ಚಾರ್ಮಾಡಿ ಘಾಟಿಯಲ್ಲಿ ಲಘು ಭೂಕುಸಿತ, ದಟ್ಟ ಮಂಜಿನಲ್ಲಿ ರಸ್ತೆ ಸರಿಯಾಗಿ ಕಾಣಿಸದೆ ಪಲ್ಟಿಯಾದ ಕಾರು!

Published : Jul 08, 2026, 10:19 AM IST

ಮುಂಗಾರು ಮಳೆಗೆ ಚಾರ್ಮಾಡಿ ಘಾಟಿಯು ಹಸಿರಿನಿಂದ ಕಂಗೊಳಿಸುತ್ತಿದ್ದು, ಮೈದುಂಬಿ ಹರಿಯುವ ಜಲಪಾತಗಳು ಮತ್ತು ದಟ್ಟ ಮಂಜು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಅಲ್ಲಲ್ಲಿ ಸಂಭವಿಸುತ್ತಿರುವ ಲಘು ಗುಡ್ಡ ಕುಸಿತ ಈ ಮಾರ್ಗದಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.

PREV
16
ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ಕೊಂಡಿ

ಬೆಳ್ತಂಗಡಿ/ಮೂಡಿಗೆರೆ: ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಕೊಂಡಿ, ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮುಂಗಾರು ಮಳೆ ಭಾರಿ ಚುರುಕಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ಘಾಟಿ ಪ್ರದೇಶ ಹಸಿರು ಹೊದ್ದು ನಳನಳಿಸುತ್ತಿದ್ದು, ಪ್ರಕೃತಿ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಕಡಿದಾದ 11 ಹೇರ್‌ಪಿನ್ ತಿರುವುಗಳನ್ನು ಹೊಂದಿರುವ ಈ 25 ಕಿಲೋಮೀಟರ್ ಉದ್ದದ ವನ್ಯ ಪರಿಸರದಲ್ಲಿ ಇದೀಗ ಮಳೆಗಾಲದ ಸೌಂದರ್ಯ ವರ್ಣನಾತೀತವಾಗಿದೆ.

26
ದಟ್ಟವಾಗಿ ಆವರಿಸಿದ ಮಂಜು

ಈ ಬಾರಿ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಅಬ್ಬರ ಕಡಿಮೆಯಿದ್ದ ಕಾರಣ ಘಾಟಿಯಾದ್ಯಂತ ಹಸಿರು ಕಂಗೊಳಿಸುತ್ತಿದೆ. ವರ್ಷವಿಡೀ ಸುಂದರವಾಗಿರುವ ಚಾರ್ಮಾಡಿ, ಮಳೆಗಾಲದಲ್ಲಿ ಮತ್ತಷ್ಟು ಆಕರ್ಷಕ ರೂಪ ತಳೆದಿದೆ. ಸದ್ಯ ಘಾಟಿ ವ್ಯಾಪ್ತಿಯಲ್ಲಿ 2 ಬೃಹತ್ ಜಲಪಾತಗಳು, 10 ಸಾಮಾನ್ಯ ಗಾತ್ರದ ಜಲಪಾತಗಳು ಹಾಗೂ 15ಕ್ಕೂ ಹೆಚ್ಚು ಪುಟ್ಟ ಪುಟ್ಟ ಹಳ್ಳ-ತೊರೆಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹೋದಂತೆಲ್ಲಾ ದಟ್ಟವಾಗಿ ಆವರಿಸುವ ಮಂಜು, ಸದಾ ಸುರಿಯುವ ಜಿಟಿಜಿಟಿ ಮಳೆ ಹಾಗೂ ಸುತ್ತಲಿನ ಕಣಿವೆಗಳ ದೃಶ್ಯ ಪ್ರಯಾಣಿಕರಿಗೆ ಸ್ವರ್ಗದ ಅನುಭೂತಿ ನೀಡುತ್ತಿದೆ.

