IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ ಫೈನಲ್‌ವರೆಗಿನ ಜರ್ನಿ

First Published Oct 15, 2021, 5:37 PM IST

ಬೆಂಗಳೂರು: ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವು 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 3 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿದ ಕೆಕೆಆರ್ (KKR) ತಂಡವು ಮೂರನೇ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ದುಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ. ಇಯಾನ್‌ ಮಾರ್ಗನ್‌(Eoin Morgan) ನೇತೃತ್ವದ ಕೆಕೆಆರ್ ತಂಡದ ಫೈನಲ್‌ವರೆಗಿನ ಪಯಣ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

ಮೊದಲ ಪಂದ್ಯ: ಏಪ್ರಿಲ್ 11
ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು 10 ರನ್‌ಗಳ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆಕರ್ಷಕ 80 ರನ್‌ ಬಾರಿಸಿದ್ದ ನಿತೀಶ್ ರಾಣಾ ಗೆಲುವಿನ ಹೀರೋ ಎನಿಸಿಕೊಂಡಿದ್ದರು. 
 

ಎರಡನೇ ಪಂದ್ಯ: ಏಪ್ರಿಲ್‌ 13
ಮುಂಬೈ ಇಂಡಿಯನ್ಸ್ ವಿರುದ್ದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 10 ರನ್‌ಗಳ ಅಂತರದ ರೋಚಕ ಸೋಲು ಅನುಭವಿಸಿತ್ತು. ಮುಂಬೈ ಇಂಡಿಯನ್ಸ್‌ ಸ್ಪಿನ್ನರ್ ರಾಹುಲ್ ಚಹಾರ್ 4 ವಿಕೆಟ್ ಕಬಳಿಸಿ ಕೆಕೆಆರ್‌ಗೆ ಶಾಕ್ ನೀಡಿದ್ದರು. 

KKR vs RCB

ಮೂರನೇ ಪಂದ್ಯ: ಏಪ್ರಿಲ್ 18
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಮತ್ತೊಂದು ಸೋಲು ಕಂಡಿತು. ಆರ್‌ಸಿಬಿ 38 ರನ್‌ಗಳ ಗೆಲುವು ದಾಖಲಿಸಿತ್ತು. ಎಬಿ ಡಿವಿಲಿಯರ್ಸ್ ಸ್ಪೋಟಕ 76 ರನ್‌ ಚಚ್ಚಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

4ನೇ ಪಂದ್ಯ: ಏಪ್ರಿಲ್ 21
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಹ್ಯಾಟ್ರಿಕ್ ಸೋಲು ಅನುಭವಿಸಿತು. ಸಿಎಸ್‌ಕೆ ತಂಡವು 18 ರನ್‌ಗಳ ಜಯ ದಾಖಲಿಸಿತು. ಚೆನ್ನೈ ಆರಂಭಿಕ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅಜೇಯ 95 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು
 

5ನೇ ಪಂದ್ಯ: ಏಪ್ರಿಲ್‌ 24
ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಸತತ 4ನೇ ಸೋಲು ಕಂಡಿತು. ರಾಜಸ್ಥಾನ ರಾಯಲ್ಸ್ 6 ವಿಕೆಟ್‌ಗಳ ಜಯ ಸಾಧಿಸಿತು. ಕ್ರಿಸ್‌ ಮೋರಿಸ್ ಮಿಂಚಿನ ಬೌಲಿಂಗ್ ನಡೆಸಿ ರಾಯಲ್ಸ್ ಗೆಲುವಿನ ರೂವಾರಿ ಎನಿಸಿದ್ದರು.
 

6ನೇ ಪಂದ್ಯ: ಏಪ್ರಿಲ್‌ 26
ಪಂಜಾಬ್ ಕಿಂಗ್ಸ್ ವಿರುದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಗೆಲುವಿನ ನಿಟ್ಟಸಿರುಬಿಟ್ಟಿತ್ತು. ನಾಯಕ ಇಯಾನ್ ಮಾರ್ಗನ್ ಅಜೇಯ 47 ರನ್ ಬಾರಿಸಿ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದ್ದರು.
 

7ನೇ ಪಂದ್ಯ: ಏಪ್ರಿಲ್ 29
ಡೆಲ್ಲಿ ಕ್ಯಾಪಿಟಲ್ಸ್ ಎದುರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಮೊದಲ 7 ಪಂದ್ಯಗಳಲ್ಲಿ ಕೆಕೆಆರ್ ಬರೀ 2 ಪಂದ್ಯ ಗೆದ್ದು ನೀರಸ ಪ್ರದರ್ಶನ ತೋರಿತ್ತು. ಡೆಲ್ಲಿ ಬ್ಯಾಟ್ಸ್‌ಮನ್‌ ಪೃಥ್ವಿ ಶಾ 82 ರನ್‌ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು.

