T20 World Cup 2026: ಟಿ20 ವಿಶ್ವಕಪ್ ಫೈನಲ್ ಮಳೆಯಿಂದ ರದ್ದಾದ್ರೆ, ಟ್ರೋಫಿ ಯಾರಿಗೆ? ಇಲ್ಲಿದೆ ICC ರೂಲ್ಸ್

Published : Mar 07, 2026, 12:53 PM IST

ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಟ್ರೋಫಿ ಯಾರ ಪಾಲಾಗಲಿದೆ? ಇಂತಹ ಸಂದರ್ಭಗಳಿಗಾಗಿ ಐಸಿಸಿ ರೂಪಿಸಿರುವ ನಿಯಮಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

PREV
16
ಅಹಮದಾಬಾದ್‌ನಲ್ಲಿ ಟಿ20 ಫೈನಲ್

ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 8, ಭಾನುವಾರದಂದು ಸಂಜೆ 7:00 ಗಂಟೆಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಈ ಅಂತಿಮ ಹಣಾಹಣಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಮೂರನೇ ಬಾರಿಗೆ ಚಾಂಪಿಯನ್ ಆಗಲು ಟೀಂ ಇಂಡಿಯಾ ಸಜ್ಜಾಗಿದೆ. ಆದರೆ, ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಪರಿಸ್ಥಿತಿ ಏನಾಗಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ.

26
ಚೊಚ್ಚಲ ಗೆಲುವಿನ ಕನವರಿಕೆಯಲ್ಲಿ ಕಿವೀಸ್

ಟೀಂ ಇಂಡಿಯಾ ಈಗಾಗಲೇ ಎರಡು ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. 2007ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಮೊದಲ ಬಾರಿಗೆ ಮತ್ತು 2024ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು. ಈಗ 2026ರಲ್ಲಿ ಫೈನಲ್ ತಲುಪಿ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದೆ. ಇನ್ನೊಂದೆಡೆ, ನ್ಯೂಜಿಲೆಂಡ್ ತಂಡಕ್ಕೆ ಇದು ಬಹಳ ಮುಖ್ಯವಾದ ಪಂದ್ಯ. ಈವರೆಗೆ ಒಮ್ಮೆಯೂ ಟಿ20 ವಿಶ್ವಕಪ್ ಗೆಲ್ಲದ ಕಿವೀಸ್, ಈ ಬಾರಿ ಮೊದಲ ಟ್ರೋಫಿ ಎತ್ತಿಹಿಡಿಯಲು ಹೋರಾಡುತ್ತಿದೆ. ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ.

36
ಟಿ20 ವಿಶ್ವಕಪ್ ಫೈನಲ್‌ಗೆ ಮಳೆ ಅಡ್ಡಿಯಾದ್ರೆ?
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನು ಮಾಡಬೇಕು ಎಂಬುದರ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸ್ಪಷ್ಟ ನಿಯಮಗಳನ್ನು ಹೊಂದಿದೆ. ಭಾನುವಾರದ ಪಂದ್ಯದ ವೇಳೆ ಮಳೆ ಬಂದರೆ, ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಲೇಬೇಕು. ಸಾಮಾನ್ಯ ಟಿ20 ಪಂದ್ಯಗಳಲ್ಲಿ 5 ಓವರ್‌ಗಳು ಸಾಕು, ಆದರೆ ವಿಶ್ವಕಪ್ ಫೈನಲ್‌ನಂತಹ ಪ್ರಮುಖ ಪಂದ್ಯಗಳಿಗೆ ಐಸಿಸಿ 10 ಓವರ್‌ಗಳ ನಿಯಮವನ್ನು ಜಾರಿಗೆ ತಂದಿದೆ. ಒಂದು ವೇಳೆ ಭಾನುವಾರ ಈ ಕನಿಷ್ಠ ಓವರ್‌ಗಳ ಆಟ ಸಾಧ್ಯವಾಗದಿದ್ದರೆ, ಪಂದ್ಯವನ್ನು ಮೀಸಲು ದಿನಕ್ಕೆ (ರಿಸರ್ವ್ ಡೇ) ಮುಂದೂಡಲಾಗುತ್ತದೆ.
46
ಐಸಿಸಿ ಟಿ20 ವಿಶ್ವಕಪ್ : ರಿಜರ್ವ್ ಡೇ ರೂಲ್ಸ್
ಮಾರ್ಚ್ 8ರಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಅಂದರೆ ಮಾರ್ಚ್ 9, ಸೋಮವಾರವನ್ನು ಮೀಸಲು ದಿನವೆಂದು (ರಿಸರ್ವ್ ಡೇ) ನಿಗದಿಪಡಿಸಲಾಗಿದೆ. ಭಾನುವಾರ ಪಂದ್ಯ ಎಲ್ಲಿ ನಿಂತಿರುತ್ತದೆಯೋ, ಸೋಮವಾರ ಅಲ್ಲಿಂದಲೇ ಆಟವನ್ನು ಪುನರಾರಂಭಿಸಲಾಗುತ್ತದೆ. ಉದಾಹರಣೆಗೆ, ಭಾನುವಾರ ಭಾರತ 12 ಓವರ್‌ಗಳನ್ನು ಆಡಿದ ನಂತರ ಮಳೆಯಿಂದ ಆಟ ನಿಂತರೆ, ಸೋಮವಾರ 12.1ನೇ ಓವರ್‌ನಿಂದ ಆಟ ಮುಂದುವರಿಯುತ್ತದೆ. ಒಂದು ವೇಳೆ ಮೀಸಲು ದಿನದಂದೂ ಮಳೆಯಿಂದ ಆಟ ಸಾಧ್ಯವಾಗದಿದ್ದರೆ, ಐಸಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
56
ರಿಸರ್ವ್ ಡೇನಲ್ಲೂ ಪಂದ್ಯ ಪೂರ್ಣಗೊಳ್ಳದಿದ್ದರೇ?

