ಮನೆ ಮನೆಗೆ ಕನ್ನಡ ಕೃತಿ ಹೊತ್ತು ಮಾರುವ ಶಿಕ್ಷಕ ಸಂಗಮೇಶ ತಮ್ಮನಗೌಡ

By Kannadaprabha News  |  First Published Nov 6, 2019, 3:26 PM IST

ಮನೆ ಮನೆಗೆ ಕನ್ನಡ ಕೃತಿ ಹೊತ್ತು ಮಾರುವ ಶಿಕ್ಷಕ ಸಂಗಮೇಶ ತಮ್ಮನಗೌಡ | ಮನೆ ಮನೆಗೆ ಹೋಗಿ ಅವರಿಗೆ ಕನ್ನಡ ಕೃತಿಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಅವರಲ್ಲಿ ಕನ್ನಡತನ ಜಾಗೃತಿಗೊಳಿಸಿ, ಕನ್ನಡ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. 


ಕನ್ನಡ ಸಾರಸ್ವತ ಲೋಕದಲ್ಲಿ ಕಾದಂಬರಿಕಾರ ‘ಗಳಗನಾಥರು’ ಯಾರಿಗೆ ತಾನೇ ಗೊತ್ತಿಲ್ಲ ? ಹಾವೇರಿ ಜಿಲ್ಲೆಯ ಗಳಗನಾಥರು (ವೆಂಕಟೇಶ ತಿರಕೋ ಕುಲಕರ್ಣಿ) ಸಾಹಿತಿ ಎನ್ನುವುದಕ್ಕಿಂತ, ಸಾಹಿತ್ಯ ಕೃತಿಗಳನ್ನು ತಲೆಯ ಮೇಲೆ ಹೊತ್ತು, ಊರೂರು ಸುತ್ತಿ ಓದುಗರಿಗೆ ತಲುಪಿಸಿದ ‘ಕನ್ನಡ ಕೈಂಕರ್ಯ’ ಅವರ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿಸಿದೆ.

ಈಗ ಪಕ್ಕದ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲೊಬ್ಬ ಸಾಹಿತಿ ಅದೇ ಮಾದರಿಯಲ್ಲಿ ಕನ್ನಡ ಸೇವೆ ಮಾಡುವ ಮೂಲಕ ‘ಅಭಿನವ ಗಳಗನಾಥರು’ ಎನಿಸಿದ್ದಾರೆ. ಅವರ ಹೆಸರು ಡಾ. ಸಂಗಮೇಶ ತಮ್ಮನಗೌಡರ. ವೃತ್ತಿಯಲ್ಲಿ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರು. ಕವನ, ನಾಟಕ, ಪ್ರವಾಸ ಕಥನ, ಕಾದಂಬರಿ, ಗ್ರಾಮಗಳ ಐತಿಹ್ಯ, ಜಾನಪದ, ಏಕಾಂಕ ನಾಟಕಗಳು ಹೀಗೆ ವಿವಿಧ ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

Tap to resize

Latest Videos

ಬರೋಬ್ಬರಿ 91 ಕೃತಿಗಳನ್ನು ಬರೆದು, ಸ್ವತಃ ಪ್ರಕಟಿಸಿ, ಅವುಗಳನ್ನು ಹೊತ್ತುಕೊಂಡು ಊರು-ಪಟ್ಟಣ ಸುತ್ತಿ ಆಸಕ್ತರಿಗೆ ಮಾರಾಟ ಮಾಡುವ ಮೂಲಕ ಈ ಭಾಗದ ಕನ್ನಡಿಗರು ಗಳಗನಾಥರನ್ನು ಸ್ಮರಿಸುವಂತೆ ಮಾಡಿದ್ದಾರೆ. ಮುಂಡರಗಿ ತಾಲೂಕಿನ ನಾಗರಳ್ಳಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಇವರು. ಪ್ರಸ್ತುತ ಲಕ್ಷ್ಮೇಶ್ವರದಲ್ಲಿ ವಾಸವಾಗಿದ್ದು, ‘ತಿಂಗಳ ಕವಿ ಅಂಗಳ ಮಾತು’, ‘ನಮ್ಮ ಮನೆಯ ಶಾರದೆ’ ಎನ್ನುವ ಹೊಸ ಕಲ್ಪನೆಯನ್ನು ಹುಟ್ಟು ಹಾಕಿ ಜಿಲ್ಲೆಯಲ್ಲಿನ ಲೇಖಕರ ಮನೆ ಮನೆಗೆ ಹೋಗಿ ಅವರಿಗೆ ಕನ್ನಡ ಕೃತಿಗಳನ್ನು ನೀಡುತ್ತಿದ್ದಾರೆ.