36
ಅಲ್ಲಲ್ಲಿ ಲಘು ಗುಡ್ಡ ಕುಸಿತ: ಹದ್ದಿನ ಕಣ್ಣಿಟ್ಟ ಹೆದ್ದಾರಿ ಇಲಾಖೆ

ಭಾರಿ ಮಳೆಯಿಂದಾಗಿ ಘಾಟಿಯ ಮೇಲ್ಭಾಗದ ನೀರು ರಭಸವಾಗಿ ಹರಿದು ಬರುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಂಡು ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಬಿದಿರುತಳ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮಣ್ಣಿನೊಂದಿಗೆ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ. ಅದೃಷ್ಟವಶಾತ್, ಮಣ್ಣು ರಸ್ತೆಯ ಮುಖ್ಯ ಭಾಗಕ್ಕೆ ಕುಸಿಯದ ಕಾರಣ ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆಯಾಗಿಲ್ಲ. ಆದರೆ, ಘಾಟಿ ರಸ್ತೆಯ ಚರಂಡಿಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಗುಡ್ಡ ಕುಸಿತ ಹಾಗೂ ಮರಗಳು ಧರೆಗುರುಳುವ ಸಾಧ್ಯತೆ ಹೆಚ್ಚಿರುವುದರಿಂದ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮಾಜಸೇವಕರು ಕಟ್ಟೆಚ್ಚರ ವಹಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಎರಡೂ ವಿಭಾಗಗಳಿಂದ ರಸ್ತೆ ಸಂಚಾರ ಸುಗಮಗೊಳಿಸಲು ಜೆಸಿಬಿ ಯಂತ್ರಗಳು ಹಾಗೂ ಅಗತ್ಯ ಕಾರ್ಮಿಕರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹಿಂದೆಂದಿಗಿಂತ ರಸ್ತೆ ಅಗಲಗೊಂಡಿರುವುದು ಹಾಗೂ ತಡೆಗೋಡೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು ಸದ್ಯದ ದೊಡ್ಡ ಸಮಾಧಾನವಾಗಿದೆ.

46
ಮಲೆಯ ಮಾರುತ ಬಳಿ ನಿಯಂತ್ರಣ ತಪ್ಪಿ ಕಾರ್ ಪಲ್ಟಿ!

ಘಾಟಿಯುದ್ದಕ್ಕೂ ಸದಾ ದಟ್ಟವಾದ ಮಂಜು ಕವಿದ ವಾತಾವರಣ ಇರುವುದರಿಂದ ವಾಹನ ಸವಾರರಿಗೆ ಮುಂದಿರುವ ರಸ್ತೆ ಸರಿಯಾಗಿ ಕಾಣಿಸುತ್ತಿಲ್ಲ. ಚಾರ್ಮಾಡಿ ಘಾಟ್‌ನ ಪ್ರಸಿದ್ಧ ‘ಮಲೆಯ ಮಾರುತ’ ಪ್ರವಾಸಿ ಮಂದಿರದ ಬಳಿ ರಸ್ತೆ ಸರಿಯಾಗಿ ಕಾಣಿಸದೆ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ವೈದ್ಯಕೀಯ, ಧಾರ್ಮಿಕ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ, ಚಾಲಕರು ಮುಂಜಾಗ್ರತೆ ವಹಿಸಿ ಅತ್ಯಂತ ನಿಧಾನವಾಗಿ ವಾಹನ ಚಾಲನೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.

ಪ್ರವಾಸಿಗರ ಬೇಜವಾಬ್ದಾರಿತನ

ತುಂಬಿ ಹರಿಯುತ್ತಿರುವ ಜಲಪಾತಗಳನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಚಾರ್ಮಾಡಿಯತ್ತ ಲಗ್ಗೆ ಇಡುತ್ತಿದ್ದಾರೆ. ಆದರೆ, ಕೆಲವರ ಬೇಜವಾಬ್ದಾರಿಯುತ ವರ್ತನೆ ಇತರ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

