ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ, ಬೆಂಗಳೂರಿನ 'ಗೃಹಜ್ಯೋತಿ' ಯೋಜನೆ ಫಲಾನುಭವಿಗಳಿಗೆ ಬೆಸ್ಕಾಂ ದುಬಾರಿ ವಿದ್ಯುತ್ ಬಿಲ್ ನೀಡಿ ಆಘಾತ ನೀಡಿದೆ. ತಾಂತ್ರಿಕ ದೋಷದ ಕಾರಣ ಹೇಳಲಾಗುತ್ತಿದ್ದರೂ, ಸತತ ಎರಡನೇ ತಿಂಗಳೂ ಸಾವಿರಾರು ರೂಪಾಯಿಗಳ ಬಿಲ್ ಬಂದಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿದ್ದ ರಾಜಧಾನಿ ಜನತೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತೀವ್ರ 'ಕರೆಂಟ್ ಶಾಕ್' ನೀಡಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಾದ ‘ಗೃಹಜ್ಯೋತಿ’ ಅಡಿಯಲ್ಲಿ ಈವರೆಗೆ 'ಜೀರೋ ಬಿಲ್' (Zero Bill) ಪಡೆಯುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಕೈಗೆ ದಿಢೀರನೇ ಸಾವಿರಾರು ರೂಪಾಯಿಗಳ ದುಬಾರಿ ಬಿಲ್ ತಲುಪಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ.
24
ಸಣ್ಣ ಮನೆಗಳಿಗೂ ₹4 ರಿಂದ ₹5 ಸಾವಿರ ಬಿಲ್!
ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮಖಾನ್ ಕಾಂಪೌಂಡ್ ಹಾಗೂ ವೈಯಾಲಿಕಾವಲ್ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಈ ಅವಾಂತರ ಬೆಳಕಿಗೆ ಬಂದಿದೆ. ಒಂದು ಸಣ್ಣ ರೂಮ್‌ನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೂ ಬರೋಬ್ಬರಿ ₹4,000 ದಿಂದ ₹5,000 ದವರೆಗೂ ಕರೆಂಟ್ ಬಿಲ್ ನೀಡಲಾಗಿದೆ. ಹಬ್ಬದ ಹೊತ್ತಲ್ಲೇ ಬಂದಿರುವ ಈ ದುಬಾರಿ ಬಿಲ್ ನೋಡಿ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
34
ತಾಂತ್ರಿಕ ದೋಷವೋ? ಸರ್ಕಾರದ ಜೇಬು ತುಂಬಿಸುವ ತಂತ್ರವೋ?
ಕಳೆದ ತಿಂಗಳೂ ಇದೇ ರೀತಿ ದುಪ್ಪಟ್ಟು ಬಿಲ್ ಬಂದಾಗ, ‘ಮೀಟರ್ ತಂತ್ರಾಂಶ ಪರಿಷ್ಕರಣೆ (Software Upgradation) ವೇಳೆ ಉಂಟಾದ ತಾಂತ್ರಿಕ ಸಮಸ್ಯೆ, ಮುಂದಿನ ತಿಂಗಳು ಸರಿಹೋಗಲಿದೆ’ ಎಂದು ಬೆಸ್ಕಾಂ ಸಬೂಬು ನೀಡಿತ್ತು. ಆದರೆ, ಈ ತಿಂಗಳೂ ಸಹ ಅದೇ ಸಮಸ್ಯೆ ಪುನರಾವರ್ತನೆಯಾಗಿದ್ದು, ಗ್ರಾಹಕರು ಗೊಂದಲಕ್ಕೊಳಗಾಗಿದ್ದಾರೆ. ಇದು ಕೇವಲ ತಾಂತ್ರಿಕ ಎಡವಟ್ಟೋ ಅಥವಾ ಉಚಿತ ವಿದ್ಯುತ್ ನೀಡುತ್ತಿರುವ ನೆಪದಲ್ಲಿ ಹಿಂಬಾಗಿಲಿನಿಂದ ಜನರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನವೋ ಎಂಬ ಅನುಮಾನವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸುತ್ತಿದ್ದಾರೆ.
ಶಿವಾಜಿನಗರ, ವೈಯಾಲಿಕಾವಲ್ ಮಾತ್ರವಲ್ಲದೆ ಬೆಂಗಳೂರಿನ ಹಲವೆಡೆ ಕಳೆದ ಎರಡು ತಿಂಗಳಿಂದ ನಿರಂತರವಾಗಿ ದುಪ್ಪಟ್ಟು ಬಿಲ್‌ಗಳು ಬರುತ್ತಿವೆ. ಪ್ರತಿ ತಿಂಗಳು 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದರೂ, ಗೃಹಜ್ಯೋತಿ ಯೋಜನೆ ಅನ್ವಯವಾಗದೆ ಲಕ್ಷಾಂತರ ರೂಪಾಯಿ ಸಂಗ್ರಹಣೆಗೆ ಬೆಸ್ಕಾಂ ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಬಡ ಕುಟುಂಬಗಳು ಪರದಾಡುತ್ತಿದ್ದು, ಬೆಸ್ಕಾಂ ಹಾಗೂ ಇಂಧನ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಈ ಬಿಲ್ ಗೊಂದಲವನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.