥ್ಯದಲ್ಲಿ ಹರ-ಗುರುಚರ ಮೂರ್ತಿಗಳು ಭಾಗವಹಿಸಿದ್ದರು.
undefined
ಉತ್ಸವ ಮೂರ್ತಿ ಆಗಮಿಸುತ್ತಿದ್ದಂತೆ ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ, ಉತ್ಸವ ಮೂರ್ತಿಯನ್ನು ರಥದಲ್ಲಿ ಕೂಡಿಸಲಾಯಿತು.
undefined
ಕೋವಿಡ್‌ ಗೆದ್ದ 80 ವರ್ಷದ ಹಿರಿಯ ಸ್ವಾಮೀಜಿಗಳಾದ ಕುಷ್ಟಗಿ ತಾಲೂಕಿನ ಬಿಜಕಲ್‌ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಸವ ಬಾವುಟ ಹಾರಿಸುತ್ತಿದ್ದಂತೆ ಮಹಾರಥೋತ್ಸವ ಪ್ರಾರಂಭವಾಯಿತು. ಜನರೇ ಇಲ್ಲದ ರಥಬೀದಿಯಲ್ಲಿ ಮಹಾರಥ ಪಾದಗಟ್ಟೆಯನ್ನು ತಲುಪಿ, ವಾಪಸ್‌ ಬಂದು ತನ್ನ ಸ್ಥಾನಕ್ಕೆ ನಿಲ್ಲುತ್ತಿದ್ದಂತೆ ನೆರೆದವರು ಚಪ್ಪಾಳೆ ತಟ್ಟಿ, ಪುನೀತರಾದರು. ಗೆದ್ದ ಭಾವದಲ್ಲಿ ಘೋಷಣೆ, ಜೈಕಾರ ಹಾಕಿದರು.
undefined
ಶಿವಲಿಂಗ ಮಹಾಸ್ವಾಮಿಗಳಿಗೆ ಕಳೆದ ಸೆಪ್ಟಂಬರ್‌ನಲ್ಲಿ ಅನಾರೋಗ್ಯ ಉಂಟಾಗಿತ್ತು. ಆಗ ಶ್ರೀಗಳು ಕೊಪ್ಪಳ ಗವಿ ಮಠಕ್ಕೆ ಆಗಮಿಸಿ ಅಲ್ಲಿಯೇ ತಂಗಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಗವಿಸಿದ್ಧೇಶ್ವರ ಶ್ರೀಗಳು ಅವರನ್ನು ಕೊಪ್ಪಳ ಕೆ.ಎಸ್‌. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಶ್ರೀಗಳ ಆರೈಕೆ ಮಾಡಿದರು. ಧೈರ್ಯ ತುಂಬಿದರು. ನಿತ್ಯವೂ ಇವರೊಂದಿಗೆ ವೀಡಿಯೋ ಕಾಲ್‌ ಮಾಡಿ ಮಾತನಾಡಿ, ಧೈರ್ಯ ತುಂಬಿದರು. ಶ್ರೀಗಳು ಗುಣಮುಖವಾದರು.
undefined
ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಕೊರೋನಾದಿಂದ ಜಗತ್ತೇ ತಲ್ಲಣಗೊಂಡಿದೆ. ಮಾಡಬಾರದ ಹಾನಿ ಮಾಡಿದೆ. ಈ ಕೊಪ್ಪಳ ಜಾತ್ರೆಯಿಂದ ಸಂಪೂರ್ಣ ನಾಶವಾಗಲಿ ಎಂದು ಆಶಿಸಿದರು.
undefined
ನನಗೆ ಕೊರೋನಾ ಬಂದು ಜರ್ಝರಿತನಾಗಿದ್ದೆ, ನನ್ನ ಆಯಸ್ಸು ಮುಗಿಯಿತು ಎಂದಾಗ ನನ್ನನ್ನು ಕಾಪಾಡಿದ್ದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು. ಅವರು ಇಲ್ಲದಿದ್ದರೆ ನಾನು ಉಳಿಯುತ್ತಿರಲಿಲ್ಲ. ಇಂಥ ಕೊರೋನಾ ಸಂಪೂರ್ಣ ತೊಲಗಬೇಕಾಗಿದೆ ಎಂದರು.
undefined
ರಥಬೀದಿಯಲ್ಲಿ ನೋ ಮ್ಯಾನ್‌ ಏರಿಯಾ ಮಾಡಲಾಗಿದ್ದರೂ ಅದರ ಹೊರತಾಗಿ ಇದ್ದ ಗವಿಮಠ ಮೈದಾನದಲ್ಲಿ, ರಸ್ತೆಗಳಲ್ಲಿ, ಕಟ್ಟಡಗಳ ಮೇಲೆ, ಗುಡ್ಡದ ಮೇಲೆ ಜನಸಾಗರವೇ ಸೇರಿತ್ತು. ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಬರುವ ಗಂಜ್‌ ರಸ್ತೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
undefined
ದೂರದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಎಸೆದ ಉತ್ತತ್ತಿ ಮತ್ತು ಬಾಳೆಹಣ್ಣ ಆಯ್ದುಕೊಳ್ಳುವವರೇ ಇಲ್ಲದಂತಾಗಿತ್ತು. ಪ್ರತಿವರ್ಷ ಭಕ್ತರು ಎಸೆಯುತ್ತಿದ್ದ ಬಾಳೆ ಹಣ್ಣು ಮತ್ತು ಉತ್ತತ್ತಿ ನೆಲಕ್ಕೆ ಬೀಳುವ ಮುನ್ನವೇ ಭಕ್ತರು ಆಯ್ದುಕೊಳ್ಳುತ್ತಿದ್ದರು.
undefined
ಕೋವಿಡ್‌ ಇರುವ ಹಿನ್ನೆಲೆಯಲ್ಲಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜಾತ್ರೆಗೆ ಬರುವ ಭಕ್ತರಿಗೆ ಅಲ್ಲಲ್ಲಿ ಉಚಿತವಾಗಿ ಮಾಸ್ಕ್‌ ವಿತರಣೆ ಮಾಡಲಾಯಿತು. ಇನ್ನು ದಾರಿಗಳಲ್ಲಿ ಹತ್ತಾರು ಕಡೆ ಸ್ಯಾನಿಟೈಸರ್‌ ಹಾಕ​ಲಾಗುತ್ತಿತ್ತು.
undefined
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಶಾಸಕರಾದ ಅಮರೇಗೌಡ ಭಯ್ಯಾಪುರ, ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್‌, ಬಸವರಾಜ ದಡೇಸ್ಗೂರು, ಪರಣ್ಣ ಮುನವಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್‌, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸಿ.ವಿ. ಚಂದ್ರಶೇಖರ, ಕೆಡಿಪಿ ಸದಸ್ಯ ಅಮರೇಶ ಕರಡಿ, ಕೆ.ಎಂ. ಸಯ್ಯದ್‌ ಮೊದಲಾದವರು ಇದ್ದರು.
undefined
click me!