ಕೊರೋನಾ ವೈರಸ್ ಬಡಜನರ ಮೇಲೆ ಬಲವಾದ ಹೊಡೆತ ನೀಡಿದೆ. ಕೋವಿಡ್ 19 ಎನ್ನುವ ಮಾರಣಾಂತಿಕ ಸೋಂಕಿಗೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 11 ಸಾವಿರದ ಗಡಿ ದಾಟಿದ್ದು 300ಕ್ಕೂ ಅಧಿಕ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತ ಇದೀಗ ಎರಡನೇ ಹಂತದಲ್ಲಿ ಮೇ 03ರವರೆಗೆ ಲಾಕ್‌ಡೌನ್ ಘೋಷಿಸಿದೆ. ಭಾರತದಲ್ಲೂ ಕೂಲಿ ಕಾರ್ಮಿಕರ ಬದುಕು ದುಸ್ತರವೆನಿಸಿದೆ. ಮಾರ್ಚ್ 25ರಂದು ಮೊದಲ ಹಂತದಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಿಸಿದ್ದರಿಂದ ಹಲವು ಮಂದಿ ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ತವರಿಗೆ ಸೇರಿಕೊಂಡರು. ಆದರೆ ಹೆಚ್ಚು ಹಣಕೊಡಲು ಸಾಧ್ಯವಾಗದ ಬಡಬಗ್ಗರು, ಕೂಲಿ ಕಾರ್ಮಿಕರು ನಡೆದುಕೊಂಡೇ ಊರು ಸೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ವೇಗಿ ತಾನು ಕಣ್ಣಾರೆ ಕಂಡ ಘಟನೆಯನ್ನು ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.