ಒಂದು ವೇಳೆ ಮೀಸಲು ದಿನದಂದೂ ಪಂದ್ಯಕ್ಕೆ ಫಲಿತಾಂಶ ಸಿಗದೆ ಸಂಪೂರ್ಣವಾಗಿ ರದ್ದಾದರೆ, ಐಸಿಸಿ ನಿಯಮಗಳ ಪ್ರಕಾರ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ಅಂದರೆ, ಎರಡೂ ತಂಡಗಳು ವಿಶ್ವಕಪ್ ಟ್ರೋಫಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಆದರೆ, ಅಹಮದಾಬಾದ್ ಹವಾಮಾನ ಇಲಾಖೆಯ ವರದಿ ಪ್ರಕಾರ, ಭಾನುವಾರ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಆಕಾಶ ಮೋಡ ಕವಿದಿದ್ದರೂ, ಪೂರ್ಣ ಪಂದ್ಯ ನಡೆಯುವ ನಿರೀಕ್ಷೆಯಿದೆ.

66
ಭಾರತ-ನ್ಯೂಜಿಲೆಂಡ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ?
ಇತಿಹಾಸವನ್ನು ನೋಡಿದರೆ, ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕಹಿ ಅನುಭವವೇ ಹೆಚ್ಚು. ಈ ಮೆಗಾ ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ಕಿವೀಸ್ ತಂಡವೇ ಗೆಲುವು ಸಾಧಿಸಿದೆ. ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಯಾವಾಗಲೂ ಭಾರತಕ್ಕೆ ಕಠಿಣ ಸ್ಪರ್ಧೆ ನೀಡುತ್ತಲೇ ಬಂದಿದೆ. ಆದರೆ, ಒಟ್ಟಾರೆ ಟಿ20 ದಾಖಲೆಗಳಲ್ಲಿ ಭಾರತದ್ದೇ ಮೇಲುಗೈ. ಉಭಯ ದೇಶಗಳ ನಡುವೆ ಈವರೆಗೆ 30 ಟಿ20 ಪಂದ್ಯಗಳು ನಡೆದಿದ್ದು, ಭಾರತ 18 ಪಂದ್ಯಗಳಲ್ಲಿ ಗೆದ್ದಿದೆ. ನ್ಯೂಜಿಲೆಂಡ್ 11 ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯ ಟೈ ಆಗಿದೆ. ಈ ಅಂಕಿಅಂಶಗಳನ್ನು ನೋಡಿದರೆ ಫೈನಲ್ ಪಂದ್ಯ ರೋಚಕವಾಗಿ ಸಾಗುವುದು ಖಚಿತ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories