ಬೆಂಗಳೂರಲ್ಲಿ ಸಾಕು ನಾಯಿ ಡೆಡ್ಲಿ ಅಟ್ಯಾಕ್, ಮಹಿಳೆಯ ಮುಖ ವಿರೋಪ, ಕತ್ತು-ತಲೆ ಭಾಗಕ್ಕೆ 50ಕ್ಕೂ ಹೆಚ್ಚು ಹೊಲಿಗೆ!

Published : Jan 30, 2026, 04:56 PM IST

ಬೆಂಗಳೂರಿನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದೆ.  ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ನಾಯಿಯ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಈ ಘಟನೆಯು ನಗರದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆ,ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.

PREV
17
ಮಹಿಳೆ ಕುತ್ತಿಗೆ ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯ

ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಇದೀಗ ಬೆಂಗಳೂರಿನಲ್ಲಿ ಆತಂತಕಾರಿಯಾದ ಘಟನೆ ನಡೆದಿದೆ. ನಗರದ ಹೆಚ್‌.ಎಸ್‌.ಆರ್ ಲೇಔಟ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಏಕಾಏಕಿ ಭೀಕರವಾಗಿ ದಾಳಿ ನಡೆಸಿದ ಘಟನೆ ಜನವರಿ 26ರಂದು ನಡೆದಿದ್ದು, ನಗರದ ನಿವಾಸಿಗಳಲ್ಲಿ ಭೀತಿಗೆ ಕಾರಣವಾಗಿದೆ. ದಾಳಿಯಲ್ಲಿ ಮಹಿಳೆ ಕುತ್ತಿಗೆ ಸೇರಿದಂತೆ ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಹೆಚ್‌.ಎಸ್‌.ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ, ಬೆಳಿಗ್ಗೆ ಸುಮಾರು 6 ಗಂಟೆ 54 ನಿಮಿಷಕ್ಕೆ ನಡೆದಿದೆ. ಮಹಿಳೆ ಪ್ರತಿದಿನದಂತೆ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದಾಗಲೇ, ಸಮೀಪದ ಮನೆಯೊಂದಕ್ಕೆ ಸೇರಿದ ಸಾಕು ನಾಯಿ ಏಕಾಏಕಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

27
ಕುತ್ತಿಗೆಗೆ ಕಚ್ಚಿದ ನಾಯಿ

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ನಾಯಿ ಮಹಿಳೆಯ ಕುತ್ತಿಗೆಗೆ ಕಚ್ಚಿ ಬಿಡದೇ ಹಿಡಿದುಕೊಂಡಿದ್ದು, ಆಕೆಯನ್ನು ರಕ್ಷಿಸಲು ಮುಂದಾದ ವ್ಯಕ್ತಿಯ ಮೇಲೆಯೂ ನಾಯಿ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗದ್ದಲ ಉಂಟಾಗಿತ್ತು. ದಾಳಿಯಿಂದ ಮಹಿಳೆಯ ಮುಖ, ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ವೈದ್ಯರು ಮುಖ ಮತ್ತು ಕತ್ತಿನ ಭಾಗದಲ್ಲಿ 50ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

37
ಸಾಕು ನಾಯಿಯ ನಿರ್ಲಕ್ಷ್ಯ ಆರೋಪ

ದಾಳಿ ನಡೆಸಿದ ನಾಯಿ ಅಮರೇಶ್ ರೆಡ್ಡಿ ಎಂಬ ವ್ಯಕ್ತಿಗೆ ಸೇರಿದ ಸಾಕು ನಾಯಿ. ನಾಯಿಯನ್ನು ಸೂಕ್ತವಾಗಿ ಕಟ್ಟಿಹಾಕದೇ ಅಥವಾ ನಿಯಂತ್ರಣವಿಲ್ಲದೆ ಬಿಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆಯ ಪತಿ ಹೆಚ್‌.ಎಸ್‌.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಮರೇಶ್ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ. ನಾಯಿಯ ಮಾಲೀಕರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ

47
ಪೊಲೀಸ್ ತನಿಖೆ ಆರಂಭ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ, ಸಾಕು ನಾಯಿಯನ್ನು ಹೇಗೆ ಮತ್ತು ಯಾವ ಪರಿಸ್ಥಿತಿಯಲ್ಲಿ ಬಿಡಲಾಗಿತ್ತು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಘಟನೆ ಬಳಿಕ ಹೆಚ್‌.ಎಸ್‌.ಆರ್ ಲೇಔಟ್ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. “ಸಾಕು ನಾಯಿಗಳನ್ನು ನಿಯಂತ್ರಣವಿಲ್ಲದೆ ಬಿಡುವುದು ಎಷ್ಟು ಅಪಾಯಕಾರಿ?” “ಬೆಳಗಿನ ವಾಕಿಂಗ್ ಕೂಡ ಸುರಕ್ಷಿತವಲ್ಲವೇ?” ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಎದ್ದಿವೆ.