ಆ ಮೂಲಕ ಅವರಲ್ಲಿ ಕನ್ನಡತನ ಜಾಗೃತಿಗೊಳಿಸಿ, ಕನ್ನಡ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಕನ್ನಡದ ಸೇವೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಮೀಸಲಾಗದೇ ವರ್ಷವಿಡಿ ಮಿಡಿಯುಂತಾಗಬೇಕು ಎನ್ನುವುದು ಈ ಸಾಹಿತಿಯ ಧ್ಯೇಯ. ಬೇಂದ್ರೆ ಸಾಹಿತ್ಯದ ಗೀಳು: ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತ ಕನ್ನಡದ ಗೀಳು ಹತ್ತಿಸಿಕೊಂಡರು. ಅದರಲ್ಲೂ ಜ್ಞಾನಪೀಠ ಪುರಸ್ಕೃತ ಮೇರು ಸಾಹಿತಿ ಡಾ. ದ.ರಾ. ಬೇಂದ್ರೆಯವರ ಸಾಹಿತ್ಯವನ್ನು ಓದಿಕೊಂಡು 2000 ರಲ್ಲಿ ‘ಡಾ. ದ.ರಾ. ಬೇಂದ್ರ ಸಾಹಿತ್ಯ ವೇದಿಕೆ’ ಹುಟ್ಟು ಹಾಕಿದರು.

ಆ ಮೂಲಕ ಜಿಲ್ಲೆಯ ನೂರಾರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹೋಗಿ ಬೇಂದ್ರೆಯವರ ಕವನ, ನಾಟಕ, ಸಾಹಿತ್ಯ ಪ್ರಚಾರ ಮಾಡುತ್ತ ಬಂದಿದ್ದಾರೆ. ರೋಣ ತಾಲೂಕಿನ ಗುಜಮಾಗಡಿ ಎಂಬ ಪುಟ್ಟ ಗ್ರಾಮದಲ್ಲಿ 1970 ರಲ್ಲಿ ಜನಿಸಿ, ರೋಣ ತಾಲೂಕಿನ ತಿಮ್ಮಾಪುರದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದು, ಗದಗನ ಕೆಎಸ್‌ಎಸ್ ಕಾಲೇಜಿನಲ್ಲಿ ಪದವಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು.

ಡಾ. ತಮ್ಮನಗೌಡರ ಕೊಲ್ಲಾಪುರದ ಕಾಮರಾಜ ವಿಶ್ವವಿದ್ಯಾಲಯಲ್ಲಿ ಕನ್ನಡದಲ್ಲಿ ಸ್ನಾತಕ ಪದವಿ ಪಡೆದು, ನಂತರ ಕನ್ನಡದಲ್ಲಿ ಏಕಾಂಕಗಳು (1975-95) ಎನ್ನುವ ವಿಷಯದ ಮೇಲೆ ಮುಂಬೈ ವಿಶ್ವವಿದ್ಯಾಲಯಲ್ಲಿ ಪಿಎಚ್‌ಡಿ ಪದವಿ ಪಡೆದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡು ತಮ್ಮ ಚಿಕ್ಕ ಸಂಸಾರದ ಜತೆಯಲ್ಲಿ ವಿವಿಧ ವಿಷಯಗಳಲ್ಲಿ 91 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳನ್ನು ಮುದ್ರಣ ಮಾಡಿ ರಜಾ ದಿನಗಳಲ್ಲಿ ಆಸಕ್ತರ ಮನೆ ಮನೆಗೆ ಹೊತ್ತುಕೊಂಡು ಹೋಗಿ ಮಾರಾಟ ಮಾಡುವ ಮೂಲಕ ‘ಅಭಿನವ ಗಳಗನಾಥರು’ ಎನಿಸಿದ್ದಾರೆ.

ಡಾ. ತಮ್ಮನಗೌಡರ ಅವರ ಸಾಹಿತ್ಯ ಸೇವೆಯನ್ನು ನೋಡಿ 1999 ರಲ್ಲಿ ಗೊರೂರು ಸಾಹಿತ್ಯ ಪ್ರಶಸ್ತಿ, 2007 ರಲ್ಲಿ ಚನ್ನಬಸಪ್ಪ ಕಲಕೋಟಿ ದತ್ತಿ ಬಹುಮಾನ, 2012 ರಲ್ಲಿ ಆಜೂರು ಪ್ರತಿಷ್ಠಾನ ಪ್ರಶಸ್ತಿ ಲಭಿಸಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 2 ವರ್ಷ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

- ಅಶೋಕ ಸೊರಟೂರ 

click me!