ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಬಾರಿಗೆ ಸುರೇಶ್ ರೈನಾ ಅವರನ್ನು ರೀಟೈನ್ ಮಾಡಿಕೊಳ್ಳದಿರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಸುರೇಶ್ ರೈನಾ ಬಹುತೇಕ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೋಯಿನ್ ಅಲಿ ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ರೀಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.
ಕಳಪೆ ಫಾರ್ಮ್‌ನಿಂದ ಯುಎಇ ಚರಣದ ಐಪಿಎಲ್‌ನಲ್ಲಿ ಬೆಂಚ್ ಕಾಯಿಸಿದ್ದ, ರೈನಾ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ಕೈಬಿಡಲು ತೀರ್ಮಾನಿಸಿದ್ದು, ಮೆಗಾ ಹರಾಜಿನಲ್ಲಿ ಹೊಸ ತಂಡ ಸೇರಿ ಈ ಮೂರು ತಂಡಗಳು ರೈನಾ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಎದುರು ನೋಡುತ್ತಿವೆ.
1. ಲಖನೌ ತಂಡ ರೈನಾರ ಮೇಲೆ ಕಣ್ಣಿಟ್ಟಿದೆ:
ದೇಶಿ ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ತವರು ರಾಜ್ಯ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಇದೀಗ 15ನೇ ಆವೃತ್ತಿಯಲ್ಲಿ ಐಪಿಎಲ್ ಕೂಡಿಕೊಂಡಿರುವ ಲಖನೌ ಫ್ರಾಂಚೈಸಿ ಲೋಕಲ್ ಹೀರೋಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಈ ಮೊದಲು ಸಿಎಸ್‌ಕೆ ಎರಡು ವರ್ಷ ಬ್ಯಾನ್ ಆಗಿದ್ದಾಗ ರೈನಾ, ಗುಜರಾತ್ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ರೈನಾರನ್ನು ಹರಾಜಿನಲ್ಲಿ ಲಖನೌ ತಂಡವು ಖರೀದಿಸುವ ಸಾಧ್ಯತೆಯಿದೆ.
2. ರಾಜಸ್ಥಾನಕ್ಕೂ ಬೇಕಿದೆ ರೈನಾ ಅವರಂತಹ ಆಟಗಾರ
ಕಳೆದ ಅವೃತ್ತಿಗಳಲ್ಲಿ ಸಂಜು ಸ್ಯಾಮ್ಸನ್, ರಾಜಸ್ಥಾನ ರಾಯಲ್ಸ್ ತಂಡದ ಪರ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ತಾರಾ ಆಟಗಾರರ ಅನುಪಸ್ಥಿತಿಯಿಂದಾಗಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಹೀಗಾಗಿ ರೈನಾ ಅವರಂತಹ ಆಟಗಾರನ ಹುಡುಕಾಟದಲ್ಲಿದೆ ರಾಯಲ್ಸ್.
14ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಮಿಸ್ಟರ್ ಐಪಿಎಲ್ ಖ್ಯಾತಿಯ ಸ್ಪೋಟಕ ಬ್ಯಾಟರ್ ಸುರೇಶ್ ರೈನಾ ಅವರನ್ನು ಖರೀದಿಸಲು ರಾಯಲ್ಸ್ ಫ್ರಾಂಚೈಸಿ ಲೆಕ್ಕಾಚಾರ ಹಾಕುತ್ತಿದೆ.
3 ಸನ್‌ರೈಸರ್ಸ್ ಹೈದರಾಬಾದ್ ಸೇರಲಿದ್ದಾರಾ ರೈನಾ..?
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗಿಂತ ಕಳಪೆ ಪ್ರದರ್ಶನ ತೋರಿದ ತಂಡವೆಂದರೆ ಅದು ಸನ್‌ರೈಸರ್ಸ್ ಹೈದರಾಬಾದ್. ಡೇವಿಡ್ ವಾರ್ನರ್ ಮುಂಬರುವ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ಖಚಿತಪಡಿಸಿದ್ದಾರೆ.
ಒಳ್ಳೆಯ ನಾಯಕತ್ವ ಗುಣ ಹೊಂದಿರುವ ಸುರೇಶ್ ರೈನಾ ಹೈದರಾಬಾದ್ ತಂಡ ಸೇರಿದರೇ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗುವುದಲ್ಲದೇ ಅವರ ಅಪಾರ ಅನುಭವ ಕೂಡಾ ಹೈದರಾಬಾದ್ ತಂಡದ ನೆರವಿಗೆ ಬರಲಿದೆ.