ನರಗುಂದ: ಪ್ರವಾಹ ರಭಸಕ್ಕೆ ಕಿತ್ತುಹೋದ ರಸ್ತೆಗಳು

By Web DeskFirst Published Oct 25, 2019, 9:52 AM IST
Highlights

ರೋಣ, ಗದಗ, ಬನಹಟ್ಟಿ ಗ್ರಾಮಕ್ಕೆ ತೆರಳುವ ರಸ್ತೆಗಳಿಗೆ ತೀವ್ರ ಹಾನಿ|ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಸಂಪೂರ್ಣ ಬಂದ್‌| 
 

ನರಗುಂದ[ಅ.25]: ಮಲಪ್ರಭಾ ಜಲಾಶಯದಿಂದ ಭಾನುವಾರ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ತಾಲೂಕಿನ ಕೊಣ್ಣೂರ ಗ್ರಾಮದ ಪಕ್ಕದ ಸೇತುವೆ ಬಳಿ ತಾತ್ಕಾಲಿಕ ರಸ್ತೆ ಪ್ರವಾಹ ರಭಸಕ್ಕೆ ಕಿತ್ತು ಹೋಗಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಸಂಪೂರ್ಣ ಬಂದ್‌ ಆಗಿವೆ.

ಅದೇ ರೀತಿ ರೋಣಕ್ಕೆ ಮತ್ತು ಗದಗ ಒಳ ರಸ್ತೆ, ತಾಲೂಕಿನ ಬನಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಗಳು ಕಳೆದ ಎರಡು ಮೂರ ದಿನಗಳಿಂದ ಭಾರೀ ಮಳೆಗೆ ಹಾನಿಗೊಂಡಿವೆ. ಸದ್ಯ ಈ ಭಾಗದಲ್ಲಿ ವಾಹನಗಳು ಸಂಚಾರ ಮಾಡಲು ಬರದಿದ್ದರಿಂದ ಸಂಪರ್ಕ ಕಳೆದುಕೊಂಡು ಗ್ರಾಮಗಳ ಮತ್ತು ತಾಲೂಕುಗಳಿಗೆ ಜನತೆ ಹೋಗಲು ಪರದಾಟ ಮಾಡುವ ಸ್ಥಿತಿ ಬಂದಿದೆ. ಅದೇ ರೀತಿ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಹೋಗುವ ಜನತೆ ನವಲಗುಂದ ಮಾರ್ಗವಾಗಿ ರೋಣಕ್ಕೆ ಹೋಗಿ ವಿಜಯಪುರಕ್ಕೆ ಹೋಗುತ್ತಿದ್ದಾರೆ. ಇನ್ನು ಬನಹಟ್ಟಿ ಹಾಗೂ ಲಖಮಾಪುರ, ಶಿರೋಳ, ಕಪ್ಪಲಿ, ಕಲ್ಲಾಪುರ ಗ್ರಾಮಗಳ ರಸ್ತೆಗಳು ಪ್ರವಾಹಕ್ಕೆ ಕಿತ್ತು ಹೋಗಿದ್ದರಿಂದ ನಡೆದುಕೊಂಡು ತಮ್ಮ ಗ್ರಾಮಗಳಗೆ ಹೋಗುವ ಪರಿಸ್ಥಿತಿ ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕಿನ ಮಲಪ್ರಭಾ ನದಿ ಹಾಗೂ ಬೆಣ್ಣಿ ಹಳ್ಳ ಪ್ರವಾಹ ಬಂದು ಹಲವಾರು ಗ್ರಾಮಗಳು ಜಲಾವೃತಗೊಂಡು ಕೆಲವು ಕಡೆ ಮನೆಗಳು ಕುಸಿದು ಬೀಳುತ್ತಿವೆ. ನೀರು ಹೊಕ್ಕು ಹೋದ ಮನೆಗಳನ್ನು ಎರಡು ದಿನಗಳಿಂದ ಸಂತ್ರಸ್ತರು ಸ್ವಚ್ಛ ಮಾಡುತ್ತಿದ್ದಾರೆ. ಅದೇ ರೀತಿ ಕೆಲವು ಗ್ರಾಮಗಳಲ್ಲಿ ಹಳ್ಳದ ನೀರು ಹೊಕ್ಕು ಜನತೆ ಸಂಗ್ರಹಿಸದ ದವಸ ಧಾನ್ಯಗಳು ಹಾನಿಗೊಂಡಿದ್ದರಿಂದ ತುತ್ತ ಅನ್ನಕ್ಕಾಗಿ ಸಂತ್ರಸ್ತರು ಪರದಾಟ ಮಾಡಬೇಕಾದ ಸ್ಥಿತಿ ಬಂದಿದೆ.

ಈ ಹಿಂದೆ ನದಿಗೆ ಹಾಗೂ ಬೆಣ್ಣಿ ಹಳ್ಳಕ್ಕೆ ಪ್ರವಾಹ ಬಂದು ಈ ಭಾಗದ ಹಲವಾರು ಗ್ರಾಮಗಳ ರೈತರು ಬಿತ್ತನೆ ಮಾಡಿದ ಬೆಳೆಗಳನ್ನು ಹಾನಿ ಮಾಡಿಕೊಂಡಿದ್ದರು. ನಂತರ ದಿನಗಳಲ್ಲಿ ಜಮೀನುಗಳನ್ನು ಸ್ವಚ್ಛ ಮಾಡಿ ಹಿಂಗಾರು ಹಂಗಾಮಿನಲ್ಲಿ ಗೋವಿನ ಜೋಳ, ಸೂರ್ಯಕಾಂತಿ, ಗೋದಿ, ಕಡಲೆ, ಜೋಳಗಳನ್ನು ಬಿತ್ತನೆ ಮಾಡಿದ್ದರು. ಆದರೆ ಕಳೆದ ಎರಡು ದಿನಗಳಿಂದ ನದಿಗೆ ಮತ್ತು ಹಳ್ಳಕ್ಕೆ ಪ್ರವಾಹ ಬಂದು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತರ ಎಲ್ಲ ಬೆಳೆಗಳು ಹಾನಿಗೊಂಡಿದ್ದರಿಂದ ಈ ಭಾಗದ ರೈತ ಮತ್ತಷ್ಟುಸಂಕಷ್ಟಕ್ಕೆ ಸಿಲುಕಿದ್ದಾನೆ.

ಈ ಬಗ್ಗೆ ಮಾತನಾಡಿದ ತಹಸೀಲ್ದಾರ್‌ ಯಲ್ಲಪ್ಪ ಗೋಣ್ಣಣವರ ಅವರು, ನರಗುಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಮಲಪ್ರಭಾ ನದಿ ಮತ್ತು ಬೆಣ್ಣಿಹಳ್ಳಕ್ಕೆ ಪ್ರವಾಹ ಬಂದು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿತ್ತು ಹೋಗಿವೆ, ಈ ರಸ್ತೆಗಳನ್ನು ಮಳೆಯ ವಾತಾವರಣ ನೋಡಿಕೊಂಡು ಬೇಗ ತಾತ್ಕಾಲಿಕವಾಗಿ ಸರಿಪಡಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದು ಹೇಳಿದ್ದಾರೆ.
 

click me!