ಕೃಪಲಾನಿ, ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಮಹಿಳೆಯರಿಗೆ ವಂಚಿಸಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಬೆದರಿಸುತ್ತಿದ್ದ ಈತನ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಬೆಂಗಳೂರಿನ ಇಂದಿರಾ ನಗರ ನಿವಾಸಿಯಾಗಿರುವ 36 ವರ್ಷದ ಕೃಪಲಾನಿಯ ಅಸಲಿ ಮುಖ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. 45 ವರ್ಷದ ಮಹಿಳಾ ಅಧಿಕಾರಿಗೆ ವಂಚನೆ, ಅತ್ಯಾ*ಚಾರ ಪ್ರಕರಣದಲ್ಲಿ ಕೃಪಲಾನಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪೊಲೀಸರ ತನಿಖೆಯಲ್ಲಿ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
25
ಪ್ರೀತಿ ಮತ್ತು ಮದವೆ ಹೆಸರಿನಲ್ಲಿ ಮೋಸ
ಉದ್ಯಮಿ ಕೃಪಲಾನಿ ಪ್ರೀತಿ ಮತ್ತು ಮದವೆ ಹೆಸರಿನಲ್ಲಿ ಮಹಿಳೆಯರನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸುತ್ತಿದ್ದನು ಎಂಬುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಕೃಪಲಾನಿ ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದನು. ಪರಿಚಯ ಮಾಡಿಕೊಂಡ ಅಧಿಕಾರಿಗಳಿಗೆ ಲಂಚ್, ಡಿನ್ನರ್ ಪಾರ್ಟಿಗೆ ಆಹ್ವಾನಿಸಿ ಸಲುಗೆ ಬೆಳೆಸಿಕೊಳ್ಳುತ್ತಿದ್ದನು.
35
ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್
ಸಲುಗೆ ಬೆಳೆಯುತ್ತಿದ್ದಂತೆ ಪ್ರೀತಿ ಹೆಸರಿನ ಸುಳ್ಳು ಬಲೆಯನ್ನು ಬೀಸುತ್ತಿದ್ದನು. ನಂತರ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಎಂದು ವರದಿಯಾಗಿದೆ. ಪುಲಕೇಶಿ ನಗರ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದು, ಮತ್ತಷ್ಟು ಸ್ಪೋಟಕ ವಿಷಯಗಳು ಬಯಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉದ್ಯಮಿ ಎಂ.ಕೃಪಲಾನಿ ನನ್ನ ಮೇಲೆ ಅತ್ಯಾ*ಚಾರ ಎಸಗಿ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು 45 ವರ್ಷದ ಮಹಿಳಾ ಅಧಿಕಾರಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದಿರಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರಿಂದ ಪ್ರಕರಣ ಇಂದಿರಾನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಈ ನಡುವೆ ಪ್ರಕರಣದ ತನಿಖೆಯನ್ನು ಪುಲಕೇಶಿ ನಗರ ಠಾಣೆಗೆ ಹಿರಿಯ ಅಧಿಕಾರಿಗಳು ತನಿಖೆಗೆ ವರ್ಗಾಯಿಸಿದ್ದರು. ಆರೋಪಿ ಕೃಪಲಾನಿಯು ವಿದೇಶಗಳಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಹಾಗೂ ರಫ್ತು ಮಾಡುವ ವ್ಯವಹಾರ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ.
ಈ ಹಿಂದೆ ಮಗ ಕಾಣೆಯಾಗಿದ್ದಾನೆ ಎಂದು ಕೃಪಲಾನಿ ತಾಯಿ ಹೇಬಿಯಸ್ ಕಾರ್ಪಸ್ ಹಾಕಿದ್ದರು. ಕೃಪಲಾನಿ ಉದ್ದೇಶ ಪೂರ್ವಕವಾಗಿ ಹೊಟೇಲ್ ನಲ್ಲಿ ಅಡಗಿರೋದು ಪತ್ತೆ ಆಗಿತ್ತು. ಈ ವೇಳೆ ಕೋರ್ಟ್ ಕೃಪಲಾನಿಗೆ ಎರಡು ಲಕ್ಷ ದಂಡ ವಿಧಿಸಿತ್ತು. ದಶಕದ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ ಮಾಡಿರುವ ಆರೋಪವೂ ಈತನ ವಿರುದ್ಧ ಕೇಳಿ ಬಂದಿದೆ. ಕೃಪಲಾನಿಯಿಂದ ದೌರ್ಜನ್ಯಕ್ಕೊಳಗಾದವರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.