ಉಕ್ರೇನ್ ರಷ್ಯಾ ಬಿಕ್ಕಟ್ಟು, ಚೀನಾ ಲಾಕ್‌ಡೌನ್‌: ಭಾರತದಲ್ಲಿ ಟಿವಿ ಬೆಲೆ ಏರಿಕೆ ಸಾಧ್ಯತೆ

By Suvarna News  |  First Published Apr 15, 2022, 9:58 AM IST

ಟಿವಿ ಬೆಲೆಗಳು 10 ಪ್ರತಿಶತಷ್ಟು ಏರಿಕೆಯಾಗಬಹುದು  ಮತ್ತು ಬದಲಾವಣೆಯು ಈ ತಿಂಗಳ ಆರಂಭದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ


ನವದೆಹಲಿ (ಏ. 15): ಭಾರತದಲ್ಲಿ ಟಿವಿ ಸೆಟ್‌ಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ.  ಚಾಲ್ತಿಯಲ್ಲಿರುವ ವೆಚ್ಚ ಮತ್ತು ಪೂರೈಕೆ ನಿರ್ಬಂಧಗಳನ್ನು ಪೂರೈಸಲು ಸಾಧನಗಳ ಬೆಲೆಗಳನ್ನು ಹೆಚ್ಚಿಸಲು ಟಿವಿ ತಯಾರಕ ಕಂಪನಿಗಳು ಸಿದ್ಧತೆ ನಡೆಸಿವೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಮತ್ತು ಚೀನಾದಲ್ಲಿನ ಕಠಿಣ ಲಾಕ್‌ಡೌನ್‌ಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮುಂಬರುವ ದಿನಗಳಲ್ಲಿ ಕಂಪನಿಗಳು ತಮ್ಮ ಟಿವಿಗಳ ಬೆಲೆಯನ್ನು ಹೆಚ್ಚಿಸಲಿವೆ ಎಂದು ವರದಿಗಳು ತಿಳಿಸಿವೆ. 

ಸಪ್ಲೈ ಚೈನ್ ನಿರ್ಬಂಧಗಳಿಂದಾಗಿ ಕಂಪನಿಗಳು ತಮ್ಮ ಕಚ್ಚಾ ಸಾಮಗ್ರಿಗಳ ಸಮರ್ಪಕ ಪೂರೈಕೆಗಳನ್ನು ಪಡೆಯುವುದನ್ನು ಕಠಿಣವಾಗುತ್ತದೆ. ಹೀಗಾಗಿ ಅಂತಿಮವಾಗಿ ಬೆಲೆ ಏರಿಸಿ ಗ್ರಾಹಕರ ಮೇಲೆ ಕಂಪನಿಗಳು ತಮ್ಮ ಹೊರೆಯನ್ನು ವರ್ಗಾಯಿಸುತ್ತವೆ. ‌ಉಕ್ರೇನ್ ಮತ್ತು ರಷ್ಯಾ ನಡುವಿನ ಸುಮಾರು ಎರಡು ತಿಂಗಳ ಸುದೀರ್ಘ ಸಂಘರ್ಷವು ಜಗತ್ತಿನಾದ್ಯಂತ ಎಲೆಕ್ಟ್ರಾನಿಕ್ಸ್ ಕಂಪನಿಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. 

Tap to resize

Latest Videos

ಭಾರತದಲ್ಲಿನ ಟಿವಿ ತಯಾರಕರ ಮೇಲೂ ಇದು ಪರಿಣಾಮ ಬೀಳಲಿದೆ.  ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಪ್ರವೇಶ ಮಟ್ಟದ ಮತ್ತು ಬಜೆಟ್ ಮಾದರಿಗಳ ಮೂಲಕ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸುತ್ತಾರೆ, ಅಲ್ಲದೇ ಇದರಲ್ಲಿ ಕಡಿಮೆ ಮಾರ್ಜಿನ್‌ ಇರುತ್ತದೆ. ಹೀಗಾಗಿ ಬೆಲೆ ಏರಿಸದಿದ್ದರೆ ಕಂಪನಿಗಳು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗಲಿದೆ ಕೈಗೆಟುಕುವ ಬೆಲೆಯ ಒನ್‌ಪ್ಲಸ್ 4K ಸ್ಮಾರ್ಟ್ ಟಿವಿ

ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಜೊತೆಗೆ, ಚೀನಾದಲ್ಲಿ ಕೋವಿಡ್‌ 19 ಲಾಕ್‌ಡೌನ್‌ಗಳಿಂದಾಗಿ ಕಂಪನಿಗಳು ತಮ್ಮ ಸಾಮಗ್ರಿಗಳ ಪೂರೈಕೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿವೆ. ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ತಯಾರಕರು ತಮ್ಮ ಸಾಗಣೆಗೆ ಹೆಚ್ಚಿನ ಹಣವನ್ನು ಪಾವತಿಸಲು ಪ್ರಾರಂಭಿಸಿದ್ದಾರೆ.