56
ಘಾಟಿಯಲ್ಲಿ ಹೆಚ್ಚಿದ ಅನೈತಿಕ ಚಟುವಟಿಕೆಗಳು

ಕಿರಿದಾದ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ನೃತ್ಯ ಮಾಡುವುದು, ರೀಲ್ಸ್ ಮಾಡುವುದು. ಧೂಮಪಾನ ಹಾಗೂ ಮದ್ಯಪಾನದಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗಿದೆ. ರಸ್ತೆ ಬದಿಯ ಅಪಾಯಕಾರಿ ಕಲ್ಲು ಬಂಡೆಗಳನ್ನು ಏರುವುದು ಹಾಗೂ ಪ್ರಪಾತದ ತಡೆಗೋಡೆಗಳ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುವ ಸಾಹಸಕ್ಕೆ ಪ್ರವಾಸಿಗರು ಕೈಹಾಕುತ್ತಿದ್ದಾರೆ. ಘಾಟಿ ಪ್ರದೇಶದಲ್ಲಿ ಪೊಲೀಸರ ಗಸ್ತು ನಿರಂತರವಾಗಿದ್ದರೂ, ಪ್ರವಾಸಿಗರ ಈ ಆಟಾಟೋಪಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದಲ್ಲಿ ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.

66
ನಿಮ್ಮ ಸುರಕ್ಷತೆಗಾಗಿ ಈ 5 ಸೂತ್ರಗಳನ್ನು ಪಾಲಿಸಿ

ಘಾಟಿಯ ಸೌಂದರ್ಯವನ್ನು ಚಲಿಸುವ ವಾಹನದಲ್ಲೇ ವೀಕ್ಷಿಸುವುದು ಕ್ಷೇಮ. ಅದನ್ನು ಬಿಟ್ಟು ಹಠ ಹಿಡಿದು ವಾಹನ ನಿಲ್ಲಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಪ್ರಸ್ತುತ ಹವಾಮಾನದ ಹಿನ್ನೆಲೆಯಲ್ಲಿ ಪ್ರಯಾಣಿಕರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸುವುದು ಕಡ್ಡಾಯ:

  • ಘಾಟಿಯ ಯಾವುದೇ ತಿರುವುಗಳಲ್ಲಿ, ಜಲಪಾತಗಳ ಬಳಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ.
  • ಮೇಲ್ಭಾಗದಲ್ಲಿ ಹಠಾತ್ ಮಳೆ ಹೆಚ್ಚಾದರೆ ಹಳ್ಳಗಳಲ್ಲಿ ನೀರಿನ ಹರಿವು ಕ್ಷಣಾರ್ಧದಲ್ಲಿ ಹೆಚ್ಚಾಗುವುದರಿಂದ ಪ್ರವಾಸಿಗರು ನೀರಿಗೆ ಇಳಿಯಬಾರದು.
  • ಇಡೀ ಘಾಟಿ ಪರಿಸರದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಲಭ್ಯವಿರುವುದಿಲ್ಲ. ಆದ್ದರಿಂದ ತುರ್ತು ಸಂದರ್ಭದಲ್ಲಿ ತಕ್ಷಣದ ಸಂಪರ್ಕ ಸಾಧ್ಯವಿರುವುದಿಲ್ಲ, ಜಾಗ್ರತೆ ಇರಲಿ.
  • ಘಾಟಿಯಲ್ಲಿ ಮಧ್ಯೆ ಯಾವುದೇ ಅಂಗಡಿಗಳಿಲ್ಲದ ಕಾರಣ, ಪ್ರಯಾಣದ ಸಮಯದಲ್ಲಿ ಅಗತ್ಯವಿರುವ ಆಹಾರ ಮತ್ತು ಕುಡಿಯುವ ನೀರನ್ನು ಜೊತೆಯಲ್ಲೇ ಇಟ್ಟುಕೊಳ್ಳುವುದು ಉತ್ತಮ.
  • ಮಂಜು ಮತ್ತು ಗುಡ್ಡ ಕುಸಿತದ ಭೀತಿ ಇರುವುದರಿಂದ ಆದಷ್ಟು ರಾತ್ರಿಯ ವೇಳೆಯ ಪ್ರಯಾಣವನ್ನು ಸಂಪೂರ್ಣವಾಗಿ ಅವಲಂಬಿಸದಿರುವುದು ಕ್ಷೇಮ. ಅಲ್ಲದೆ ಈ ಕಾಡುಗಳಲ್ಲಿ ಕಾಡಾನೆ, ಚಿರತೆ ಸೇರಿದಂತೆ ವನ್ಯಜೀವಿಗಳ ತಿರುಗಾಟವಿರುವುದರಿಂದ ರಾತ್ರಿ ಸಂಚಾರ ಅಪಾಯಕಾರಿ.
Read more Photos on
click me!

Recommended Stories