ಆರ್‌ಸಿಬಿ ಚೆಲುವೆ ಪೆರ್ರಿಗೆ 'ಒಡೆದ ಕಾರು ಗಾಜಿನ' ಗಿಫ್ಟ್ ಕೊಟ್ಟ TATA ಮೋಟರ್ಸ್‌..!

First Published Mar 16, 2024, 4:54 PM IST

ಬೆಂಗಳೂರು: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಆರ್‌ಸಿಬಿ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ ಪೆರ್ರಿಗೆ ಟಾಟಾ ಸಂಸ್ಥೆ ಒಡೆದ ಕಾರಿನ ಗಾಜನ್ನು ಗಿಫ್ಟ್ ಆಗಿ ನೀಡಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್ ಅಂತರದಲ್ಲಿ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.
 

ಇನ್ನು ನಾಕೌಟ್ ಪಂದ್ಯದಲ್ಲಿ ಮುಂಬೈ ಎದುರು ಅಮೋಘ ಆಲ್ರೌಂಡ್ ಪ್ರದರ್ಶನ ತೋರಿದ ಎಲೈಸಿ ಪೆರ್ರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭದಲ್ಲಿ ಟಾಟಾ ಮೋಟರ್ಸ್ ಕಡೆಯಿಂದ ವಿಶೇಷ ಗಿಫ್ಟ್ ಪೆರ್ರಿ ಪಾಲಾಯಿತು.
 

ಎಲೈಸಿ ಪೆರ್ರಿ ಮುಂಬೈ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಆಕರ್ಷಕ 66 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಇನ್ನು ಬೌಲಿಂಗ್‌ನಲ್ಲಿ ಪ್ರಮುಖ ಒಂದು ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
 

ಇನ್ನು ಇದೀಗ ಆಸೀಸ್ ಆಲ್ರೌಂಡರ್ ಪೆರ್ರಿಗೆ ಕಾರು ಉತ್ಫಾದಕ ಸಂಸ್ಥೆಯಾದ ಟಾಟಾ ಮೋಟರ್ಸ್‌, ಒಡೆದ ಕಾರಿನ ಗಾಜಿನ ಫ್ರೇಮ್ ಅನ್ನು ಗಿಫ್ಟ್ ನೀಡಿ ಗಮನ ಸೆಳೆದಿದೆ. ಇದೇ ಲೀಗ್ ಹಂತದ ಪಂದ್ಯದಲ್ಲಿ ಪೆರ್ರಿ ಸಿಡಿಸಿದ ಸಿಕ್ಸರ್, ಟಾಟಾ ಪಂಚ್ ಕಾರಿನ ಗಾಜನ್ನು ಪುಡಿ ಮಾಡಿತ್ತು.
 

ಹೌದು, ಬೆಂಗಳೂರಿನಲ್ಲಿ ಯುಪಿ ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಸ್ಮೃತಿ ಮಂಧನಾ ಸಿಡಿಸಿದ ಸಿಕ್ಸರ್, ಬೌಂಡರಿ ಗೆರೆಯಾಚೆಗೆ ಜಾಹಿರಾತಿಗಾಗಿ ನಿಲ್ಲಿಸಿದ್ದ ಕಾರಿನ ಗಾಜಿಗೆ ಬಡಿದಿತ್ತು. ಅದೇ ಗಾಜನ್ನು ಇದೀಗ ಪೆರ್ರಿಗೆ ಟಾಟಾ ಮೋಟರ್ಸ್ ಗಿಫ್ಟ್ ರೂಪದಲ್ಲಿ ನೀಡಿ ಗಮನ ಸೆಳೆದಿದೆ.

ಇದೀಗ ಆರ್‌ಸಿಬಿ ತಂಡವು ಮಾರ್ಚ್ 17ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪ್ರಶಸ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕಾದಾಡಲಿದೆ. ಡೆಲ್ಲಿ ಎದುರೂ ಪೆರ್ರಿ ಅಬ್ಬರಿಸಿ ಕಪ್ ಗೆದ್ದುಕೊಡಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.

ಸದ್ಯ ಎಲೈಸಿ ಪೆರ್ರಿ ಆಡಿದ 8 ಪಂದ್ಯಗಳಲ್ಲಿ ಎರಡು ಅರ್ಧಶತಕ ಸಹಿತ 312 ರನ್ ಬಾರಿಸಿದ್ದು, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಆರೆಂಜ್ ಕ್ಯಾಪ್ ಒಡತಿ ಎನಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿದ್ದಾರೆ.

click me!