5-10 ಪ್ರತಿಶತ ದರ ಏರಿಕೆ: "ವಿವಿಧ ಕಚ್ಚಾ ಸಾಮಗ್ರಿಗಳು, ಸೇವೆಗಳು ಮತ್ತು ಅಂತಿಮ ಉತ್ಪನ್ನಗಳ ಬೆಲೆಗಳು ಕನಿಷ್ಠ 5-10 ಪ್ರತಿಶತದಷ್ಟು ಏರಿಕೆಯನ್ನು ಕಾಣುತ್ತವೆ" ಎಂದು ಸೂಪರ್ ಪ್ಲಾಸ್ಟ್ರೋನಿಕ್ಸ್ (SPPL) CEO ಅವನೀತ್ ಸಿಂಗ್ ಮರ್ವಾ ಉಲ್ಲೇಖಸಿ ಗ್ಯಾಜೆಟ್‌ 360 ವರದಿ ಮಾಡಿದೆ.  

ಚೀನಾದಲ್ಲಿನ ಲಾಕ್‌ಡೌನ್‌ನಿಂದಾಗಿ ಹಡಗುಗಳು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಲು ಕಾರಣವಾಗಿವೆ ಮತ್ತು ಅವೆಲ್ಲವೂ 100 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಇದು ಸಾಗಣೆಯಲ್ಲಿ ಹೆಚ್ಚಿನ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಅವನೀತ್  ಹೇಳಿದ್ದಾರೆ. ಅಲ್ಲದೇ ಇದರಿಂದ ಗ್ರಾಹಕರಿಗೆ ಖಂಡಿತಾ ತೊಂದರೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಬೆಲೆ ಏರಿಕೆಯ ನಿಖರವಾದ ಶೇಕಡಾವಾರು ಪ್ರಮಾಣವನ್ನು ಇನ್ನೂ ಅಂದಾಜಿಸಬೇಕಾಗಿದೆ. ಆದರೆ, ಈ ತಿಂಗಳಿನಿಂದಲೇ ಬೆಲೆ ಏರಿಕೆ ಜಾರಿಗೆ ಬರಬಹುದು ಎಂದು ಮಾರ್ವಾ ಸೂಚಿಸಿದ್ದಾರೆ.

ರಷ್ಯಾ ಉಕ್ರೇನ್‌ ಯುದ್ಧ ಪರಿಣಾಮ: ಎಸ್‌ಪಿಪಿಎಲ್‌ನಂತೆಯೇ, ಬೆಂಗಳೂರು ಮೂಲದ ಇಂದ್‌ಕಲ್ ಟೆಕ್ನಾಲಜೀಸ್, ಭಾರತದಲ್ಲಿ ಏಸರ್ ಟಿವಿಗಳ ಬ್ರ್ಯಾಂಡ್ ಪರವಾನಗಿದಾರ ಕಂಪನಿ ಕೆಲವು ಸಮಯದಿಂದ ಪೂರೈಕೆ ಸರಪಳಿ ಸಮಸ್ಯೆಗಳನ್ನು ಎದುರಿಸುತ್ತಿದೆ.

"ರಷ್ಯಾ-ಉಕ್ರೇನ್ ಯುದ್ಧವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ಏಕೆಂದರೆ ಈ ಎರಡೂ ದೇಶಗಳು ಚಿಪ್‌ಗಳನ್ನು ತಯಾರಿಸಲು ಕಚ್ಚಾ ವಸ್ತುಗಳಾಗಿ ಬಳಸಲಾಗುವ ಕೆಲವು ಪ್ರಮುಖ ಖನಿಜಗಳ ಅತಿದೊಡ್ಡ ಉತ್ಪಾದಕರಾಗಿದ್ದು, ಅವುಗಳು ಈಗಾಗಲೇ ಕೊರತೆಯಲ್ಲಿವೆ" ಎಂದು ಇಂದ್ಕಲ್ ಟೆಕ್ನಾಲಜೀಸ್‌ನ ಸಿಇಒ ಆನಂದ್ ದುಬೆ ಹೇಳಿದ್ದಾರೆ. 

ಇದನ್ನೂ ಓದಿ: Realme Smart TV X: ಏಪ್ರಿಲ್ ಅಂತ್ಯದಲ್ಲಿ ಭಾರತದಲ್ಲಿ 43 inch Full-HD ಸ್ಮಾರ್ಟ್‌ ಟಿವಿ ಬಿಡುಗಡೆ!

ಈ ಸಂಘರ್ಷವು ವಿಸ್ತರಿಸಿದರೆ, ಇದು ಘಟಕಗಳ ಬೆಲೆಗಳಲ್ಲಿ ದೊಡ್ಡ ಏರಿಕೆಗೆ ಕಾರಣವಾಗಬಹುದು ಮತ್ತು ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆಗಳಲ್ಲಿ ಬಹಳ ದೊಡ್ಡ ಸಂಚಿತ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅವರು ಊಹಿಸಿದ್ದಾರೆ.

