ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 2021ರಲ್ಲಿ ಕೇವಲ ಮೂರು ಏಕದಿನ ಕ್ರಿಕೆಟ್ ಪಂದ್ಯಗಳನ್ನಷ್ಟೇ ಆಡಿದೆ. ಹೀಗಾಗಿ ಆಸೀಸ್‌ನ ಯಾವೊಬ್ಬ ಬ್ಯಾಟರ್ ಸಹಾ ಗರಿಷ್ಠ ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ
ಇನ್ನು 2011ರ ಏಕದಿನ ವಿಶ್ವಕಪ್ ವಿಜೇತ ತಂಡವಾದ ಟೀಂ ಇಂಡಿಯಾ 2021ರಲ್ಲಿ ಕೇವಲ 6 ಏಕದಿನ ಪಂದ್ಯಗಳಷ್ಟೇ ಆಡಿದೆ. ಈ ಪೈಕಿ ಲಂಕಾ ವಿರುದ್ದದ ಏಕದಿನ ಸರಣಿಯಲ್ಲಿ ಬಹುತೇಕ ತಾರಾ ಆಟಗಾರರು ಪಾಲ್ಗೊಂಡಿರಲಿಲ್ಲ. ಹೀಗಾಗಿ ಭಾರತದ ಆಟಗಾರರು ಸಹಾ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
2021ರಲ್ಲಿ ಕೇವಲ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಐರ್ಲೆಂಡ್ ತಂಡಗಳು ಮಾತ್ರ ಹತ್ತಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನಾಡಿವೆ. ಇನ್ನು ಡಿಸೆಂಬರ್‌ನಲ್ಲಿ ಪಾಕಿಸ್ತಾನ vs ವೆಸ್ಟ್ ಇಂಡೀಸ್, ಹಾಗೂ ಅಮೆರಿಕ vs ಐರ್ಲೆಂಡ್ ನಡುವಿನ ಏಕದಿನ ಸರಣಿಯು ಕೋವಿಡ್ ಕಾರಣದಿಂದ ರದ್ದಾಗಿವೆ.
ಇದೀಗ 2021ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ ಐರ್ಲೆಂಡ್ ಆಟಗಾರರೇ ಸಿಂಹಪಾಲು ಪಡೆದಿದ್ದಾರೆ. ಇದೀಗ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ ಹೀಗಿದೆ ನೋಡಿ
5. ಆ್ಯಂಡಿ ಬಲ್ಬೈರ್ನ್
ಐರ್ಲೆಂಡ್ ತಂಡದ ನಾಯಕ ಆ್ಯಂಡಿ ಬಲ್ಬೈರ್ನ್ 14 ಏಕದಿನ ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಮೂರು ಅರ್ಧಶತಕ ಸಹಿತ 32.38ರ ಬ್ಯಾಟಿಂಗ್ ಸರಾಸರಿಯಲ್ಲಿ 421 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.
4. ಹ್ಯಾರಿ ಟೆಕ್ಟರ್
ಹ್ಯಾರಿ ಟೆಕ್ಟರ್ 2021ರಲ್ಲಿ ಒಂದೇ ಒಂದು ಶತಕ ಬಾರಿಸದಿದ್ದರೂ ಸಹಾ ಈ ವರ್ಷ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. 22 ವರ್ಷದ ಟೆಕ್ಟರ್ 14 ಏಕದಿನ ಪಂದ್ಯಗಳನ್ನಾಡಿ 454 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
3. ತಮೀಮ್ ಇಕ್ಬಾಲ್
ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಷ್ಯಾದ ಏಕೈಕ ಆಟಗಾರನೆಂದರೆ ಅದು ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್. ಬಾಂಗ್ಲಾ ಎಡಗೈ ಬ್ಯಾಟರ್ 12 ಏಕದಿನ ಪಂದ್ಯಗಳಿಂದ 38.66ರ ಬ್ಯಾಟಿಂಗ್ ಸರಾಸರಿಯಲ್ಲಿ 464 ರನ್ ಬಾರಿಸಿದ್ದಾರೆ.
2.ಜೇನ್‌ಮನ್ ಮಲಾನ್
ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಬ್ಯಾಟರ್, ಜೆ.ಮಲಾನ್ ಈ ವರ್ಷ ಕೇವಲ 7 ಇನಿಂಗ್ಸ್‌ಗಳನ್ನಾಡಿ 84.83ರ ಬ್ಯಾಟಿಂಗ್ ಸರಾಸರಿಯಲ್ಲಿ 509 ರನ್ ಬಾರಿಸಿದ್ದಾರೆ. ಹರಿಣಗಳ ಪರ ಜೆ. ಮಲಾನ್ ಈ ವರ್ಷ 2 ಶತಕ ಹಾಗೂ 2 ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
1. ಪೌಲ್ ಸ್ಟೆರ್ಲಿಂಗ್
ಐರ್ಲೆಂಡ್ ಆಲ್ರೌಂಡರ್ ಪೌಲ್ ಸ್ಟೆರ್ಲಿಂಗ್ ಈ ವರ್ಷ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, 14 ಇನಿಂಗ್ಸ್‌ಗಳನ್ನಾಡಿ 3 ಶತಕ ಸಹಿತ 54.23ರ ಬ್ಯಾಟಿಂಗ್ ಸರಾಸರಿಯಲ್ಲಿ 705 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.