ನರಗುಂದ ಜನತೆಗೆ ಭೀತಿ ಹುಟ್ಟಿಸಿದ ಭೂಕುಸಿತ| ಪಟ್ಟಣದ ಹಲವು ಕಡೆ ಮನೆಯೊಳಗೂ ಭೂಕುಸಿತದಿಂದ ಕಾಡುತ್ತಿರುವ ಭಯ| ಪಟ್ಟಣದ ಕಸಬಾ, ದಂಡಾಪೂರ, ಸೇರಿದಂತೆ ವಿವಿಧ ಕಡೆ 1 ತಿಂಗಳಿಂದ ಪದೇ ಪದೇ ಭೂಕುಸಿತ| ರಾತ್ರಿ ಮನೆಯಲ್ಲಿ ಮಲಗಿ ನಿದ್ರೆ ಮಾಡಲು ಭಯ|
ಎಸ್.ಜಿ. ತೆಗ್ಗಿನಮನಿ
ನರಗುಂದ[ಅ.30]: ಕಳೆದ ಮೂರು ತಿಂಗಳಿಂದ ಅತಿಯಾದ ಮಳೆಯ ಕಾರಣ ಪಟ್ಟಣದ ಹಲವಾರು ಬಡಾವಣೆಗಳಲ್ಲಿ ಭೂ ಕುಸಿತ ಸಂಭವಿಸುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಇದ್ದಕ್ಕಿದ್ದಂತೆ ಪಟ್ಟಣದ ಹಲವು ಕಡೆ ಭೂಕುಸಿತವಾಗುತ್ತಿರುವುದು ಜನರಲ್ಲಿ ಮುಂದೇನಾಗುವುದೋ ಎಂಬ ಭೀತಿ ಹುಟ್ಟಿಸಿದೆ.
undefined
ಪಟ್ಟಣದ ಕಸಬಾ ಓಣಿಯ ಡಿ.ಬಿ. ಪಾಟೀಲರ ಮನೆಯಲ್ಲಿ ರಾತ್ರಿ ನಿದ್ರೆಗೆ ಜಾರಿದಾಗಲೇ ದಿಢೀರ್ ಭೂ ಕುಸಿತ ಸಂಭವಿಸಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೂಕುಸಿತ ಸಪ್ಪಳ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಡಿ.ಬಿ. ಪಾಟೀಲರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಅದೇ ರೀತಿ ಭಾನುವಾರ ವಕೀಲ ವಿಶ್ವನಾಥ ದೇಶಪಾಂಡೆಯವರ ಮನೆಯ ಹಿತ್ತಲಲ್ಲಿ, ಅವರ ತಂದೆ ರತ್ನಾಕರ ದೇಶಪಾಂಡೆ ಹೂವು ಕೀಳುತ್ತಿದ್ದಾಗಲೇ ಅದೇ ಜಾಗ ಕುಸಿದು ಅವರು ಗುಂಡಿಯೊಳಗೆ ಸಿಲುಕಿದ್ದರು. ತಕ್ಷಣವೇ ಅಕ್ಕ ಪಕ್ಕದ ಜನತೆ ಹಗ್ಗದ ಹಾಗೂ ಏಣಿಯ ಸಹಾಯದಿಂದ ಅವರನ್ನು ಮೇಲೆಳೆದುಕೊಂಡು ರಕ್ಷಣೆ ಮಾಡಿದ ಘಟನೆ ಜರುಗಿದೆ.
ಜನತೆ ಆತಂಕದಲ್ಲಿ:
ಪಟ್ಟಣದ ಕಸಬಾ, ದಂಡಾಪೂರ, ಸೇರಿದಂತೆ ವಿವಿಧ ಕಡೆ 1 ತಿಂಗಳಿಂದ ಪದೇ ಪದೇ ಭೂಕುಸಿತ ಆಗುತ್ತಿದ್ದರಿಂದ ಇಲ್ಲಿನ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ. ಅದೇ ರೀತಿ ರಾತ್ರಿ ಮನೆಯಲ್ಲಿ ಮಲಗಿ ನಿದ್ರೆ ಮಾಡಲು ಭಯ ಪಡುತ್ತಿದ್ದಾರೆ.
ಸಚಿವರ ಭೇಟಿ:
ಇತ್ತೀಚೆಗೆ ಪಟ್ಟಣದ ನಿವಾಸಿ ದೇಶಪಾಂಡೆ ಅವರ ಹಿತ್ತಲದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಪರಿಸರ ಖಾತೆ ಸಚಿವ ಸಿ.ಸಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ಕಸಬಾ ಹಾಗೂ ಇನ್ನಿತರ ಪ್ರದೇಶದಲ್ಲಿ ಅಂತರ್ಜಲದಿಂದ ಭೂ ಕುಸಿತವಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ತಜ್ಞರ ತಂಡ ಕರೆಸಿ ಇದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ಸೂಚಿಸಿದರು.