8ನೇ ಪಂದ್ಯ: ಸೆಪ್ಟೆಂಬರ್ 20
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಕೆಕೆಆರ್ ತಂಡವು 9 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಯುಎಇ ಚರಣದಲ್ಲಿ ಕಮ್‌ಬ್ಯಾಕ್ ಆಗುವ ಸೂಚನೆ ನೀಡಿತ್ತು. ಕೆಕೆಆರ್ ಆಲ್ರೌಂಡ್ ಆಟದೆದುರು ವಿರಾಟ್ ಕೊಹ್ಲಿ ಪಡೆ ಆಘಾತಕಾರಿ ಸೋಲು ಕಂಡಿತ್ತು.

9ನೇ ಪಂದ್ಯ: ಸೆಪ್ಟೆಂಬರ್ 23
ಮುಂಬೈ ಇಂಡಿಯನ್ಸ್ ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು 7 ವಿಕೆಟ್‌ಗಳ ಜಯ ಸಾಧಿಸಿ ಬೀಗಿತ್ತು. ಸುನಿಲ್ ನರೈನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 
 

10ನೇ ಪಂದ್ಯ: ಸೆಪ್ಟೆಂಬರ್ 26
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡವು 2 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಕೆಕೆಆರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು. ರವೀಂದ್ರ ಜಡೇಜಾ ಆಲ್ರೌಂಡ್ ಆಟದ ಮೂಲಕ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
 

KKR vs DC

11ನೇ ಪಂದ್ಯ: ಸೆಪ್ಟೆಂಬರ್ 28

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಯಾನ್ ಮಾರ್ಗನ್‌ ನೇತೃತ್ವದ ಕೆಕೆಆರ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತು. ಸುನಿಲ್‌ ನರೈನ್‌ ಆಲ್ರೌಂಡ್ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
 

12ನೇ ಪಂದ್ಯ: ಅಕ್ಟೋಬರ್ 01
ಪಂಜಾಬ್ ಕಿಂಗ್ಸ್ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು 5 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತು. ಕೆ.ಎಲ್. ರಾಹುಲ್ ಆಕರ್ಷಕ ಅರ್ಧಶತಕ ಬಾರಿಸಿ ಪಂದ್ಯ ಪಂಜಾಬ್ ಪಾಲಾಗುವಂತೆ ಮಾಡಿದ್ದರು.
 

13ನೇ ಪಂದ್ಯ: ಅಕ್ಟೋಬರ್ 03
ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಕೆಕೆಆರ್ ತಂಡವು 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು. ಶುಭ್‌ಮನ್ ಗಿಲ್ ಸಮಯೋಚಿತ ಅರ್ಧಶತಕ ಬಾರಿಸಿ ತಂಡದ ಗೆಲುವಿನ ಕಾರಣರಾದರು.

14ನೇ ಪಂದ್ಯ: ಅಕ್ಟೋಬರ್ 07
ರಾಜಸ್ಥಾನ ರಾಯಲ್ಸ್ ವಿರುದ್ದ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕೆಕೆಆರ್ ತಂಡವು 86 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಶಿವಂ ಮಾವಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎಲಿಮಿನೇಟರ್ ಪಂದ್ಯ: ಅಕ್ಟೋಬರ್ 11

ಆರ್‌ಸಿಬಿ ಎದುರು ಶಾರ್ಜಾ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ತಂಡವು 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಸುನಿಲ್ ನರೈನ್ ತಂಡವನ್ನು ಎರಡನೇ ಕ್ವಾಲಿಫೈಯರ್‌ಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
 

2ನೇ ಕ್ವಾಲಿಫೈಯರ್ ಪಂದ್ಯ: ಅಕ್ಟೋಬರ್ 14
ಡೆಲ್ಲಿ ಕ್ಯಾಪಿಟಲ್ಸ್ ಎದುರು ಶಾರ್ಜಾ ಮೈದಾನದಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಕೊನೆಯ 2 ಎಸೆತಗಳಿದ್ದಾಗ ರಾಹುಲ್ ತ್ರಿಪಾಠಿ ಆಕರ್ಷಕ ಸಿಕ್ಸರ್ ಸಿಡಿಸಿ ತಂಡವನ್ನು ರೋಚಕವಾಗಿ ಫೈನಲ್‌ಗೇರಿಸುವಲ್ಲಿ ಯಶಸ್ವಿಯಾದರು.
 

click me!