PAK vs AUS: ಪಾಕ್ ಪ್ರವಾಸದಲ್ಲಿರುವ ಆಸ್ಟನ್ ಅಗರ್‌ಗೆ ಜೀವ ಬೆದರಿಕೆ..!

First Published | Mar 1, 2022, 12:39 PM IST

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು (Australian Cricket Team) ಬರೋಬ್ಬರಿ 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಪಾಕ್ ಪ್ರವಾಸದಲ್ಲಿ ಆಸೀಸ್ ತಂಡವು ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಸ್ಪಿನ್ನರ್ ಆಸ್ಟನ್ ಅಗರ್‌ಗೆ (Ashton Agar) ಆನ್‌ಲೈನ್‌ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (Pakistan Cricket Board), ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಹಾಗೂ ಭದ್ರತಾ ಪಡೆಗಳು ತನಿಖೆ ನಡೆಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

1998ರ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಇದೀಗ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಬರೋಬ್ಬರಿ 24 ವರ್ಷಗಳ ಬಳಿಕ ಕಾಂಗರೂ ಪಡೆ ದ್ವಿಪಕ್ಷೀಯ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದಿರುವುದು ಪಾಕ್‌ ಪಾಲಿಗೆ ಗೌರವದ ವಿಚಾರವಾಗಿದೆ.

ಇದೆಲ್ಲದರ ಹೊರತಾಗಿ, ಆಸ್ಟ್ರೇಲಿಯಾದ ಸ್ಪಿನ್ನರ್ ಆಸ್ಟನ್ ಅಗರ್‌ಗೆ ಆನ್‌ಲೈನ್‌ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಅವರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡದಂತೆ ಬೆದರಿಕೆ ಹಾಕಲಾಗಿದೆ. ಭದ್ರತಾ ಸಿಬ್ಬಂದಿಗಳು ಇದು ಹುಸಿ ಬೆದರಿಕೆಯಾಗಿದೆ ಎಂದು ತಿಳಿಸಿದ್ದಾರೆ.

Tap to resize

ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ವರದಿ ಪ್ರಕಾರ, ಆಸ್ಟನ್ ಅಗರ್‌ ಗೆಳತಿಗೆ ಇನ್‌ಸ್ಟಾಗ್ರಾಮ್‌ ಮೂಲಕ ಬೆದರಿಕೆ ಹಾಕಲಾಗಿದೆ. ಈ ಕುರಿತಂತೆ ತನಿಖೆ ನಡೆಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌(ಪಿಸಿಬಿ), ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಸರ್ಕಾರದ ಭದ್ರತಾ ಪಡೆಗಳು, ಅಗರ್‌ಗೆ ಯಾವುದೇ ಅಪಾಯವಾಗದಂತೆ ಭದ್ರತೆ ನೀಡುವುದಾಗಿ ತಿಳಿಸಿವೆ. ಹೀಗಾಗಿ ಉಭಯ ತಂಡಗಳ ಕ್ರಿಕೆಟ್ ಮಂಡಳಿಗಳು ಜಂಟಿ ಹೇಳಿಕೆ ನೀಡಿ ಸ್ಪಷ್ಟನೆ ನೀಡಲಿದ್ದೇವೆ.

ಕ್ರಿಕೆಟ್ ಆಸ್ಟ್ರೇಲಿಯಾವು ಸೋಷಿಯಲ್ ಮೀಡಿಯಾದ ಪೋಸ್ಟ್‌ಗಳ ಬಗ್ಗೆ ಗಮನಹರಿಸುತ್ತಿದೆ. ಯಾವ ರೀತಿ ಬೆದರಿಕೆ ಹಾಕಲಾಗಿದೆ ಎನ್ನುವುದರ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನಿಖೆ ನಡೆಸಿದೆ. ಈ ರೀತಿಯ ಘಟನೆಗಳು ಬೆಳಕಿಗೆ ಬಂದಾಗ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಇದು ಹುಸಿ ಬೆದರಿಕೆಯಾದದ್ದು, ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಈಗಾಗಲೇ ಇಸ್ಲಾಮಾಬಾದ್‌ಗೆ ಬಂದಿಳಿದಿದ್ದು, ಈಗಾಗಲೇ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್‌, ಪಾಕಿಸ್ತಾನದಲ್ಲಿನ ಭದ್ರತೆಯ ಕುರಿತಂತೆ ಸಂತಸ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸದಲ್ಲಿ 3 ಟೆಸ್ಟ್, 3 ಏಕದಿನ ಹಾಗೂ ಒಂದು ಟಿ20 ಪಂದ್ಯಗಳನ್ನಾಡಲಿದೆ. ಮಾರ್ಚ್‌ 04ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

ನಾವು ಪಾಕಿಸ್ತಾನಕ್ಕೆ ಬಂದಿಳಿಯುತ್ತಿದ್ದಂತೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ವಿಮಾನ ನಿಲ್ದಾಣದಿಂದ ಬಂದಿಳಿಯುತ್ತಿದ್ದಂತೆಯೇ ನೇರವಾಗಿ ಹೋಟೆಲ್‌ ತಲುಪಿದ್ದೇವೆ. ನಮಗೆ ಸೂಕ್ತ ಸೌಲಭ್ಯ ಹಾಗೂ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿನ ವ್ಯವಸ್ಥೆಯ ಬಗ್ಗೆ ಖುಷಿ ಎನಿಸುತ್ತಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
 

Latest Videos

click me!