ಗಜೇಂದ್ರಗಡ: ಅಂತರ್ಜಾತಿ ವಿವಾಹಕ್ಕೆ ದಂಪತಿ ಬರ್ಬರ ಕೊಲೆ

Published : Nov 07, 2019, 08:58 AM IST
ಗಜೇಂದ್ರಗಡ: ಅಂತರ್ಜಾತಿ ವಿವಾಹಕ್ಕೆ ದಂಪತಿ ಬರ್ಬರ ಕೊಲೆ

ಸಾರಾಂಶ

ಅಂತರ್ಜಾತಿ ವಿವಾಹ|ಲಕ್ಕಲಕಟ್ಟಿಯಲ್ಲಿ ದಂಪತಿ ಕೊಲೆ| ಯುವತಿ, ಆಕೆಯ ಗಂಡನ ಕೊಂದು ಹಾಕಿದ ಸಹೋದರರು|ಈ ಘಟನೆ ಮರಾಠಿಯ ಜನಪ್ರಿಯ ಸೈರಾಟ್ ಸಿನಿಮಾ ಕಥೆಯಂತಿದೆ| ರಮೇಶ ಮಾದರ್ ಹಾಗೂ ಗಂಗಮ್ಮ ರಾಠೋಡ್ ಪರಸ್ಪರ 4 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು| ಅನಾಥವಾದ ಇಬ್ಬರು ಮಕ್ಕಳು|

ಗದಗ[ನ.7]: ಜಾತಿಯ ಭೂತ ಇನ್ನೂ ನಮ್ಮೆಲ್ಲರ ಮಧ್ಯೆ ಎಷ್ಟೊಂದು ವಿಕಾರವಾಗಿದೆ, ಅದರಲ್ಲೂ ಅಂತರ್ಜಾತಿಯ ವಿವಾಹವನ್ನು ಪ್ರತಿಷ್ಠೆಯಾಗಿ ಸ್ವೀಕರಿಸುವವರು ಎಂಥಹೇಯ ಕೃತ್ಯ ಮಾಡಲೂ ಹೇಸುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಎನ್ನುವಂತೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಬುಧವಾರ ಪ್ರೀತಿಸಿ ವಿವಾಹವಾದ ದಂಪತಿ ಕೊಲೆ ನಡೆದಿದೆ.

ಈ ಘಟನೆ ಮರಾಠಿಯ ಜನಪ್ರಿಯ ಸೈರಾಟ್ ಸಿನಿಮಾ ಕಥೆಯಂತಿದೆ. ಇದೇ ಗ್ರಾಮದ ನಿವಾಸಿಯಾದ ರಮೇಶ ಮಾದರ್ (29) ಹಾಗೂ ಗಂಗಮ್ಮ ರಾಠೋಡ್ (23) ಪರಸ್ಪರ 4 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಹಾಗೆ ವಿವಾಹವಾಗಿದ್ದ ದುರ್ದೈವಿಗಳೇ ಬುಧವಾರ ಕೊಲೆಯಾಗಿರುವುದು. ಇವರಿಬ್ಬರ ಅಂತರ್ಜಾತಿ ವಿವಾಹ ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿಂದೆ ವಿವಾಹವಾದ ಸಂದರ್ಭದಲ್ಲಿಯೇ ಸಾಕಷ್ಟು ಜಗಳಗಳಾಗಿ ಊರ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿಗಳು ನಡೆದಿದ್ದವು. ಕೆಲ ತಿಂಗಳುಗಳ ಕಾಲ ದೂರದ ಶಿವಮೊಗ್ಗದಲ್ಲಿ ಜೀವನ ಸಾಗಿಸಿದ ಬಳಿಕ ಲಕ್ಕಲಕಟ್ಟಿ ಗ್ರಾಮಕ್ಕೆ ಹಿಂದಿರುಗಿ ಬದುಕಿನ ಬಂಡಿ ಸಾಗಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಮಧ್ಯಾಹ್ನ ಗ್ರಾಮದಲ್ಲಿದ್ದ ರಮೇಶ ಅವರ ಮನೆಗೆ ಏಕಾಏಕಿ ನುಗ್ಗಿದ ಗಂಗಮ್ಮ ಸಹೋದರಾರದ ರವಿ, ರಮೇಶ ಹಾಗೂ ಶಿವು ರಾಠೋಡ ಸೇರಿಕೊಂಡು ಪ್ರೀತಿಸಿ ಮದುವೆಯಾಗಿದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ರಮೇಶ ಹಾಗೂ ಗಂಗಮ್ಮ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 3 ವರ್ಷದ ಅನಿಲ್ ಹಾಗೂ 2 ತಿಂಗಳ ಹಸುಗೂಸು ಅರ್ಜುನ ಅವರಿಗೆ ಲೋಕದ ಜ್ಞಾನವೂ ಇಲ್ಲ, ಅಂತರ್ಜಾತಿಯ ಮಾಹಿತಿ ಇಲ್ಲ, ಇದೆಲ್ಲಾ ಗೊತ್ತಾಗುವ ಮೊದಲೇ ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದು ಘಟನೆಯ ಪರಿವಿಲ್ಲದೆ ರೋದಿಸುತ್ತಿದ್ದದ್ದು ಸ್ಥಳದಲ್ಲಿದ್ದವರ ಕಣ್ಣು ಒದ್ದೆ ಮಾಡಿತ್ತು.

ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಶ್ರೀನಾಥ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್‌ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