'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?

First Published Jul 23, 2022, 12:16 PM IST

ಕೋಲ್ಕತ್ತಾ (ಜುಲೈ 21): ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (WBSSC) ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿ (WBBPE) ನೇಮಕಾತಿ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ತೃಣಮೂಲ ಕಾಂಗ್ರೆಸ್‌ ನಾಯಕ ಹಾಗೂ ಸಚಿವ  ಪಾರ್ಥ ಚಟರ್ಜಿ ಅವರ ಅತ್ಯಾಪ್ತೆ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅಂದಾಜು 21 ಕೋಟಿ ನಗದು ಹಾಗೂ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಅರ್ಪಿತಾ ಅವರ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ. ಹಾಗಾದರೆ, ಈ ಹಗರಣಕ್ಕೂ ಅರ್ಪಿತಾ ಮುಖರ್ಜಿಗೆ ಇರುವ ಸಂಬಂಧವೇನು?  ನಗದು ಸಹಿತ ಇಡಿ ಅಧಿಕಾರಿಗಳು ಟಾಲಿಗಂಜ್‌ನ ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಮುಖರ್ಜಿ ಅವರ ಐಷಾರಾಮಿ ನಿವಾಸದಿಂದ 20 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಚಿವ ಪಾರ್ಥ ಚಟರ್ಜಿಗೆ ಸಂಬಂಧಿಸಿದ ದಕ್ಷಿಣ ಕೋಲ್ಕತ್ತಾದ ಫ್ಲಾಟ್‌ನಿಂದ 21ಕೋಟಿ ರೂ. ಹಣವನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಈ ಅಧಿಕೃತ ಹೇಳಿಕೆಯನ್ನು ನೀಡಿದೆ.

ಇಡಿ ಮೂಲಗಳ ಪ್ರಕಾರ ಅರ್ಪಿತಾ ಅವರ ಫ್ಲಾಟ್ ದಾಳಿ ಪಟ್ಟಿಯಲ್ಲಿ ಇರಲಿಲ್ಲ. ದಾಳಿಯ ಆರಂಭಿಕ ಪಟ್ಟಿಯಲ್ಲಿ ಅರ್ಪಿತಾ ಅವರ ಫ್ಲ್ಯಾಟ್‌ ಮೇಲೆ ದಾಳಿ ಮಾಡುವ ಇಂಗಿತವಿರಲಿಲ್ಲ. ಕೆಲವು ಸುಳಿವುಗಳನ್ನು ಪಡೆದ ನಂತರ, ಇಡಿ ಅವರ ಫ್ಲ್ಯಾಟ್‌ನ ಮೇಲೆ ದಾಳಿ ನಡೆಸಿದಾಗ ಈ ಹಣ ಪತ್ತೆಯಾಗಿದೆ.

ಅರ್ಪಿತಾ ಮುಖರ್ಜಿ ಎನ್ನುವ ಮಹಿಳೆ ವಾಸ ಮಾಡುತ್ತಿದ್ದ ಫ್ಲ್ಯಾಟ್‌ನಲ್ಲಿ ಇಷ್ಟು ಭಾರಿ ಪ್ರಮಾಣದ ಹಣ ಸಿಕ್ಕಿದೆ ಎಂದು ಹೇಳಲಾಗಿದೆ. ಅರ್ಪಿತಾ ಮುಖರ್ಜಿ ಪಾರ್ಥ ಮುಖರ್ಜಿ ಅವರ ಅತ್ಯಾಪ್ತೆ. ನಟಿ ಮತ್ತು ಮಾಡೆಲ್ ಕೂಡ ಆಗಿದ್ದಾರೆ. ಅರ್ಪಿತಾ ಒಡಿಶಾ ಚಿತ್ರರಂಗದಲ್ಲಿ ನಟಿಸಿದ್ದಾರೆ. ಅವರು ಅನೇಕ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಐಷಾರಾಮಿ ಫ್ಲ್ಯಾಟ್‌ನಿಂದ 21 ಕೋಟಿ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದ್ದು,ಈ ಫ್ಲ್ಯಾಟ್‌ನ ಮಾಲೀಕರು ಯಾರು ಎನ್ನುವುದನ್ನು ಇಡಿ ಪತ್ತೆ ಮಾಡುತ್ತಿದೆ. ಈ ಕುರಿತಂತೆ ಅರ್ಪಿತಾ ಮುಖರ್ಜಿ ಅವರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಅರ್ಪಿತಾ ಮುಖರ್ಜಿ ಸಚಿವ ಪಾರ್ಥ ಚಟರ್ಜಿ ಅವರ ಅತ್ಯಾಪ್ತರು ಎಂದು ಇಡಿ ಹೇಳಿಕೊಂಡಿದೆ. ಇಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಪಾರ್ಥ್ ಅವರ ಮನೆಯಲ್ಲಿ ಕಾಣಿಸಿಕೊಂಡರು. ಇಡೀ ದಿನ ಮನೆಯ ಆವರಣವನ್ನು ಇಡಿ ಅಧಿಕಾರಿಗಳು ಜಾಲಾಡಿದ್ದಾರೆ.

