ಈ ನಾಲ್ವರು ತಾರಾ ಆಟಗಾರರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಜಡೇಜಾ-ಬುಮ್ರಾ..!

First Published Dec 6, 2022, 3:54 PM IST

ಬೆಂಗಳೂರು(ಡಿ.06): ಪ್ರತಿದಿನ ಒಂದಿಲ್ಲೊಂದು ಆಟಗಾರರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಡಿಸೆಂಬರ್ 06 ಬಂತೆಂದರೆ ಪ್ರಮುಖ ಆರು ಕ್ರಿಕೆಟಿಗರು ಒಂದೇ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಅದರಲ್ಲಿ ಟೀಂ ಇಂಡಿಯಾ ತಾರಾ ಆಟಗಾರರಾದ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಕೂಡಾ ಸೇರಿದ್ದಾರೆ. ಡಿಸೆಂಬರ್ 06ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಪ್ರಮುಖ ಆಟಗಾರರ ಚುಟುಕು ಪರಿಚಯ ಇಲ್ಲಿದೆ ನೋಡಿ
 

1. ರವೀಂದ್ರ ಜಡೇಜಾ: ಟೀಂ ಇಂಡಿಯಾ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ 1988ರ ಡಿಸೆಂಬರ್ 06ರಂದು ಗುಜರಾತ್‌ನ ಜಾಮನಗರ್‌ನಲ್ಲಿ ಜನಿಸಿದ್ದು, ಇಂದು 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ರವೀಂದ್ರ ಜಡೇಜಾ ಸದ್ಯ ಗಾಯದ ಸಮಸ್ಯೆಯಿಂದಾಗಿ ಐಸಿಸಿ ಟಿ20 ವಿಶ್ವಕಪ್ ಹಾಗೂ ಬಾಂಗ್ಲಾದೇಶ ಎದುರಿನ ಸರಣಿಯಿಂದ ಹೊರಬಿದ್ದಿದ್ದಾರೆ. ಆದಷ್ಟು ಬೇಗ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿ ಟೀಂ ಇಂಡಿಯಾ ಕೂಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

2. ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾ ಮಾರಕ ವೇಗಿ ಬುಮ್ರಾ, ಡಿಸೆಂಬರ್ 06, 1993ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ್ದು ಇಂದು 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 
 

ತಮ್ಮ ಕರಾರುವಕ್ಕಾದ ಯಾರ್ಕರ್ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಂಗೆಡಿಸುವ ಕ್ಷಮತೆ ಹೊಂದಿರುವ ಬುಮ್ರಾ ಕೂಡಾ ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರದಲ್ಲಿಯೇ ತಂಡ ಕೂಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
 

3. ಶ್ರೇಯಸ್ ಅಯ್ಯರ್: ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.
 

28 ವರ್ಷದ ಶ್ರೇಯಸ್ ಅಯ್ಯರ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್, ಭಾರತದ ಭರವಸೆಯ ನಾಯಕನಾಗಿಯೂ ಅಯ್ಯರ್ ಬಿಂಬಿತವಾಗಿದ್ದಾರೆ.

4. ರುದ್ರಪ್ರತಾಪ್ ಸಿಂಗ್: ಆರ್‌ ಪಿ ಸಿಂಗ್ ಭಾರತ ತಂಡ ಅದ್ಬುತ ಎಡಗೈ ವೇಗಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. 1985ರಲ್ಲಿ ಜನಿಸಿದ್ದ ಆರ್‌ ಪಿ ಸಿಂಗ್, ಇಂದು 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಭಾರತ ಪರ 14 ಟೆಸ್ಟ್, 58 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದ ಆರ್‌ ಪಿ ಸಿಂಗ್, 2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಚೊಚ್ಚಲ ಟಿ20 ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಆರ್‌ ಪಿ ಸಿಂಗ್ ಮಹತ್ತರ ಪಾತ್ರ ವಹಿಸಿದ್ದರು.
 

5. ಕರುಣ್ ನಾಯರ್: ಕರ್ನಾಟಕದ ಪ್ರತಿಭಾನ್ವಿತ ಬ್ಯಾಟರ್ ಕರುಣ್ ನಾಯರ್, ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಕರುಣ್ ನಾಯರ್ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆ ಕರುಣ್‌ ನಾಯರ್ ಹೆಸರಿನಲ್ಲಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ದ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಕರುಣ್ ನಾಯರ್ ಅಜೇಯ 303 ರನ್ ಸಿಡಿಸಿ ಮಿಂಚಿದ್ದರು.

6. ಆಂಡ್ರ್ಯೂ ಫ್ಲಿಂಟಾಫ್: ಇಂಗ್ಲೆಂಡ್ ಮಾಜಿ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್, ವಿಶ್ವ ಕ್ರಿಕೆಟ್ ಕಂಡ ದಿಗ್ಗಜ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಫ್ಲಿಂಟಾಫ್ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 
 

ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಫ್ಲಿಂಟಾಫ್ 79 ಟೆಸ್ಟ್, 141 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 7 ಸಾವಿರಕ್ಕೂ ಅಧಿಕ ರನ್ ಹಾಗೂ 400 ವಿಕೆಟ್ ಕಬಳಿಸಿ ಮಿಂಚಿದ್ದರು.

click me!