ಇಂಗ್ಲಿಷ್ ಗೊತ್ತಿಲ್ಲದೆ ಪರದಾಡಿದ ಸುರಭಿ ಪಾಸಾಗಿದ್ದು UPSC ಮಾತ್ರವಲ್ಲ, ಗೇಟ್, ಬಾರ್ಕ್, ಇಸ್ರೋ, SAIL, SSC-CGL, IES..!

First Published Feb 20, 2024, 3:02 PM IST

ಹಿಂದಿ ಮೀಡಿಯಂನಲ್ಲಿ ಓದಿದ ಸುರಭಿ ಗೌತಮ್ ಡಿಗ್ರಿಯಲ್ಲಿ ಇಂಗ್ಲಿಷ್ ಸರಿಯಾಗಿ ಬಾರದೆ ಸಾಕಷ್ಟು ಒದ್ದಾಡಿದರು. ಆದರೆ ಇಂದು UPSC ಕ್ಲಿಯರ್ ಮಾಡಿ ಐಎಎಸ್ ಅಧಿಕಾರಿಯಾಗಿರುವ ಆಕೆ, GATE, BAARC, ISRO, SAIL, SSC-CGL And IES ಹೀಗೆ ಬರೆದ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಿದ್ದಾರೆ. 

ಕಷ್ಟ ಪಟ್ಟು ಮೇಲೆ ಬರುವವರ ಹಿನ್ನೆಲೆಯ ಕತೆ, ಅವರೇರಿದ ಏಣಿ ಎಲ್ಲವೂ ಅಗಾಧ ಸ್ಪೂರ್ತಿ ತುಂಬುತ್ತವೆ. ಹೀಗೆ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಐಎಎಸ್ ಅಧಿಕಾರಿ ಸುರಭಿ ಗೌತಮ್ ಅವರ ಜೀವನ ಕತೆಗಿದೆ.

ಬಡತನದಿಂದ ಬಂದ ಸುರಭಿಯ ಜೀವನ ಪಯಣವು ಬಹಳ ಕಷ್ಟದಿಂದ ಕೂಡಿತ್ತು. ಹಣಕಾಸಿನ ಅಡೆತಡೆಗಳು ಹಾಗೂ ಮಧ್ಯಪ್ರದೇಶದ ಅಮ್ದಾರಾ ಎಂಬ ಹಳ್ಳಿಯ ವಾತಾವರಣ ಆಕೆಯನ್ನು ಆಂಗ್ಲ-ಮಾಧ್ಯಮ ಶಿಕ್ಷಣವನ್ನು ಪಡೆಯುವುದನ್ನು ತಡೆದವು.  

12ನೇ ತರಗತಿಯವರೆಗೆ ಹಿಂದಿ-ಮಾಧ್ಯಮ ಶಾಲೆಯಲ್ಲಿ ಓದಿದ ಸುರಭಿ, ಸಾಲದೆಂಬಂತೆ ಆರೋಗ್ಯ ಸಮಸ್ಯೆಗಳಿಂದಲೂ ಸಾಕಷ್ಟು ಬಳಲಿ ಹೋಗಿದ್ದರು.

ನಂತರ ಡಿಗ್ರಿಗೆ ಸೇರಿದಾಗ ಅಲ್ಲಿ ಆಕೆ ಇಂಗ್ಲಿಷ್‌ನಲ್ಲಿನ ಸೀಮಿತ ಪ್ರಾವೀಣ್ಯತೆಯಿಂದಾಗಿ ತೊಂದರೆಗಳನ್ನು ಎದುರಿಸಬೇಕಾಯಿತು. ಸಹಪಾಠಿಗಳು ಗೇಲಿ ಮಾಡಿದರು. ಅವುಗಳ ಮಧ್ಯೆಯೂ ಓದಿನ ಹಟದ ಕಾರಣದಿಂದ ಮೊದಲ ಸೆಮಿಸ್ಟರ್‌ನಲ್ಲಿ ತನ್ನ ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದರು.

20ನೇ ವಯಸ್ಸಿನಲ್ಲಿ ಪ್ರತಿಷ್ಠಿತ BARC ನಲ್ಲಿ ಅಸ್ಕರ್ ಸ್ಥಾನವನ್ನು ಪಡೆದುಕೊಂಡ ಸುರಭಿ ಮೈಲಿಗಲ್ಲೊಂದನ್ನು ಸಾಧಿಸಿದ್ದರು. ನಂತರ ಬಾರ್ಕ್‌ನಲ್ಲಿ ನ್ಯೂಕ್ಲಿಯರ್ ಸೈಂಟಿಸ್ಟ್ ಆಗಿ ಕೆಲಸ ಮಾಡಿದರು.

ಆದರೆ, ಅಲ್ಲಿಗೇ ಸುಮ್ಮನಾಗದೆ 21ನೇ ವಯಸ್ಸಿನಲ್ಲಿ, ಭಾರತೀಯ ಎಂಜಿನಿಯರಿಂಗ್ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ 1ನೇ ಶ್ರೇಯಾಂಕ ಗಳಿಸಿದರು.

ತರುವಾಯ 22ನೇ ವಯಸ್ಸಿನಲ್ಲಿ ಅವರ ಅಧಿಕಾರಾವಧಿಯನ್ನು ಪ್ರಾರಂಭಿಸಿದರು. ಅಲ್ಲಿಗೆ ಸುಮ್ಮನಾಗದ ಆಕೆ 25ನೇ ವಯಸ್ಸಿನಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ (CSE) ಬರೆದು 50ನೇ ಅಖಿಲ ಭಾರತ ಶ್ರೇಣಿಯೊಂದಿಗೆ ಯಶಸ್ವಿಯಾಗಿ ಉತ್ತೀರ್ಣರಾದರು.

ಗೇಟ್, ಬಾರ್ಕ್, ಇಸ್ರೋ, ಸೇಲ್, ದೆಲ್ಲಿ ಪೋಲೀಸ್, ಎಸ್‌ಎಸ್‌ಸಿ-ಸಿಜಿಎಲ್‌ನಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ಅದ್ಭುತ ಪ್ರತಿಭೆಯಾಗಿ ಗುರುತಿಸಿಕೊಂಡ ಸುರಭಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಧ್ಯ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಸುರಭಿಯವರ ಜೀವನ ಪಯಣವು ಅವರ ಗಮನಾರ್ಹ ಸಾಧನೆಗಳಿಗೆ ಸಾಕ್ಷಿಯಾಗಿದೆ ಮತ್ತು ಅನೇಕರಿಗೆ ಸ್ಫೂರ್ತಿಯ ದಾರಿದೀಪವಾಗಿದೆ. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ ಮತ್ತು ಕಠಿಣ ಪರಿಶ್ರಮವು ಸಾಧನೆಯ ಅಂತಿಮ ಕೀಲಿಯಾಗಿದೆ ಎನ್ನುತ್ತಾರೆ ಸುರಭಿ. 

click me!