57
ಸಾಕು ನಾಯಿಗಳ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮಗಳ ಅಗತ್ಯ

ನಗರದಲ್ಲಿ ಹೆಚ್ಚುತ್ತಿರುವ ಸಾಕು ನಾಯಿಗಳ ದಾಳಿ ಪ್ರಕರಣಗಳು, ಮಾಲೀಕರ ಜವಾಬ್ದಾರಿ ಮತ್ತು ನಗರಾಡಳಿತದ ಮೇಲ್ವಿಚಾರಣೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿವೆ. ಸಾಕು ನಾಯಿಗಳನ್ನು ನಿಯಂತ್ರಣದಲ್ಲಿ ಇಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಬಿಡದಿರುವುದು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಎಂಬ ಒತ್ತಾಯ ಕೇಳಿಬರುತ್ತಿದೆ. ಒಟ್ಟಾರೆ, ಬೆಂಗಳೂರು ಹೆಚ್‌.ಎಸ್‌.ಆರ್ ಲೇಔಟ್‌ನಲ್ಲಿ ನಡೆದ ಈ ನಾಯಿ ದಾಳಿ ಘಟನೆ, ನಗರದಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ಸಾಕು ಪ್ರಾಣಿಗಳ ನಿರ್ವಹಣೆ ಕುರಿತು ಎಚ್ಚರಿಕೆಯ ಸಂದೇಶ ನೀಡಿದೆ.

67
ರಾಜ್ಯದ ವಿವಿದೆಡೆ 6 ಮಂದಿ ಮೇಲೆ ನಾಯಿ ದಾಳಿ

ಗುರುವಾರ ರಾಜ್ಯದ ವಿವಿಧೆಡೆ 6 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ಬೆಳಗಾವಿ ಜಿಲ್ಲೆ ಚಿಕ್ಕಬಾಗೇವಾಡಿಯಲ್ಲಿ ವೃದ್ಧನೊಬ್ಬನ ಮೇಲೆ, ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿಯಲ್ಲಿ 6 ವರ್ಷದ ಬಾಲಕಿ ಮೇಲೆ, ಕಲಬುರಗಿ ಜಿಲ್ಲೆಯ ಲಾಡ್ಲಾಪುರದಲ್ಲಿ ನಾಲ್ವರು ಬಾಲಕಿಯರ ಮೇಲೆ ನಾಯಿಗಳು ದಾಳಿ ನಡೆಸಿ, ಗಾಯಗೊಳಿಸಿತ್ತು.

77
ಮುಂದುವರಿದ ನಾಯಿ ದಾಳಿ:

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ಗ್ರಾಮದ ನಾಗಪ್ಪಾ ಕೆಳಗೇರಿ ಎಂಬ ವೃದ್ಧನ ಮೇಲೆ ನಾಯಿ ದಾಳಿ ನಡೆಸಿತ್ತು. ಸ್ನೇಹಿತರೊಬ್ಬರ ಮನೆಗೆ ಭೇಟಿ ನೀಡಿ, ಮನೆಗೆ ವಾಪಸ್ಸಾಗುವಾಗ ಅವರ ಮೇಲೆ ನಾಯಿಯೊಂದು ದಾಳಿ ನಡೆಸಿತ್ತು. ಗಾಯಗೊಂಡ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಮಧ್ಯೆ, ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ಪಟ್ಟಣದ ಜನತಾ ಕಾಲೋನಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮೂರ್ನಾಲ್ಕು ಬೀದಿ ನಾಯಿಗಳು ದಾಳಿ ನಡೆಸಿದ್ದು, ಸುತ್ತಮುತ್ತಲಿನವರು ಆಗಮಿಸಿ ಬಾಲಕಿಯನ್ನು ರಕ್ಷಿಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಶಾಲೆಯಿಂದ ಮರಳುತ್ತಿದ್ದ ನಾಲ್ವರು ಬಾಲಕಿಯರ ಮೇಲೆ ನಾಯಿಗಳು ದಾಳಿ ನಡೆದಿತ್ತು. ಬಾಲಕಿಯರ ಕೈ, ತೋಳು, ಮುಖ ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.

Read more Photos on
click me!

Recommended Stories