ರೋಹಿತ್ ಶರ್ಮಾ ಹಠಾತ್ ಕೈಬಿಡುವಿಕೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಮತ್ತು 5ನೇ ಟೆಸ್ಟ್ ಪಂದ್ಯ ಇಂದು ಸಿಡ್ನಿಯಲ್ಲಿ ಆರಂಭವಾಯಿತು. ಈ ಕೊನೆಯ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗುವುದು; ಬುಮ್ರಾ ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿತ್ತು. ಅದರಂತೆ ಇಂದು 5ನೇ ಟೆಸ್ಟ್ ಪಂದ್ಯ ಆರಂಭವಾದಾಗ, ರೋಹಿತ್ ಶರ್ಮಾ ತಂಡದಲ್ಲಿ ಇರಲಿಲ್ಲ.
ಬ್ಯಾಟಿಂಗ್, ನಾಯಕತ್ವದಲ್ಲಿ ವೈಫಲ್ಯ
ಮೊದಲ ಟೆಸ್ಟ್‌ನಲ್ಲಿ ನಾಯಕರಾಗಿದ್ದ ಬುಮ್ರಾ, ಕೊನೆಯ ಟೆಸ್ಟ್‌ನಲ್ಲಿ ಮತ್ತೆ ನಾಯಕರಾಗಿ ನೇಮಕಗೊಂಡರು. ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಇಲ್ಲದಿರುವುದು ಯಾರಿಗೂ ಅಚ್ಚರಿ ಮೂಡಿಸಲಿಲ್ಲ. ಏಕೆಂದರೆ ಈ ಸರಣಿಯುದ್ದಕ್ಕೂ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ 6 ಸರಾಸರಿಯೊಂದಿಗೆ ಕೇವಲ 31 ರನ್ ಗಳಿಸಿದ್ದಾರೆ. ಅದೇ ರೀತಿ ನಾಯಕತ್ವದಲ್ಲೂ ವಿಫಲರಾಗಿದ್ದಾರೆ.
ಕೈಬಿಟ್ಟರಾ? ಇಲ್ಲ ತಾನಾಗೇ ಹೊರಟರಾ?
ಮೈದಾನದಲ್ಲಿ ಫೀಲ್ಡಿಂಗ್ ಸೆಟ್ ಮಾಡುವುದು ಮಾತ್ರವಲ್ಲದೆ ಬೌಲರ್‌ಗಳನ್ನು ರೊಟೇಟ್ ಮಾಡುವಾಗಲೂ ರೋಹಿತ್ ಶರ್ಮಾ ಚೆಲ್ಲಾಟವಾಡಿದರು. ಇದರಿಂದಾಗಿ ಅವರು ತಂಡದಲ್ಲಿ ಇಲ್ಲದಿರುವುದು ಎಲ್ಲರೂ ನಿರೀಕ್ಷಿಸಿದ್ದರೂ, ಅವರನ್ನು ತಂಡದಿಂದ ಹಠಾತ್ತನೆ ಕೈಬಿಡಲಾಗಿದೆಯೇ ಅಥವಾ ಅವರೇ ಕೊನೆಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆಯೇ ಎಂಬುದು ತಿಳಿದಿಲ್ಲ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಸೋಲಿನ ನಂತರ ರೋಹಿತ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಕೋಚ್ ಗೌತಮ್ ಗಂಭೀರ್, 'ಕೊನೆಯ ಟೆಸ್ಟ್‌ನಲ್ಲಿ ನೀವು ಇರುವುದಿಲ್ಲ' ಎಂದು ರೋಹಿತ್‌ಗೆ ನೇರವಾಗಿ ಹೇಳಿದ್ದಾರೆ ಮತ್ತು ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಮತ್ತೊಂದೆಡೆ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಿಲ್ಲ; ಅವರೇ ಕೊನೆಯ ಟೆಸ್ಟ್‌ನಿಂದ ಹಿಂದೆ ಸರಿದಿದ್ದಾರೆ.
ಬುಮ್ರಾ ನೀಡಿದ ವಿವರಣೆ
ಮೆಲ್ಬೋರ್ನ್ ಟೆಸ್ಟ್ ಸೋಲಿನಿಂದ ಮನನೊಂದ ಅವರು ಇನ್ನು ಮುಂದೆ ತಂಡಕ್ಕೆ ಹೊರೆಯಾಗಬಾರದು ಎಂದು ಭಾವಿಸಿ ತಾವಾಗಿಯೇ ಹಿಂದೆ ಸರಿದಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ನಡುವೆ, ಕೊನೆಯ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಇಲ್ಲದಿರುವ ಬಗ್ಗೆ ಬುಮ್ರಾ ವಿವರಣೆ ನೀಡಿದ್ದಾರೆ.
5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ನಂತರ ಮಾತನಾಡಿದ ಬುಮ್ರಾ, ''ನಮ್ಮ ನಾಯಕ ರೋಹಿತ್ ಶರ್ಮಾ ತಮ್ಮ ನಾಯಕತ್ವದ ಗುಣವನ್ನು ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಅವರು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಇದು ತಂಡದಲ್ಲಿ ಐಕ್ಯತೆ ಇದೆ; ಸ್ವಾರ್ಥವಿಲ್ಲ ಎಂಬುದನ್ನು ತೋರಿಸುತ್ತದೆ. ತಂಡದ ಹಿತಕ್ಕೆ ಏನು ಬೇಕೋ ಅದನ್ನು ನಾವು ಮಾಡುತ್ತೇವೆ'' ಎಂದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೆಲ್ಬರ್ನ್ ಟೆಸ್ಟ್ ಪಂದ್ಯವೇ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯ ಆಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಬುಮ್ರಾ ಅವರ ಹೇಳಿಕೆಯ ಬಗ್ಗೆ ಮುಂಬರುವ ದಿನಗಳಲ್ಲಿ ರೋಹಿತ್ ಶರ್ಮಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.