2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಹಾಗೂ 7 ಸೋಲುಗಳೊಂದಿಗೆ ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹಾಗಂತ ಆರ್‌ಸಿಬಿ ತಂಡವು ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿಲ್ಲ. ಯಾಕೆಂದರೆ ಆರ್‌ಸಿಬಿ IPL ಲೀಗ್ ಹಂತದಲ್ಲಿ ಇನ್ನೂ 6 ಪಂದ್ಯಗಳನ್ನು ಆಡಬೇಕಿದೆ.
ಇಂದಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇನ್ನುಳಿದ ಎಲ್ಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಯಾವುದೇ ನೆಟ್ ರನ್‌ರೇಟ್ ಹಂಗಿಲ್ಲದೇ ಪ್ಲೇ ಆಫ್ ಪ್ರವೇಶಿಸಲು ಸಾಧ್ಯ.
ಹೌದು, ಮೇಲ್ನೋಟಕ್ಕೆ ಆರ್‌ಸಿಬಿ ತಂಡವು ಪ್ಲೇ ಆಫ್ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದು ನಿಮಗೆ ಅನಿಸಿರಬಹುದು. ಒಂದು ವೇಳೆ ಇಂದಿನಿಂದ ಆರ್‌ಸಿಬಿ ತಂಡವು ಇನ್ನುಳಿದ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಆರ್‌ಸಿಬಿ ಖಾತೆಗೆ 14 ಅಂಕಗಳು ಸೇರ್ಪಡೆಯಾಗಲಿವೆ. ಇನ್ನುಳಿದ ತಂಡಗಳ ಫಲಿತಾಂಶಗಳು ಆರ್‌ಸಿಬಿ ಪರವಾಗಿ ಬಂದರೆ ಯಾವುದೇ ನೆಟ್ ರನ್‌ರೇಟ್ ಅಗತ್ಯವಿಲ್ಲದೇ ಪ್ಲೇ ಆಫ್ ಪ್ರವೇಶಿಸಬಹುದು.
ಆರ್‌ಸಿಬಿ ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ, ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೂರು ತಂಡಗಳು ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗಬೇಕು.
ಸದ್ಯಕ್ಕಿರುವ ತಂಡಗಳ ಪ್ರಕಾರ ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಬಹುತೇಕ ಮೊದಲ ಮೂರು ತಂಡಗಳಾಗಿ ಪ್ಲೇ ಆಫ್ ಪ್ರವೇಶಿಸಲಿವೆ.
ಒಂದು ವೇಳೆ ರಾಜಸ್ಥಾನ ರಾಯಲ್ಸ್ ತಂಡವು ತನ್ನ ಪಾಲಿನ 6 ಪಂದ್ಯಗಳಲ್ಲಿ 4 ಗೆಲವು ಸಾಧಿಸಿದರೆ, ಇನ್ನು ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಮ್ಮ ಪಾಲಿನ 7 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಆ ತಂಡಗಳು ಕ್ರಮವಾಗಿ 22, 20, 20 ಅಂಕಗಳನ್ನು ಹೊಂದಲಿವೆ.
ಒಂದು ವೇಳೆ ಹೀಗಾದಲ್ಲೇ ಆರ್‌ಸಿಬಿ ಇನ್ನುಳಿದ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 14 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಯಾಕೆಂದರೆ ಉಳಿದ ತಂಡಗಳು ಹೆಚ್ಚೆಂದರೆ 12 ಅಂಕ ಗಳಿಸಲಷ್ಟೇ ಸಾಧ್ಯವಾಗುತ್ತದೆ.
ಅದೃಷ್ಟ ಕೈ ಹಿಡಿದರೆ ಆರ್‌ಸಿಬಿ 3ನೇ ಸ್ಥಾನಕ್ಕೇರಬಹುದು..!
ಒಂದು ವೇಳೆ ಅಚ್ಚರಿಯ ರೀತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ದಿಢೀರ್ ಲಯ ಕಳೆದುಕೊಂಡು ತಮ್ಮ ಪಾಲಿನ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದರೆ, ಆರ್‌ಸಿಬಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಅವಕಾಶವೂ ಇದೆ.
ಹೌದು, ಒಂದು ವೇಳೆ ಲಖನೌ ಸೂಪರ್ ಜೈಂಟ್ಸ್ ತಂಡವು ತಮ್ಮ ಪಾಲಿನ 6 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಜಯಿಸಿದರೆ, ಲಖನೌ ಖಾತೆಯಲ್ಲಿ 20 ಅಂಕಗಳಾಗಲಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದೆ.
ಇದೇ ವೇಳೆ ಆರ್‌ಸಿಬಿ ಖಾತೆಯಲ್ಲಿ 14 ಅಂಕಗಳು ಇರಲಿದ್ದು ಮೂರನೇ ಸ್ಥಾನಕ್ಕೇರುವ ಅವಕಾಶ ಇದೆ ಉಳಿದ 6 ತಂಡಗಳು 12 ಅಂಕಗಳನ್ನಷ್ಟೇ ಪಡೆಯಲಿವೆ. ಇದೇ ಲೆಕ್ಕಾಚಾರದ ಪ್ರಕಾರ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಕೂಡಾ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ಅವಕಾಶ ಇದೆ.
ಇದೆಲ್ಲ ಆಗಬೇಕಿದ್ದರೇ, ಹಿಂದಿನ ಕಹಿಯನ್ನು ಮರೆತು ಆರ್‌ಸಿಬಿ ತಂಡವು ಉಳಿದೆಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು ಇದರ ಜತೆಗೆ ಅದೃಷ್ಟ ಕೈಹಿಡಿದರೆ ಖಂಡಿತ ಆರ್‌ಸಿಬಿ ಪ್ಲೇ ಆಫ್‌ಗೇರಲಿದೆ.