ಗಜೇಂದ್ರಗಡ: ಗದಗ, ರೋಣ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

By Web DeskFirst Published Oct 26, 2019, 7:17 AM IST
Highlights

ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ| ಕೇಂದ್ರ, ರಾಜ್ಯ ಸರ್ಕಾರ ತಕ್ಷಣವೇ ರಸ್ತೆ ದುರಸ್ತಿಗೆ ಮುಂದಾಗಬೇಕು| ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿನ ರಸ್ತೆಗಳು ಅತ್ಯಂತ ಕೆಟ್ಟಸ್ಥಿತಿಗೆ ಬಂದು ತಲುಪಿವೆ|

ಗಜೇಂದ್ರಗಡ(ಅ.26): ಪಟ್ಟಣದಿಂದ ಗದಗ, ರೋಣ ಹಾಗೂ ಇಳಕಲ್‌ ಮಾರ್ಗದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರು.

ಸಂಘಟನೆ ತಾಲೂಕಾಧ್ಯಕ್ಷ ಭೀಮಣ್ಣ ಇಂಗಳೆ ಮಾತನಾಡಿ, ಜಿಲ್ಲೆಯನ್ನು ಹೊರತು ಪಡಿಸಿದರೆ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಗಜೇಂದ್ರಗಡ ಪಟ್ಟಣ ವಾಣಿಜ್ಯ ನಗರಿ ಎಂದು ಪ್ರಖ್ಯಾತಿ ಪಡೆದಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿನ ರಸ್ತೆಗಳು ಅತ್ಯಂತ ಕೆಟ್ಟಸ್ಥಿತಿಗೆ ಬಂದು ತಲುಪಿವೆ. ಪರಿಣಾಮ ಅರ್ಧ ತಾಸಿನ ದಾರಿ ಕ್ರಮಿಸಲು ಒಂದು ತಾಸು ಪ್ರಯಾಣ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ ಎಂದು ಬಿಜೆಪಿ ನಾಯಕರು ಬೊಬ್ಬೆಹೊಡೆದಿದ್ದರು. ಆದರೆ ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದರೂ ಸಹ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆಯಾ ಅಥವಾ ತೆಗ್ಗು ಗುಂಡಿಗಳಲ್ಲಿ ರಸ್ತೆಯನ್ನು ಮಾಡಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಹೀಗಾಗಿ ಸಂಬಂಧಪಟ್ಟಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಟೆಂಪೋ ಚಾಲಕರ ಹಾಗೂ ಮಾಲೀಕರ ಸಂಘದ ಪ್ರಭು ಚವಡಿ ಮಾತನಾಡಿ, ಪಟ್ಟಣದಿಂದ ಜಿಲ್ಲೆ ಹಾಗೂ ನೆರೆಯ ತಾಲೂಕು ಕೇಂದ್ರಗಳಿಗೆ ಸಂಪರ್ಕಿಸುವ ರಸ್ತೆಗಳು, ರಾಜ್ಯ ಹೆದ್ದಾರಿಗಳು ಹಾಳಾಗಿವೆ. ಪರಿಣಾಮ ತುರ್ತು ಚಿಕಿತ್ಸೆಗಾಗಿ ಈ ಮೂಲಕ ರೋಗಿಗಳನ್ನು ಕರೆದುಕೊಂಡು ಹೋದರೆ ಅಂತಹ ರೋಗಿಗಳು ಸಕಾಲದಲ್ಲಿ ಆಸ್ಪತ್ರೆ ತಲುಪುವ ಬದಲು ಸ್ಮಶಾನ ತಲುಪುತ್ತಿದ್ದಾರೆ. ಹೀಗಾಗಿ ಸಂಬಂಧಿಸಿದವರು ಇನ್ನಾದರೂ ರಸ್ತೆಗಳ ದುರಸ್ತಿಗೆ ಮುಂದಾಗಬೇಕು ಎಂದರು.
ಸಂಘಟನೆ ಕಾರ್ಯದರ್ಶಿ ಕಳಕಪ್ಪ ಪೋತಾ ಮಾತನಾಡಿ, ಪಟ್ಟಣದಿಂದ ಸುತ್ತಲಿನ ನಗರಗಳಿಗೆ ಸಂಪರ್ಕಿಸುವ ರಸ್ತೆಗಳನ್ನು 15 ದಿನಗಳ ಒಳಗೆ ಲೋಕೋಪಯೋಗಿ ಇಲಾಖೆ ರಸ್ತೆಗಳ ದುರಸ್ತಿಗೆ ಮುಂದಾಗದಿದ್ದರೆ ಇಲಾಖೆಗೆ ಬೀಗ ಹಾಕಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಅಭಿಯಂತರ ಪಿ.ಎಚ್‌. ಕೋತಬಾಳ ಸಂಘಟನೆಯ ಕಾರ್ಯಕರ್ತರಿಂದ ಮನವಿ ಸ್ವೀಕರಿಸಿ ಶೀಘ್ರದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಲಾಗುವುದು ಎಂದು ಭರವಸೆ ನೀಡಿದರು.

ಜಗದೀಶ ಮಡಿವಾಳರ, ಶರಣಪ್ಪ ಚವ್ಹಾಣ, ಮಾರುತಿ ಬಿಂಗಿ, ಫಕೀರಪ್ಪ ಸೋಂಪುರ, ಆನಂದ ಸವಣೂರ, ಮುತ್ತು ಮಾಳೋತ್ತರ, ಹನಮಂತ ರಾಮಜಿ, ಮಂಜುನಾಥ ಚಂದುಕರ, ಷಣ್ಮುಖ ಕಾತರಕಿ ಸೇರಿ ಇತರರು ಇದ್ದರು.
 

click me!