ಅಯ್ಯೋ.. ಹೀಗಾಗದೇ ಇರಲಿ; ಸ್ವಲ್ಪ ಯಾಮಾರಿದ್ರೂ ಸಾಕು RCB ಲೀಗ್ ಹಂತದಲ್ಲೇ ಔಟ್..!

First Published | Nov 1, 2020, 2:00 PM IST

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವುದರ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೈದರಾಬಾದ್ ಎದುರಿನ ಸೋಲು ಕೊಹ್ಲಿ ಪಡೆಯನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.
ಹೀಗಿದ್ದೂ ಬೆಂಗಳೂರು ತಂಡ ಇನ್ನೂ ತನ್ನ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ಸತತ ಹ್ಯಾಟ್ರಿಕ್ ಸೋಲು ವಿರಾಟ್ ಪಡೆಯನ್ನು ಕಂಗೆಡಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

ವಿರಾಟ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಾರ್ಜಾದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರು 5 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ.
ಹೈದರಾಬಾದ್ ವಿರುದ್ಧದ ಸೋಲು ಆರ್‌ಸಿಬಿ ತಂಡದ ಪ್ಲೇ ಆಫ್‌ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದ್ದರೂ, ಇನ್ನೂಂದು ಅಗ್ನಿ ಪರೀಕ್ಷೆಯಲ್ಲಿ ಕೊಹ್ಲಿ ಪಡೆ ಪಾಸಾಗಬೇಕಾಗಿದೆ.
Tap to resize

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಪಂದ್ಯಗಳನ್ನಾಡಿದ್ದು, 7 ಪಂದ್ಯಗಳಲ್ಲಿ ಗೆಲುವು ಹಾಗೂ 6 ಪಂದ್ಯಗಳಲ್ಲಿ ಸೋಲನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಲೀಗ್ ಹಂತದ ಕೊನೆಯ ಹಂತದಲ್ಲಿ ಆರ್‌ಸಿಬಿ ತಂಡ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯವನ್ನು ಜಯಿಸಿದರೆ ನೇರವಾಗಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಆರ್‌ಸಿಬಿ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿದೆ.
ಈಗಾಗಲೇ ಹ್ಯಾಟ್ರಿಕ್ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೆ ಪ್ಲೇ ಆಫ್‌ಗೇರುವ ಸಾಧ್ಯತೆಯಿದೆಯಾ ಎನ್ನುವ ಲೆಕ್ಕಾಚಾರ ಇಲ್ಲಿದೆ ನೋಡಿ.
ನವೆಂಬರ್ 02ರಂದು ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯವನ್ನು ಕೈ ಚೆಲ್ಲಿದರೆ ಆರ್‌ಸಿಬಿ ಸಂಪೂರ್ಣ ಪ್ಲೇ ಆಫ್‌ ರೇಸಿನಿಂದ ಹೊರಬೀಳುವುದಿಲ್ಲ.
ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಮ್ಮ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಗ್ಗರಿಸಿದರೆ ಆರ್‌ಸಿಬಿ ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ.
ಯಾಕೆಂದರೆ ಹೈದರಾಬಾದ್ ಹಾಗೂ ಪಂಜಾಬ್ ತಂಡಗಳೆರಡು ಆರ್‌ಸಿಬಿಗಿಂತ ಉತ್ತಮ ರನ್‌ರೇಟ್ ಹೊಂದಿದ್ದು, ಈ ಎರಡು ತಂಡಗಳ ಪೈಕಿ ಯಾವ ತಂಡ ಗೆದ್ದರೂ ಆರ್‌ಸಿಬಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಇನ್ನು ಕೋಲ್ಕತ ನೈಟ್‌ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಡಿಮೆ ಅಂತರದಲ್ಲಿ ಜಯಿಸಿದರೆ ಆರ್‌ಸಿಬಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಈ ಪಂದ್ಯದಲ್ಲಿ ಒಂದು ತಂಡ ದೊಡ್ಡ ಅಂತರದಲ್ಲಿ ಗೆದ್ದರೆ ಆರ್‌ಸಿಬಿಗೆ ಸ್ವಲ್ಪ ತಲೆನೋವಾಗಬಹುದು.
ಈ ಪಂದ್ಯದ ಸೋಲು-ಗೆಲುವಿನ ಅಂತರ ಕಡಿಮೆಯಿದ್ದರೆ ಈ 2 ತಂಡಗಳಿಗಿಂತ ಆರ್‌ಸಿಬಿ ನೆಟ್‌ ರನ್‌ರೇಟ್ ಉತ್ತಮವಾಗಿದ್ದು, ಸಹಜವಾಗಿಯೇ ಆರ್‌ಸಿಬಿ ಪ್ಲೇ ಆಫ್‌ಗೇರಲಿದೆ.
ಇಷ್ಟೆಲ್ಲಾ ಲೆಕ್ಕಾಚಾರ ಹಾಕುವ ಬದಲು ಸುಮ್ಮನೆ ಡೆಲ್ಲಿ ವಿರುದ್ಧ ಗೆದ್ದು ಮೊದಲೇ ಕ್ವಾಲಿಫೈಯರ್ ಪಂದ್ಯವನ್ನಾಡಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.

Latest Videos

click me!