ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ತಮ್ಮ ನೆಚ್ಚಿನ ಶಿಕ್ಷಕರಾಗಿದ್ದ ಬಸವರಾಜ್ ರಾಮಪ್ಪ ಶೆಟ್ಟಿ ಅಂತಿಮಯಾತ್ರೆ ವೇಳೆ ಶಾಲಾ ಮಕ್ಕಳು ಭಾವುಕವಾಗಿ ಪುಷ್ಪವೃಷ್ಟಿ ಮೂಲಕ ಕಣ್ಣೀರ ವಿದಾಯ ಹೇಳಿದರು.
ರಸ್ತೆ ಅಪಘಾತದಲ್ಲಿ ಮೆಚ್ಚಿನ ಶಿಕ್ಷಕ ಸಾವು: ಶಾಲಾ ಮಕ್ಕಳಿಂದ ಕಣ್ಣೀರ ವಿದಾಯ
ರಸ್ತೆ ಅಪಘಾತದಲ್ಲಿ ಮೃತಪಟ್ಟ ನೆಚ್ಚಿನ ಶಿಕ್ಷಕನಿಗೆ ನೀಲಾನಗರ ಗ್ರಾಮದ ಶಾಲಾ ಮಕ್ಕಳು, ಗ್ರಾಮಸ್ಥರು ಸೇರಿ ಅಂತಿಮ ನಮನ ಸಲ್ಲಿಸುವ ಮೂಲಕ ಭಾವುಕ ವಿದಾಯ ಹೇಳಿದರು.
24
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಿಕ್ಷಕ
ನೀಲಾನಗರದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಬಸವರಾಜ್ ರಾಮಪ್ಪ ಶೆಟ್ಟಿ (53) ಅವರು ಶಿರೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಬಸವರಾಜ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ಶಿಕ್ಷಕ ಬಸವರಾಜ್ ಅವರಿಗೆ ಕಳೆದ ಎರಡು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಿಸದೇ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
34
ಪಾರ್ಥಿವ ಶರೀರಕ್ಕೆ ಶಾಲಾ ಮಕ್ಕಳಿಂದ ಪುಷ್ಪವೃಷ್ಠಿ
ಶಿಕ್ಷಕ ಬಸವರಾಜ್ ಅವರ ಪಾರ್ಥಿವ ಶರೀರ ನೀಲಾನಗರ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ಭಾವುಕರಾದರು. ಬಳಿಕ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶಾಲಾ ಆವರಣಕ್ಕೆ ಅಂಬುಲೆನ್ಸ್ ಆಗಮಿಸುತ್ತಿದ್ದಂತೆ ಇಕ್ಕೆಲಗಳಲ್ಲಿ ನಿಂತಿದ್ದ ಶಾಲಾ ಮಕ್ಕಳು ಪಾರ್ಥಿವ ಶರೀರದ ಮೇಲೆ ಪುಷ್ಪವೃಷ್ಠಿ ಮಾಡಿ ತಮ್ಮ ನೆಚ್ಚಿನ ಶಿಕ್ಷಕನಿಗೆ ಗೌರವ ಸಲ್ಲಿಸಿದರು.
ಕಣ್ಣೀರಿನ ವಿದಾಯ
ಮೇಲಾಧಿಕಾರಿಗಳು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಬಸವರಾಜ್ ಅವರ ಅಂತಿಮ ದರ್ಶನ ಪಡೆದು ಭಾವುಕವಾಗಿ ನಮನ ಸಲ್ಲಿಸಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಆತ್ಮೀಯತೆಯಿಂದ ಮಾರ್ಗದರ್ಶನ ನೀಡುತ್ತಿದ್ದ ಶಿಕ್ಷಕನ ಅಗಲಿಕೆ ನೀಲಾನಗರದಲ್ಲಿ ದುಃಖದ ವಾತಾವರಣ ಸೃಷ್ಟಿಸಿತು.
ಶಾಲಾ ಮಕ್ಕಳು ಗ್ರಾಮಸ್ಥರ ನೂರಾರು ಸಂಖ್ಯೆಯಲ್ಲಿ ಶಾಲಾ ಮೈದಾನದಲ್ಲಿ ಸೇರಿದ್ದರು. ಶಾಲಾ ಮಕ್ಕಳು, ಗ್ರಾಮಸ್ಥರ ಪಾಲಿಗೆ ಒಳ್ಳೆಯ ಮಾರ್ಗದರ್ಶಕ ಶಿಕ್ಷರಾಗಿದ್ದರು. ಅವರ ಅಕಾಲಿಕ ಮರಣದಿಂದ ಗ್ರಾಮಸ್ಥರೆಲ್ಲ ಕಂಬನಿ ಮಿಡಿದು ಅಂತಿಮ ಕಾರ್ಯದಲ್ಲಿ ಪಾಲ್ಗೊಂಡು ಕಣ್ಣೀರಿನ ವಿದಾಯ ಹೇಳಿದರು. ನೆಚ್ಚಿನ ಶಿಕ್ಷಕನನ್ನು ಕಳೆದುಕೊಂಡು ಅಂತಿಮ ನಮನ ಸಲ್ಲಿಸಲು ಬಂದ ಶಾಲಾ ಮಕ್ಕಳ ಅಂತಿಮ ಗೌರವದ ದೃಶ್ಯಗಳು ಮನಕಲುಕುವಂತಿದ್ದವು.