ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸದ್ಯ 10 ಪಂದ್ಯಗಳನ್ನಾಡಿದ್ದು, 3 ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಅದರಲ್ಲೂ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಗ್ಗರಿಸುವ ಮೂಲಕ ಪ್ಲೇ ಆಫ್ ಹಾದಿ ಸಿಎಸ್‌ಕೆ ಪಾಲಿಗೆ ಮತ್ತಷ್ಟು ದುರ್ಗಮವಾಗಿದೆ.
ಈಗ ಸಿಎಸ್‌ಕೆ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಶಾರ್ಜಾ ಮೈದಾನದಲ್ಲಿ ಎದುರಿಸಲಿದೆ. ಈ ಪಂದ್ಯ ಸೋತರೂ ಸಿಎಸ್‌ಕೆ ತಂಡಕ್ಕೆ ಪ್ಲೇ ಆಫ್‌ಗೇರಲು ಅವಕಾಶವಿದೆ.
ಮೊದಲ ಸಾಧ್ಯತೆ: ನೆಟ್ ರನ್‌ರೇಟ್ ನೆರವಿಲ್ಲದೆಯೂ ಪ್ಲೇ ಆಫ್ ಪ್ರವೇಶಿಬೇಕಿದ್ದರೆ,ಚೆನ್ನೈ ತಂಡ ಇನ್ನುಳಿದ 4 ಪಂದ್ಯಗಳನ್ನು ಗೆಲ್ಲಬೇಕು.
ಧೋನಿ ಪಡೆ ಮುಂದಿನ 4 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳನ್ನು ಎದುರಿಸಲಿದೆ.
ಮುಂದಿನ 4 ಪಂದ್ಯಗಳನ್ನು ಸಿಎಸ್‌ಕೆ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದರೆ ಧೋನಿ ಪಡೆಯ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಇದರ ಜತೆಗೆ ಅಂಕಪಟ್ಟಿಯಲ್ಲಿ ಅಗ್ರ 3 ಸ್ಥಾನಗಳಲ್ಲಿರುವ(ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ) ತಂಡಗಳು ಗೆಲುವಿನ ಲಯವನ್ನು ಮುಂದುವರೆಸಬೇಕಾಗಿದೆ.
ಅಗ್ರಕ್ರಮಾಂಕದ ಮೂರು ತಂಡಗಳು ಉತ್ತಮ ತೋರಿದಷ್ಟು ಸಿಎಸ್‌ಕೆ ತಂಡದ ಪ್ಲೇ ಆಫ್ ಪ್ರವೇಶದ ಕನಸಿಗೆ ಮತ್ತಷ್ಟು ಬಲ ಬರಲಿದೆ.
ಕೋಲ್ಕತ ನೈಟ್ ರೈಡರ್ಸ್ ತಂಡ ಇನ್ನುಳಿದ 4 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ, ಹಾಗೆಯೇ ಸನ್‌ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಎರಡಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಬಾರದು.
ಹೀಗಾದಲ್ಲಿ ಯಾವುದೇ ನೆಟ್ ರನ್‌ರೇಟ್ ಭೀತಿಯಿಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ 14 ಅಂಕಗಳೊಂದಿಗೆ ಡೆಲ್ಲಿ, ಮುಂಬೈ ಹಾಗೂ ಆರ್‌ಸಿಬಿ ಜತೆಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
2ನೇ ಸಾಧ್ಯತೆ: ನೆಟ್ ರನ್ ರೇಟ್ ನೆರವಿನಿಂದ ಸಿಎಸ್‌ಕೆಗೆ ಪ್ಲೇ ಆಫ್ ಹಂತಕ್ಕೇರಲು ಇದೆ ಅವಕಾಶ
ಒಂದು ವೇಳೆ ಸಿಎಸ್‌ಕೆ ಸಹಿತ ಎರಡು-ಮೂರು ತಂಡಗಳು ತಲಾ 14 ಅಂಕಗಳಿಸಿದರೂ, ನೆಟ್ ರನ್ ರೇಟ್ ಆಧಾರದಲ್ಲಿ 3 ಬಾರಿಯ ಐಪಿಎಲ್ ಚಾಂಪಿಯನ್ ಧೋನಿ ಪಡೆ ಪ್ಲೇ ಆಫ್ ಪ್ರವೇಶಿಸಬಹುದು.
