
ಆನೇಕಲ್ / ಬೇಗೂರು: ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್‌ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರಿನ ಹೊರವಲಯದ ಬೇಗೂರು ಸಮೀಪದ ಎಳೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಭಾರೀ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರು ನಿರ್ಮಿಸಿಕೊಂಡಿದ್ದ ಶೆಡ್‌ಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಸಂಪೂರ್ಣ ಪ್ರದೇಶ ಬೆಂಕಿಗಾಹುತಿಯಾಯಿತು.
ಸುಮಾರು ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅನೇಕ ಶೆಡ್‌ಗಳು ಸಿಲಿಂಡರ್ ಬ್ಲಾಸ್ಟ್‌ನಿಂದ ಒಂದರ ಹಿಂದೆ ಒಂದಾಗಿ ಹೊತ್ತಿ ಉರಿದವು. ಬೆಂಕಿಯ ಕೆನ್ನಾಲಿಗೆಗಳು ಆಗಸದೆತ್ತರಕ್ಕೆ ಚಾಚಿಕೊಂಡು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿತು. ಘಟನೆಯ ಸಂದರ್ಭದಲ್ಲಿ ಶೆಡ್‌ಗಳಲ್ಲಿ ಯಾರೂ ಸಿಲುಕಿರಲಿಲ್ಲ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಶೆಡ್‌ಗಳಲ್ಲಿ ಇದ್ದ ಗೃಹೋಪಯೋಗಿ ವಸ್ತುಗಳು, ತಾತ್ಕಾಲಿಕ ನಿವಾಸ ವ್ಯವಸ್ಥೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಮಾಹಿತಿ ತಿಳಿದ ಕೂಡಲೇ ಜಯನಗರ ಹಾಗೂ ಅಂಜನಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಬೆಂಕಿ ನಂದಿಸುವ ಕಾರ್ಯದ ವೇಳೆ ಘಟನಾ ಸ್ಥಳದಲ್ಲಿ ಅನೇಕ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿದ್ದು, ಅವೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗಮನಾರ್ಹ ಸಂಗತಿಯೆಂದರೆ, ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಆದರೆ ತೆರವು ಕಾರ್ಯಾಚರಣೆಯ ಬಳಿಕವೂ ಕೆಲವರು ಮತ್ತೆ ರಾತ್ರೋರಾತ್ರಿ ಬಂದು ಶೆಡ್‌ಗಳಲ್ಲಿ ನೆಲೆಸಿಕೊಂಡಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಅವಘಡದ ನಿಖರ ಕಾರಣ ಹಾಗೂ ಸಿಲಿಂಡರ್‌ಗಳು ಅಲ್ಲಿಗೆ ಹೇಗೆ ಬಂದವು ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ. ಅಕ್ರಮ ವಸತಿ ಹಾಗೂ ಭದ್ರತಾ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣವೇ ಎಂಬುದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕೋಗಿಲು ಬಳಿಯ ಅನಧಿಕೃತ ಶೆಡ್ ತೆರವುಗೊಳಿಸಿದ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಕೆ ಮಾಡುವುದಕ್ಕೆ ಸೂಚಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಲಹಂಕದ ಕೋಗಿಲು ಬಳಿ ಅಕ್ರಮ ಶೆಡ್ ನಿವಾಸಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಆದರೂ ಕೆಲವರು ಶೆಡ್ ಅಳವಡಿಕೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಅವರನ್ನು ಸ್ಥಳೀಯ ಪೊಲೀಸ್ ಸಹಕಾರ ಪಡೆದುಕೊಂಡು ಸ್ಥಳ ಖಾಲಿ ಮಾಡಿಸುವುದಕ್ಕೆ ಉತ್ತರ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜತೆಗೆ, ಜಿಲ್ಲಾಡಳಿತದಿಂದ ಕಸ ವಿಲೇವಾರಿಗೆ ಜಿಬಿಎ (ಬಿಬಿಎಂಪಿ) ಹಸ್ತಾಂತರ ಮಾಡಿದ ಪ್ರದೇಶಕ್ಕೆ ಸಂಪೂರ್ಣವಾಗಿ ತಂತಿ ಬೇಲಿ ಅಳವಡಿಕೆ ಮಾಡುವುದಕ್ಕೆ ನಿರ್ದೇಶಿಸಲಾಗಿದೆ. ಒಂದೆರಡು ದಿನದಲ್ಲಿ ತಂತಿ ಬೇಲಿ ಅಳವಡಿಸುವ ಕಾರ್ಯಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 16 ಬಾಂಗ್ಲಾ ಪ್ರಜೆಗಳು ಸೇರಿ 20 ಮಂದಿ ವಿದೇಶಿ ಪ್ರಜೆಗಳನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬೇಗೂರು ಹಾಗೂ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಹಲವು ದಿನಗಳಿಂದ ವೀಸಾ ಇಲ್ಲದೆ ಅಕ್ರಮವಾಗಿ ವಿದೇಶಿ ಪ್ರಜೆಗಳು ನೆಲೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 16 ಮಂದಿ ಬಾಂಗ್ಲಾ ಪ್ರಜೆಗಳು ಹಾಗೂ ಓರ್ವ ಉಂಗಾಡ ದೇಶದ ಮಹಿಳೆ ಹಾಗೂ ಮೂವರು ನೈಜೀರಿಯಾ ಪ್ರಜೆಗಳು ಪತ್ತೆಯಾಗಿದ್ದಾರೆ. ಬಳಿಕ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆಓಓ)ಯಗೆ ಬಂಧಿತ ವಿದೇಶಿ ಪ್ರಜೆಗಳನ್ನು ಹಾಜರುಡಿಸಲಾಯಿತು. ಎಫ್‌ಆರ್‌ಓಓ ಸೂಚನೆ ಮೇರೆಗೆ ನಿರ್ಬಂಧನಾ ಕೇಂದ್ರಕ್ಕೆ ಬಂಧಿತರನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಆರ್‌ಓಓಗೆ ಆರೋಪಿಗಳ ಗಡಿಪಾರಿಗೆ ಸಹ ಶಿಫಾರಸು ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಎಫ್‌ಆರ್‌ಓಓ ಮೂಲಕ ಸ್ವದೇಶಕ್ಕೆ ಬಂಧಿತರನ್ನು ಕಳುಹಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಗಡಿ ಮೂಲಕ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ. ಅಲ್ಲಿ ಗಡಿಯಲ್ಲಿ ಭದ್ರತಾ ಪಡೆಗಳ ಕಣ್ತಪ್ಪಿಸಿ ಒಳ ನುಸುಳಿದ ಆರೋಪಿಗಳು, ಬಳಿಕ ಕೋಲ್ಕತಾ ಪ್ರವೇಶಿಸಿದ್ದಾರೆ. ತರುವಾಯ ರೈಲುಗಳ ಮೂಲಕ ಬೆಂಗಳೂರಿಗೆ ವಲಸೆ ಬಂದು ಬಾಂಗ್ಲಾ ಪ್ರಜೆಗಳು ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಹೆಬ್ಬಗೋಡಿ ಸುತ್ತಮುತ್ತ ಶೆಡ್‌ಗಳಲ್ಲಿ ಬಾಂಗ್ಲಾ ಪ್ರಜೆಗಳು ವಾಸವಾಗಿದ್ದರು. ಇತ್ತೀಚೆಗೆ ಅಕ್ರಮ ವಲಸೆಗರ ವಿರುದ್ಧ ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ದನಿ ಎತ್ತಿದ್ದವು. ಅಲ್ಲದೆ ಕಾನೂನುಬಾಹಿರವಾಗಿ ನೆಲೆನಿಂತಿರುವ ವಿದೇಶಿಯರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಗಡಿಪಾರು ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು, ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆಗಿಳಿದರು ಎಂದು ತಿಳಿದು ಬಂದಿದೆ.