ಭಾರತದಿಂದ ವಿಶ್ವಕಪ್ ಕಿತ್ತುಕೊಂಡ ಆಸೀಸ್ ಕ್ರಿಕೆಟಿಗನಿಗೆ ವಕ್ಕರಿಸಿದ ಕೊರೋನಾ ವೈರಸ್..!

First Published | Jan 24, 2024, 4:22 PM IST

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಗಿದು ಎರಡು ತಿಂಗಳುಗಳೇ ಕಳೆದರೂ, ಭಾರತ ಫೈನಲ್ ಪಂದ್ಯದ ಸೋಲಿನ ಶಾಕ್‌ನಿಂದ ಟೀಂ ಇಂಡಿಯಾ ಅಭಿಮಾನಿಗಳು ಹೊರಬಂದಿಲ್ಲ. ಇದೆಲ್ಲದರ ನಡುವೆ ಭಾರತ ಕೈಯಿಂದ ವಿಶ್ವಕಪ್ ಕಿತ್ತುಕೊಂಡ ಆಸ್ಟ್ರೇಲಿಯಾ ಆಟಗಾರನಿಗೆ ಇದೀಗ ಕೊರೋನಾ ವಕ್ಕರಿಸಿದ ವಿಚಾರ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

ಭಾರತದಲ್ಲೇ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಅನಾಯಾಸವಾಗಿ ಮಣಿಸಿದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಆರನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಗೆ ಮುತ್ತಿಕ್ಕಿತ್ತು.

ಆಸ್ಟ್ರೇಲಿಯಾದ ಅಗ್ರಶ್ರೇಯಾಂಕಿತ ಬ್ಯಾಟರ್ ಟ್ರಾವಿಸ್ ಹೆಡ್, ಭಾರತ ಎದುರಿನ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.

Latest Videos


ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಸದ್ಯ ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡುತ್ತಿದೆ. ಈಗಾಗಲೇ ಕಾಂಗರೂ ಪಡೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆರಿಬಿಯನ್ ಪಡೆಯನ್ನು 10 ವಿಕೆಟ್‌ಗಳಿಂದ ಬಗ್ಗುಬಡಿದಿದೆ.
 

ಇನ್ನು ಮಾಧ್ಯಮಗಳ ವರದಿಯಂತೆ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ.

ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಅವರ ಆರೋಗ್ಯ ಅಡಿಲೇಡ್ ಟೆಸ್ಟ್ ಬಳಿಕವಷ್ಟೇ ಹದಗೆಟ್ಟಿದೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಆಕರ್ಷಕ 119 ರನ್ ಸಿಡಿಸಿ ಮಿಂಚಿದ್ದರು.

ಇದೀಗ ಟ್ರಾವಿಸ್ ಹೆಡ್‌ಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕಾಂಗರೂ ಪಡೆಯಿಂದ ದೂರವಿಡಲಾಗಿದೆ. ಮೂಲಗಳ ಪ್ರಕಾರ ಟ್ರಾವಿಸ್ ಹೆಡ್, ಈ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇದೀಗ ಟ್ರಾವಿಸ್ ಹೆಡ್, ವೆಸ್ಟ್ ಇಂಡೀಸ್ ಎದುರು ಬ್ರಿಸ್ಬೇನ್ ಟೆಸ್ಟ್ ಆಡಲಿದ್ದಾರೇ ಅಥವಾ ಇಲ್ಲವೇ ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಆದಷ್ಟು ಬೇಗ ಟ್ರಾವಿಸ್ ಹೆಡ್ ಚೇತರಿಸಿಕೊಳ್ಳಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.

click me!