ಲಾಕ್‌ಡೌನ್‌ ವೇಳೆ ಏರಿಕೆ: ಕಳೆದೆರಡು ವರ್ಷಗಳಲ್ಲಿ ಟಿವಿ ಮಾರುಕಟ್ಟೆಯು ಬೆಲೆ ಏರಿಕೆಯನ್ನು ನಿರೀಕ್ಷಿಸುತ್ತಿರುವುದು ಇದು ಮೊದಲ ಬಾರಿಗೆ ಅಲ್ಲ. ಶಾಓಮಿ, ಸ್ಯಾಮಸಂಗ್, ಎಲ್‌ಜಿ ಮತ್ತು ರಿಯಲ್‌ಮಿ ಸೇರಿದಂತೆ ಕಂಪನಿಗಳು ಕಳೆದ ವರ್ಷ ಎಲ್ಲಾ ವಿಭಾಗಗಳಲ್ಲಿ ತಮ್ಮ ಟಿವಿ ಸೆಟ್‌ಗಳ ಬೆಲೆಗಳನ್ನು ಸುಮಾರು 10 ಪ್ರತಿಶತದಷ್ಟು ಹೆಚ್ಚಿಸಿವೆ.  ಜಗತ್ತಿನಾದ್ಯಂತ ಕರೋನವೈರಸ್ ಲಾಕ್‌ಡೌನ್‌ ಈ ಬೆಲೆ ಏರಿಕೆಗೆ ಕಾರಣವಾಗಿತ್ತು. 

ಟಿವಿ ಮಾರಾಟದ ಮೇಲೆ ಪರಿಣಾಮ:  ಈ ಮಧ್ಯೆ ಈ ಬಾರಿ  ಟಿವಿ ಬೆಲೆಗಳಲ್ಲಿ ದೊಡ್ಡ ಹೆಚ್ಚಳವಾಗುವುದಿಲ್ಲ ಎಂದು ಹಾಂಗ್ ಕಾಂಗ್ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್‌ನ ಹಿರಿಯ ವಿಶ್ಲೇಷಕ ಅಂಶಿಕಾ ಜೈನ್ ಹೇಳಿದ್ದಾರೆ.

"ಭಾರತವು ಬೆಲೆ-ಸೂಕ್ಷ್ಮ ಮಾರುಕಟ್ಟೆಯಾಗಿದೆ ಮತ್ತು ಪ್ರಸ್ತುತ ಮಾರುಕಟ್ಟೆಯು ಕೆಳಮಟ್ಟದಲ್ಲಿದೆ, ಟಿವಿಯ ಬೆಲೆಯಲ್ಲಿನ ಹೆಚ್ಚಳದಿಂದಾಗಿ ಮುಂಬರುವ ತಿಂಗಳುಗಳಲ್ಲಿ ಟಿವಿ ಮಾರಾಟದ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು" ಎಂದು ಅವರು ತಿಳಿಸಿದ್ದಾರೆ.

ಟಿವಿಯ ಕಚ್ಚಾ ವಸ್ತುಗಳ ಬೆಲೆಗಳಲ್ಲಿ ಜಾಗತಿಕ ಹೆಚ್ಚಳದಿಂದಾಗಿ  ಭವಿಷ್ಯದಲ್ಲಿ  ಟಿವಿ ಬೆಲೆಗಳನ್ನು ಹೆಚ್ಚಿಸಲು ತಯಾರರು ಮುಂದಾಗಬಹುದು ಎಂದು ವಿಶ್ಲೇಷಕರು ನಿರೀಕ್ಷಿಸುತ್ತಾರೆ. ಭಾರತದಲ್ಲಿ ಟಿವಿ ಸಾಗಣೆಗಳು 2021 ರಲ್ಲಿ ವರ್ಷದಿಂದ ವರ್ಷಕ್ಕೆ 24 ಪ್ರತಿಶತದಷ್ಟು ಬೆಳೆವಣಿಗೆ ಕಂಡಿದ್ದುಕೌಂಟರ್‌ಪಾಯಿಂಟ್ ಪ್ರಕಾರ, ಸ್ಮಾರ್ಟ್ ಟಿವಿ ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ 55 ಪ್ರತಿಶತದಷ್ಟು ವೇಗವಾಗಿ ಬೆಳೆದಿದೆ

ದೇಶದಲ್ಲಿ ಮಾರಾಟವಾಗುವ ಹೆಚ್ಚಿನ ಟಿವಿಗಳು ಬಜೆಟ್ ವಿಭಾಗದಲ್ಲಿವೆ ಎಂದು ಜೈನ್ ತಿಳಿಸಿದ್ದಾರೆ. ಇದರರ್ಥ ಟಿವಿ ಬೆಲೆಗಳಲ್ಲಿ ಒಟ್ಟಾರೆಯಾಗಿ ಹೆಚ್ಚಿನ ಏರಿಕೆಯಾಗುವುದಿಲ್ಲ, ತಯಾರಕರ ಕಡೆಯಿಂದ ಸ್ವಲ್ಪ ಹೆಚ್ಚಳವು ಕಡಿಮೆ-ಆದಾಯದ ಗ್ರಾಹಕರ ಮೇಲೆ ಪ್ರಮುಖ ಪರಿಣಾಮ ಬೀರಬಹುದು.

click me!