ಪೊಲೀಸಪ್ಪನ ಜೊತೆಗೆ ಮದುವೆ ನಿಶ್ಚಿತಾರ್ಥ; ಹುಟ್ಟುಹಬ್ಬದಂದೇ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ!

Published : May 11, 2026, 07:00 PM IST

ಬೆಳಗಾವಿಯ ಹಾಸ್ಟೆಲ್‌ನಲ್ಲಿ ಬಿಎಸ್‌ಸಿ ವಿದ್ಯಾರ್ಥಿನಿ ಕಾವೇರಿ, ತನ್ನ ಹುಟ್ಟುಹಬ್ಬದಂದೇ ನೇಣಿಗೆ ಶರಣಾಗಿದ್ದಾಳೆ. ಪೊಲೀಸ್ ಪೇದೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಈಕೆಯ ಸಾವಿಗೆ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
15
ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಬೆಳಗಾವಿ: ಜೀವನದ ಸಂಭ್ರಮದ ದಿನವಾಗಬೇಕಿದ್ದ ಹುಟ್ಟುಹಬ್ಬದಂದೇ ವಿದ್ಯಾರ್ಥಿನಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ನಗರದ ಅಜಂ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

25
ಹುಟ್ಟುಹಬ್ಬದಂದೇ ಘೋರ ನಿರ್ಧಾರ

ಮೃತ ವಿದ್ಯಾರ್ಥಿನಿಯನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ ನಾಯಕ (21) ಎಂದು ಗುರುತಿಸಲಾಗಿದೆ. ಇಂದು ಕಾವೇರಿಯ ಜನ್ಮದಿನವಾಗಿತ್ತು. ಮನೆಯವರು ಮತ್ತು ಗೆಳತಿಯರು ಶುಭಾಶಯ ಕೋರಬೇಕಿದ್ದ ದಿನದಂದೇ ಕಾವೇರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವುದು ಎಲ್ಲರಿಗೂ ಆಘಾತ ತಂದಿದೆ. ಕಾವೇರಿ ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಎಸ್‌ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.

35
ಪೊಲೀಸ್ ಪೇದೆಯೊಂದಿಗೆ ನಿಶ್ಚಯವಾಗಿದ್ದ ಮದುವೆ

ಕಾವೇರಿಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲು ಕ್ಷಣಗಣನೆ ಆರಂಭವಾಗಿತ್ತು. ಕೇವಲ ಮೂರು ತಿಂಗಳ ಹಿಂದಷ್ಟೇ ಕಾವೇರಿಗೆ ಎಂಗೆಜ್ಮೆಂಟ್ (ನಿಶ್ಚಿತಾರ್ಥ) ಮಾಡಲಾಗಿತ್ತು. ಪೊಲೀಸ್ ಪೇದೆಯೊಬ್ಬರ ಜೊತೆಗೆ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳಲ್ಲಿ ಸಂಭ್ರಮದ ವಾತಾವರಣವಿತ್ತು. ಶಿಕ್ಷಣ ಮುಗಿದ ನಂತರ ಮದುವೆ ಮಾಡಿಕೊಡಲು ಪೋಷಕರು ನಿರ್ಧರಿಸಿದ್ದರು. ಆದರೆ, ಮದುವೆಯ ಕನಸು ಕಾಣಬೇಕಿದ್ದ ಯುವತಿ ಮಸಣ ಸೇರಿರುವುದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.

45
ಆತ್ಮ*ಹತ್ಯೆಗೆ ನಿಗೂಢ ಕಾರಣ

ವಿದ್ಯಾರ್ಥಿನಿಯ ಆತ್ಮ*ಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಉತ್ತಮವಾಗಿ ಓದುತ್ತಿದ್ದ, ಮದುವೆ ನಿಶ್ಚಯವಾಗಿದ್ದ ಕಾವೇರಿ ಈ ರೀತಿ ತೀವ್ರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಏನಾದರೂ ಮಾನಸಿಕ ಒತ್ತಡವಿತ್ತೇ? ಅಥವಾ ವೈಯಕ್ತಿಕ ಸಮಸ್ಯೆಗಳೇನಾದರೂ ಇದ್ದವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

55
ಪೊಲೀಸರ ಭೇಟಿ ಮತ್ತು ಪರಿಶೀಲನೆ

ಘಟನೆ ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Read more Photos on
click me!

Recommended Stories