ದಕ್ಷಿಣ ಕೋಲ್ಕತ್ತಾದ ನಿವಾಸಿ ಅರ್ಪಿತಾ ಅವರು ನಗರದ ಪ್ರಮುಖ ದುರ್ಗಾ ಪೂಜೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಮೂಲಗಳ ಪ್ರಕಾರ, ಅವರು ಹಲವು ವರ್ಷಗಳಿಂದ ನಕ್ತಲಾ ಪೂಜೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಬೆಹಾಲಾ ವೆಸ್ಟ್ ಸೆಂಟರ್‌ನಲ್ಲಿ ಪಾರ್ಥ ಚಟರ್ಜಿಯವರೊಂದಿಗೆ ಚುನಾವಣಾ ಪ್ರಚಾರವನ್ನೂ ಮಾಡುತ್ತಿದ್ದರು.

ವಿಶೇಷವೆಂದರೆ, ಪಾರ್ಥ ಚಟರ್ಜಿ ಕೂಡ ಆ ಪೂಜೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಪಾರ್ಥ ಅವರು ನಕ್ತಲಾ ಉದಯನ್ ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರೇ ಈ ಪೂಜೆಯ ಅಧ್ಯಕ್ಷರು. ಪ್ರತಿ ವರ್ಷವೂ ಅದ್ದೂರಿಯಾಗಿ ಈ ಪೂಜೆಯನ್ನು ಮಾಡಲಾಗುತ್ತದೆ.

ಈ ದುರ್ಗಾ ಪೂಜೆಯ ಜಾಹೀರಾತಿನಲ್ಲೂ ಅರ್ಪಿತಾ ಕೆಲಸ ಮಾಡಿದ್ದರು. ಅದರೊಂದಿಗೆ ನಕ್ತಲಾ ಪೂಜೆಯ ಥೀಮ್‌ ಸಾಂಗ್‌ನಲ್ಲಿ ಇವರಿಬ್ಬರೂ ಆಕರ್ಷಕ ಫೋಟೋ ಶೂಟ್‌ನಲ್ಲೂ ಭಾಗಿಯಾಗಿದ್ದರು.

ಈ ಹಣವು ಶಿಕ್ಷಕರ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು ಎಂದು ಇಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೂಲಗಳ ಪ್ರಕಾರ ಅರ್ಪಿತಾ ವಕೀಲಿ ವೃತ್ತಿ ಮಾಡತ್ತಿದ್ದಾರೆ. ಟಾಲಿಗಂಜ್‌ನ  ಎಲೈಟ್ ಹೌಸಿಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಅರ್ಪಿತಾ ನಿಖರವಾಗಿ ಏನು ಮಾಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿ ತನಿಖಾಧಿಕಾರಿಗಳು ಪಾರ್ಥ ಅವರ ಮನೆ ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಂಜೆ ಇಡಿ ತಂಡ ಅರ್ಪಿತಾ ಫ್ಲ್ಯಾಟ್ ಮೇಲೆ ದಾಳಿ ನಡೆಸಿತ್ತು. 20 ಕೋಟಿ ನಗದು ಮತ್ತು 20 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

click me!