ಹೀಗಾಗಬೇಕಿದ್ದರೆ ಧೋನಿ ಪಡೆ ಕನಿಷ್ಠ ಎರಡು-ಮೂರು ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆಲ್ಲಬೇಕು. ಈ ಮೂಲಕ ನೆಟ್ ರನ್ ರೇಟ್ ಸುಧಾರಿಸಿಕೊಂಡರೆ, ಧೋನಿ ಪಡೆ ಅಂತಿಮ 4ರ ಘಟ್ಟದಲ್ಲಿ ಸ್ಥಾನ ಪಡೆಯಬಹುದಾಗಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದರೂ ಧೋನಿ ಪಡೆಗಿದೆ ಪ್ಲೇ ಆಫ್‌ಗೇರುವ ಅವಕಾಶ..!
ಹೌದು, ಒಂದು ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಗ್ಗರಿಸಿದರೂ ಸಿಎಸ್‌ಕೆ ಪ್ಲೇ ಆಫ್ ರೇಸಿನಿಂದ ಸಂಪೂರ್ಣ ಹೊರಬೀಳುವುದಿಲ್ಲ.
ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಂತೆ ಕೇವಲ 12 ಅಂಕಗಳೊಂದಿಗೆ ಸಹಾ ಧೋನಿ ಪಡೆ ಪ್ಲೇ ಆಫ್ ಪ್ರವೇಶಿಸಲು ಅವಕಾಶವಿದೆ.
ಇದು ಸಿಎಸ್‌ಕೆ ಪಾಲಿಗೆ ಕಠಿಣ ಸವಾಲಾದರು ಅಸಾಧ್ಯವೇನಲ್ಲ. ಹೀಗಾಗಬೇಕಿದ್ದರೆ, 10 ಅಂಕ ಹೊಂದಿರುವಕೋಲ್ಕತ ನೈಟ್ ರೈಡರ್ಸ್ ತಂಡ ಇನ್ನು ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಬೇಕು,ಉಳಿದ ಪಂದ್ಯಗಳಲ್ಲಿ ಸೋಲಬೇಕು.
ಇದೇ ವೇಳೆ ಕಿಂಗ್ಸ್ ಇಲೆವನ್ ಪಂಜಾಬ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಲಾ 8 ಅಂಕಗಳನ್ನು ಹೊಂದಿದ್ದು2ಕ್ಕಿಂತ ಹೆಚ್ಚು ಪಂದ್ಯಗಳನ್ನುಭಾರೀ ಅಂತರದಲ್ಲಿ ಸೋಲಬೇಕು.
ಸಿಎಸ್‌ಕೆ ತಂಡದ ರನ್ ರೇಟ್ ಸದ್ಯ -0.463 ಇದ್ದು, ಮುಂಬೈ ವಿರುದ್ಧದ ಪಂದ್ಯ ಹೊರತುಪಡಿಸಿ ಉಳಿದೆಲ್ಲಾ ತಂಡಗಳ ವಿರುದ್ಧ ಧೋನಿ ಪಡೆ ಭಾರೀ ಅಂತರದ ಗೆಲುವು ಸಾಧಿಸಿದರೆ, ನೆಟ್ ರನ್ ರೇಟ್ ಆಧಾರದಲ್ಲಿ ಹೈದರಾಬಾದ್ ಹಿಂದಿಕ್ಕಿ ಚೆನ್ನೈ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ.
ಅದೃಷ್ಟ ಹಾಗೂ ಈ ಎಲ್ಲಾ ಲೆಕ್ಕಾಚಾರಗಳು ಕೈಹಿಡಿದರೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಈ ಎಲ್ಲಾ ಸಾಧ್ಯತೆಗಳು ಮುಂದಿನ ದಿನಗಳಲ್ಲಿ ಸಾಕಾರವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.