ಪಟ್ಟಣದ ಅನೇಕ ಕಡೆ ಕಳೆದ 1 ತಿಂಗಳಿಂದ ಸಾರ್ವಜನಿಕರು ಮನೆ ಮತ್ತು ಹಿತ್ತಲಗಳಲ್ಲಿ ಭೂಕುಸಿತ ಹೆಚ್ಚಾಗಿದ್ದರಿಂದ ಪಟ್ಟಣದ ಜನತೆ ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಭೂ ವಿಜ್ಞಾನ ತಜ್ಞರನ್ನು ಕರೆಯಿಸಿ ಏಕೆ ಭೂಕುಸಿತ ಆಗುತ್ತದೆ ಎಂದು ಅಧ್ಯಯನ ಮಾಡಿಸಿ ಮುಂದಿನ ದಿನಗಳಲ್ಲಿ ಈ ರೀತಿ ಭೂಕುಸಿತ ಆಗದ ಹಾಗೆ ನೋಡಿಕೊಳ್ಳಬೇಕೆಂದು ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಆಗ್ರಹ ಮಾಡಿದರು.
ಹಿಂದೆ ಸಹ ಭೂಕುಸಿತ:
ಈ ಹಿಂದೆ 2007 ಹಾಗೂ 2009ನೇ ಸಾಲಿನಲ್ಲಿ ತಾಲೂಕಿನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಅಂದಿನ ಸಮಯದಲ್ಲಿ ಇದೇ ರೀತಿ ಪಟ್ಟಣದಲ್ಲಿ ಹಲವಾರು ಕಡೆ ಭೂಕುಸಿತವಾಗಿದ್ದರಿಂದ ಅಂದು ಸಚಿವರಾಗಿದ್ದ ಸಿ.ಸಿ. ಪಾಟೀಲರು ಭೂ ವಿಜ್ಞಾನಿಗಳಿಂದ ಅಧ್ಯಯನ ಮಾಡಿಸಿದ್ದರು. ಆಗ ಶೋಧ ನಡೆಸಿದ್ದ ವಿಜ್ಞಾನಿಗಳು, ಅತಿಯಾದ ಮಳೆಯಾಗಿ ಅಂತರ್ಜಲ ಹೆಚ್ಚಾಗುವುದರಿಂದ ಭೂಕುಸಿತವಾಗುತ್ತದೆ ಎಂದು ಹೇಳಿದ್ದರು.
ನಂತರ ಕಳೆದ ನಾಲ್ಕು-ಐದು ವರ್ಷದಿಂದ ತಾಲೂಕಿನಲ್ಲಿ ಭೀಕರ ಬರಗಾಲ ಬಿದ್ದಿರುವುದರಿಂದ ಪಟ್ಟಣದಲ್ಲಿ ಯಾವುದೇ ರೀತಿ ಭೂಕುಸಿತ ಕಂಡು ಬಂದಿರಲಿಲ್ಲ. ಆದರೆ ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿಂದ ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ಕಸಬಾ, ದಂಡಾಪೂರ, ದೇಸಾಯಿ ಬಾವಿ ಓಣಿ ಸೇರಿದಂತೆ ಮುಂತಾದ ಕಡೆ ಕಳೆದ 1 ತಿಂಗಳಿಂದ ಭೂಕುಸಿತ ಆಗುತ್ತಿರುವುದರಿಂದ ಪಟ್ಟಣದ ಜನತೆಗೆ ಏನೂ ತಿಳಿಯದಾಗಿದೆ.
ಈ ಬಗ್ಗೆ ಮಾತನಾಡಿದ ನರಗುಂದ ಪುರಸಭೆ ಸಹಾಯಕ ಎಂಜಿನಿಯರ್ ಬಿ.ಎ. ನದಾಫ್ ಅವರು, ಕಳೆದ 1 ತಿಂಗಳಿಂದ ಪಟ್ಟಣದಲ್ಲಿ ಹಲವಾರು ಕಡೆ ಭೂಕುಸಿತ ಸಂಭವಿಸುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ತಜ್ಞರನ್ನು ಕರೆಯಿಸಿ ಈ ರೀತಿ ಭೂಕುಸಿತ ಆಗುವುದಕ್ಕೆ ಕಾರಣ ತಿಳಿದುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.